ಒಗ್ಗಟ್ಟು ಪ್ರದರ್ಶಿಸಿದ ನಾಯಕರು, ತುಮಕೂರಿನಲ್ಲಿ ರಾಹುಲ್ ಸಂಚಲನ

Social Share

ತುಮಕೂರು, ಅ.8- ದೇಶದ ಗಂಭೀರ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್‍ಗಾಂಧಿ ನಡೆಸುತ್ತಿರುವ ಭಾರತ ಐಕ್ಯತಾ ಯಾತ್ರೆ ಇಂದು ಕಲ್ಪತರು ನಾಡು ತುಮಕೂರನ್ನು ಪ್ರವೇಶಿಸಿದೆ.

ಇಂದು ಬೆಳಗ್ಗೆ ತುರುವೇಕೆರೆ ತಾಲ್ಲೂಕು ಮಾಯಸಂದ್ರದಿಂದ ಪಾದಯಾತ್ರೆ ಆರಂಭವಾಯಿತು. ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‍ಸಿಂಗ್ ಸುರ್ಜೇವಾಲ, ಕೆ.ಸಿ.ವೇಣುಗೋಪಾಲ್, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಜೆಡಿಎಸ್‍ನ ಉಚ್ಚಾಟಿತ ಶಾಸಕ ಎಸ್.ಆರ್.ಶ್ರೀನಿವಾಸ್, ಮಾಜಿ ಶಾಸಕರಾದ ರಫಿಕ್ ಅಹಮದ್, ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಯು.ಟಿ.ಖಾದರ್, ಬೇಮೆಲ್ ಕಾಂತರಾಜು ಸೇರಿದಂತೆ ಅನೇಕರು ರಾಹುಲ್‍ಗಾಂಧಿ ಅವರ ಜೊತೆ ಹೆಜ್ಜೆ ಹಾಕಿದರು.

ವಿಧಾನ ಪರಿಷತ್ ಸ್ಥಾನ ಸಿಗದ ಹಿನ್ನೆಲೆಯದಲ್ಲಿ ಅಸಮದಾನಗೊಂಡು ಪಕ್ಷದ ವಿರುದ್ಧ ಬಂಡಾಯ ಸಾರಿ ಬೆಂಬಲಿಗರ ಸಭೆ ನಡೆಸಿದ್ದ ಮಾಜಿ ಸಚಿವ ಎಂ.ಆರ್.ಸೀತಾರಾಂ ಒಬ್ಬಂತ್ತು ದಿನಗಳ ಬಳಿಕ ಪಾದಯಾತ್ರೆಯಲ್ಲಿ ಕಾಣಿಸಿಕೊಂಡರು.

ಮುಂಜಾನೆ ಹೆಡ್ಡನಕಟ್ಟೆಯಲ್ಲಿ ಕಾಂಗ್ರೆಸ್ ಮುಖಂಡ ಸುರೇಶ್ ಎಂಬುವರ ಮನೆಯಲ್ಲಿ ಟೀ ಬ್ರೇಕ್ ಮೂಲಕ ವಿಶ್ರಾಂತಿ ಪಡೆದ ರಾಹುಲ್‍ಗಾಂಧಿ ಮತ್ತವರ ತಂಡ 13 ಕಿಲೋ ಮೀಟರ್ ನಡೆದು ಹರಳಿಕೇರಿಪಾಳ್ಯ ತಲುಪಿತ್ತು.
ಇಂದು ರಾಜರಾಜೇಶ್ವರಿನಗರ, ಕುಣಿಗಲ್, ಹೆಬ್ಬಾಳ, ಸರ್ವಜ್ಞನಗರ, ಬೇಲೂರು, ಸಕಲೇಶಪುರ, ಬಂಗಾರಪೇಟೆ, ಕುಂದಾಪುರ, ಉಡುಪಿ, ಕಾಪು, ಕಾರ್ಕಳ ಸೇರಿ 12 ಕ್ಷೇತ್ರಗಳ ಕಾರ್ಯಕರ್ತರು ಭಾಗವಹಿಸಿದ್ದರು.

ಎಂದಿನಂತೆ ದಾರಿಯುದ್ಧಕ್ಕೂ ಹಲವು ವಿಶೇಷತೆಗಳಿಗೆ ಪಾದಯಾತ್ರೆ ಕಾರಣವಾಗಿತ್ತು. ಗಾಂಧಿವೇಶದಾರಿಯೊಬ್ಬ ಪಾದಯಾತ್ರೆಯಲ್ಲಿ ನಡೆಯಲು ತಮಗೆ ಪೊಲೀಸರು ಅವಕಾಶ ನೀಡುತ್ತಿಲ್ಲ ಎಂದು ಅಸಮದಾನ ವ್ಯಕ್ತ ಪಡಿಸಿದರು. ನಾನು ಮೊದಲಿನಿಂದಲೂ ಯಾತ್ರೆಯಲ್ಲಿ ಭಾಗವಹಿಸಿದ್ದೇನೆ. ಈಗ ಭದ್ರತೆಯ ಕಾರಣಕ್ಕೆ ಪೊಲೀಸರು ದೂರು ತಳ್ಳುತ್ತಿದ್ದಾರೆ ಎಂದು ಅಳಲು ತೋಡಿಕೊಂಡಾಗ ಸ್ಥಳೀಯ ನಾಯಕರು ಮಧ್ಯ ಪ್ರವೇಶಿಸಿ ಅವರಿಗೆ ಯಾತ್ರೆಯಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಟ್ಟರು.

ದಲಿತ ಸಂಘರ್ಷ ಸಮಿತಿಯ ಕಾರ್ಯಕರ್ತರು ಸ್ವಲ್ಪ ದೂರು ಹೆಜ್ಜೆ ಹಾಕಿದರು. ಅವರಲ್ಲಿ ಕೆಲವರು ರಾಹುಲ್‍ಗಾಂಧಿ ಅವರನ್ನು ಭೇಟಿ ಮಾಡಲು ಯತ್ನಿಸಿದರಾದರೂ ಭದ್ರತಾ ಸಿಬ್ಬಂದಿ ಅವಕಾಶ ನೀಡಿರಲಿಲ್ಲ. ಪರಮೇಶ್ವರ್ ಮಧ್ಯ ಪ್ರವೇಶಿಸಿ ದಲಿತ ನಾಯಕರನ್ನು ರಾಹುಲ್‍ಗಾಂಧಿ ಭೇಟಿ ಮಾಡಲು ಅವಕಾಶ ಮಾಡಿಕೊಟ್ಟರು. ಶೈನಿಂಗ್ ಬುದ್ಧನ ಪ್ರತಿಮೆಯೊಂದನ್ನು ದಲಿತ ನಾಯಕರು ರಾಹುಲ್‍ಗೆ ಉಡುಗೊರೆ ನೀಡಿದರು. ಅಭಿಮಾನಿಯೊಬ್ಬರು ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರ ಭಾವಚಿತ್ರವನ್ನು ಉಡುಗೊರೆ ನೀಡಿದರು.

Articles You Might Like

Share This Article