ಬೆಂಗಳೂರು,ಅ.8- 108 ಆ್ಯಂಬುಲೆನ್ಸ್ ಚಾಲಕರ ಸಮಸ್ಯೆ ಶೀಘ್ರವೇ ಇತ್ಯರ್ಥವಾಗಲಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಆ್ಯಂಬುಲೆನ್ಸ್ ಚಾಲಕರ ಪ್ರತಿಭಟನೆ ಬಗ್ಗೆ ಆರೋಗ್ಯ ಇಲಾಖೆ ಸಂಬಂಧ ಪಟ್ಟವರೊಂದಿಗೆ ಈಗಾಗಲೇ ಚರ್ಚೆ ನಡೆಸಿದೆ.
ಸರ್ಕಾರ ಈಗಾಗಲೇ ಆ ಸಂಸ್ಥೆಗೆ ಹಣ ಪಾವತಿ ಮಾಡಿದ್ದರೂ ಆ ಸಂಸ್ಥೆ ಚಾಲಕರಿಗೆ ವೇತನ ಪಾವತಿ ಮಾಡಿಲ್ಲ. ಹೀಗಾಗಿ ಸಮಸ್ಯೆಯಾಗಿದೆ ಎಂದು ಹೇಳಿದರು. ಬೌರಿಂಗ್ ಆಸ್ಪತ್ರೆ ಬೆಂಗಳೂರು ಕೇಂದ್ರ ಭಾಗದಲ್ಲಿದ್ದು, ಆರೋಗ್ಯ ಸಂಜೀವಿನಿಯಾಗಿ ಕೆಲಸ ಮಾಡುತ್ತಿದೆ ಎಂದು ನ್ಯಾಯಮೂರ್ತಿ ವೀರಪ್ಪ ಅವರು ಬೌರಿಂಗ್ ಆಸ್ಪತ್ರೆಯ ಅವ್ಯವಸ್ಥೆಯ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಬಗ್ಗೆ ಸಚಿವರು ಪ್ರತಿಕ್ರಿಯಿಸಿದರು.
ಆಸ್ಪತ್ರೆಯ ಕಟ್ಟಡ ಬಹಳಷ್ಟು ಹಳೆಯದಾಗಿದ್ದರೂ ಗುಣಮಟ್ಟದ ಆಸ್ಪತ್ರೆಯಾಗಿದೆ. ಸರ್ಕಾರ 500 ಹಾಸಿಗೆ ಸಾಮಥ್ರ್ಯಕ್ಕೆ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುತ್ತಿದೆ. ಕೋವಿಡ್ ಸಂದರ್ಭದಲ್ಲೂ ಕೂಡ ಹಾಸಿಗೆ ಸಾಮಥ್ರ್ಯವನ್ನು ಹೆಚ್ಚಳ ಮಾಡಲಾಗಿತ್ತು ಎಂದರು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೀಸಲಾತಿ ಹೆಚ್ಚಳ ಮಾಡುವ ಬಗ್ಗೆ ಮುಖ್ಯಮಂತ್ರಿಗಳು ರಾಜಕೀಯ ಇಚ್ಛಾಶಕ್ತಿ ಪ್ರದರ್ಶನ ಮಾಡಿದ್ದಾರೆ. ಸಾಮಾಜಿಕ ಕಳಕಳಿ ತೋರಿಸಿದ್ದಾರೆ. ಮೀಸಲಾತಿ ಹೆಚ್ಚಳಕ್ಕೆ ಸಂಬಂಧಿಸಿದಂತೆ ಬೇರೆ ಸಮುದಾಯದ ಒತ್ತಡ, ತಾಂತ್ರಿಕ ಸಮಸ್ಯೆ ಇದ್ದರೂ ಅದೆಲ್ಲದಕ್ಕೂ ಸರ್ಕಾರ ಸಿದ್ದವಾಗಿದೆ. ಸರ್ವ ಪಕ್ಷಗಳ ನಾಯಕರ ಅಭಿಪ್ರಾಯ ಪಡೆದೇ ಮುಖ್ಯಮಂತ್ರಿ ತೀರ್ಮಾನ ಮಾಡಿದ್ದಾರೆ ಎಂದು ಹೇಳಿದರು.