ಬೆಳಗಾವಿ,ಅ.8- ಸುಳೇಬಾವಿ ಗ್ರಾಮದಲ್ಲಿ ಎರಡು ಗುಂಪುಗಳ ನಡುವೆ ಗಲಾಟೆ ನಡೆದ ಸಂದರ್ಭದಲ್ಲಿ ಇಬ್ಬರು ಯುವಕರು ಹತ್ಯೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯಲೋಪ ಆರೋಪದಡಿ ಇಬ್ಬರು ಪೊಲೀಸ್ ಸಿಬ್ಬಂದಿಯನ್ನು ಅಮಾನತು ಮಾಡಿ ಬೆಳಗಾವಿ ನಗರ ಪೊಲೀಸ್ ಆಯುಕ್ತ ಡಾ.ಬೋರಲಿಂಗಯ್ಯ ಆದೇಶಿಸಿದ್ದಾರೆ.
ಮಾರಿಹಾಳ ಠಾಣೆಯ ಹೆಡ್‍ಕಾನ್‍ಸ್ಟೆಬಲ್ ಬಿ.ಎಸ್.ಬಳಗಣ್ಣವರ್ ಮತ್ತು ಪೊಲೀಸ್ ಸಿಬ್ಬಂದಿ ಎಸ್.ಆರ್.ತಳೇವಾಡೆ ಅಮಾನತುಗೊಂಡವರು. ಅ.6ರಂದು ರಾತ್ರಿ ಮಾರಿಹಾಳ ಠಾಣೆ ವ್ಯಾಪ್ತಿಯ ಸುಳೇಬಾವಿ ಗ್ರಾಮದಲ್ಲಿ ಎರಡು ಗುಂಪುಗಳ ನಡುವೆ ಗಲಾಟೆ ನಡೆದು ಮಾರಾಮಾರಿ ಉಂಟಾಗಿತ್ತು.
ಆ ಸಂದರ್ಭದಲ್ಲಿ ಮಹೇಶ್ ಮತ್ತು ಪ್ರಕಾಶ್ ಎಂಬುವರ ಹತ್ಯೆಯಾಗಿತ್ತು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ನಗರ ಪೊಲೀಸ್ ಆಯುಕ್ತ ಡಾ.ಬೋರಲಿಂಗಯ್ಯ ಅವರು ವರದಿ ತರಿಸಿಕೊಂಡು ಪರಿಶೀಲಿಸಿದಾಗ ಪೊಲೀಸರ ಕರ್ತವ್ಯಲೋಪ ಕಂಡುಬಂದಿದೆ.
ಅಂದು ಗ್ಯಾಂಗ್‍ವಾರ್ ಬಗ್ಗೆ ಪೊಲೀಸರಿಗೆ ಮಾಹಿತಿ ಇದ್ದರೂ ಸಹ ಹಿರಿಯ ಅಧಿಕಾರಿಗಳ ಗಮನಕ್ಕೆ ತಾರದೆ ನಿರ್ಲಕ್ಷ್ಯವಹಿಸಿರುವ ಆರೋಪದಡಿ ಇಬ್ಬರು ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಿ ಆಯುಕ್ತರಾದ ಡಾ.ಬೋರಲಿಂಗಯ್ಯ ಆದೇಶಿಸಿದ್ದಾರೆ.