ಬೆಂಗಳೂರು,ಅ.8- ಲೈಸೆನ್ಸ್ ನೀಡುವಾಗ ಸಾರಿಗೆ ಇಲಾಖೆ ನೀಡಿರುವ ಷರತ್ತು ಉಲ್ಲಂಘಿಸಿರುವ ಓಲಾ-ಊಬರ್ ವಾಹನಗಳನ್ನು ಸೀಜ್ ಮಾಡಲು ಆದೇಶ ನೀಡ ಲಾಗಿದೆ ಎಂದು ಸಾರಿಗೆ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವ ಬಿ.ಶ್ರೀರಾಮುಲು ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿಯಮ ಉಲ್ಲಂಘಿಸಿ ಪ್ರಯಾಣಿಕರಿಂದ ದುಬಾರಿ ದರ ವಸೂಲಿ ಮಾಡುತ್ತಿರುವ ವಾಹಗಳನ್ನು ಸೀಜ್ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು. ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಬಂದ ಹಿನ್ನೆಲೆಯಲ್ಲಿ ದುಬಾರಿ ದರ ವಿಧಿಸುತ್ತಿರುವ ಬಗ್ಗೆ ನೋಟಿಸ್ ನೀಡಲಾಗಿದೆ. ನೋಟಿಸ್‍ಗೆ ಆ ಸಂಸ್ಥೆಗಳಿಂದ ಉತ್ತರ ಪಡೆದು ಒಂದೆರಡು ದಿನದಲ್ಲಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ಪ್ರಯಾಣಿಕರು ಹಾಗೂ ಸಾರ್ವಜನಿಕರಿಗೆ ತೊಂದರೆಯಾಗದಂತೆ ಸೇವೆ ಒದಗಿಸಲು ಓಲಾ ಮತ್ತು ಊಬರ್ ಸಂಸ್ಥೆಗಳಿಗೆ ಲೈಸೆನ್ಸ್ ನೀಡಲಾಗಿತ್ತು. ಲೈಸೆನ್ಸ್ ನೀಡುವ ಸಂದರ್ಭದಲ್ಲಿ ಸಾರಿಗೆ ಇಲಾಖೆಯ ನಿಯಮಗಳು ಉಲ್ಲಂಘನೆಯಾಗಬಾರದು ಎಂಬ ಷರತ್ತು ವಿಧಿಸಲಾಗಿತ್ತು. ಆದರೂ ಪ್ರತಿ ವರ್ಷ ಪ್ರಯಾಣಿಕರು ಹಾಗೂ ಸಾರ್ವಜನಿಕರಿಂದ ದೂರುಗಳು ಬರುತ್ತಿವೆ. ದೂರು ಮತ್ತು ನೋಟಿಸ್‍ಗೆ ಆ ಸಂಸ್ಥೆಗಳು ನೀಡುವ ಉತ್ತರ ಪರಿಶೀಲಿಸಿದ ನಂತರ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದರು.
# ಮೀಸಲಾತಿ ಹೆಚ್ಚಳಕ್ಕೆ ತೊಡಕಾಗುವುದಿಲ್ಲ:
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೀಸಲಾತಿ ಹೆಚ್ಚಳಕ್ಕೆ ಯಾವುದೇ ರೀತಿಯ ತೊಡಕಾಗುವುದಿಲ್ಲ. ಹಾಗೆ ಯಾವುದೇ ಸಮುದಾಯಕ್ಕೆ ಈಗಿರುವ ಮೀಸಲಾತಿ ಪ್ರಮಾಣದಲ್ಲಿ ಶೇ.1ರಷ್ಟು ಕಡಿಮೆ ಮಾಡುವುದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.
ರಾಜ್ಯ ಸರ್ಕಾರ ಮೀಸಲಾತಿ ಹೆಚ್ಚಳ ಮಾಡಿ ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಟ್ಟಾಗ ಒಪ್ಪಿಗೆ ದೊರೆಯುವ ವಿಶ್ವಾಸವಿದೆ. ಎಸ್ಸಿ-ಎಸ್ಟಿ ವಿಚಾರದಲ್ಲಿ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿರುವ ನಿದರ್ಶನಗಳಿವೆ. ಹೀಗಾಗಿ ಯಾವುದೇ ರೀತಿಯ ತೊಡಕಾಗುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈಗಾಗಲೇ ತಮಿಳುನಾಡಿನಲ್ಲಿ ಶೇ.69, ಮಹಾರಾಷ್ಟ್ರದಲ್ಲಿ ಶೇ.68, ಮಧ್ಯಪ್ರದೇಶದಲ್ಲಿ ಶೇ.73, ರಾಜಸ್ಥಾನದಲ್ಲಿ ಶೇ.64, ಜಾರ್ಖಂಡ್‍ನಲ್ಲಿ ಶೇ.70, ಉತ್ತರಪ್ರದೇಶದಲ್ಲಿ ಶೇ.60ರಷ್ಟು ಮೀಸಲಾತಿ ಪ್ರಮಾಣವಿದ್ದು, ತೆಲಾಂಗಣ ಸರ್ಕಾರವೂ ಶೇ.10ರಷ್ಟು ಮೀಸಲಾತಿ ಪ್ರಮಾಣ ಹೆಚ್ಚಿಸಿದೆ. ಹೀಗಾಗಿ ರಾಜ್ಯದಲ್ಲಿ ಮೀಸಲಾತಿ ಶೇ.50ರ ಗಡಿ ದಾಟುವುದರಿಂದ ಕಾನೂನಿನ ತೊಡಕಾಗಲಿದೆ ಎಂಬ ಆತಂಕ ಬೇಡ ಎಂದು ಸ್ಪಷ್ಟಪಡಿಸಿದರು.