ಬೆಂಗಳೂರು,ಅ.9- ಕಾಂಗ್ರೆಸ್‍ನವರು 2016ರಲ್ಲಿ ಅಹಿಂದ ಮುಖವಾಡ ಹಾಕಿ ಮೋಸ ಮಾಡಿದ್ದಾರೆ ಎಂದು ಸಾರಿಗೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಬಿ.ಶ್ರೀರಾಮುಲು ತಿಳಿಸಿದರು. ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವಿಧಾನಸೌಧದ ಮುಂಭಾಗದ ಮೆಟ್ಟಿಲುಗಳ ಮೇಲೆ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಹಾಗೂ ಮಹರ್ಷಿ ವಾಲ್ಮೀಕಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಕಾಂಗ್ರೆಸ್ ಅಕಾರದಲ್ಲಿದಾಗಲೇ ಎಸ್ಸಿ-ಎಸ್ಟಿ ಸಮುದಾಯದವರಿಗೆ ಮೀಸಲಾತಿ ಹೆಚ್ಚಿಸಬಹುದಿತ್ತು. ಆದರೆ ಆ ಕೆಲಸವನ್ನು ಕಾಂಗ್ರೆಸ್ ಮಾಡಲಿಲ್ಲ ಎಂದು ಟೀಕಿಸಿದರು. ನಾ ಭೂತೋ ನಾ ಭವಿಷ್ಯತಿ ಎಂಬಂತೆ ಸಮುದಾಯದ ಎರಡು ಕೋಟಿ ಜನರು ಒಮ್ಮೆ ಎದ್ದು ನಿಂತರೆ ಧೂಳಿಪಟ ಆಗುತ್ತದೆ ಎಂದು ಗುಡುಗಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಮಠಾೀಶರ ಕೃಪೆಯಿಂದ ನಾವು ಇಂದು ಇಲ್ಲಿ ನಿಂತಿದ್ದೇವೆ. 2023ರಲ್ಲಿ ವಾಲ್ಮೀಕಿ ಸಮುದಾಯದವರ ಮತ ಡಬ್ಬಿ ಒಡೆದು ಹೋಗುವತನಕ ಮತ ಹಾಕಬೇಕು ಎಂದು ಮನವಿ ಮಾಡಿದರು.
ಬೊಮ್ಮಾಯಿ ಅವರದ್ದು ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು. ಅವರಿಗೆ ಜಗತ್ತನ್ನು ಗ್ರಹಿಸುವ ಶಕ್ತಿ ಇದೆ. ಪರಿಶಿಷ್ಟ ಸಮುದಾಯದವರು ಇಂದು ವಿಧಾನಸೌಧ ಮೆಟ್ಟಿಲು ನಿಲ್ಲಲು ಸಾಧ್ಯವಿತ್ತೇ? ಎಂದು ಪ್ರಶ್ನಿಸಿದರು.
ಇವತ್ತಿನ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಬಂಗಾರದ ಅಕ್ಷರದಲ್ಲಿ ಬರೆದಿಡಬೇಕು. ಇದು ಐತಿಹಾಸಿಕ ದಿನವಾಗಿದೆ. ಮುಖ್ಯಮಂತ್ರಿಗಳು ದಲಿತ ಸಮುದಾಯಕ್ಕೆ ನ್ಯಾಯ ಕೊಟ್ಟಿದ್ದಾರೆ ಎಂದು ಗುಣಗಾನ ಮಾಡಿದರು.
ಬಿಜೆಪಿಯ ಶ್ರೀ ರಾಮುಲು ಕೊಟ್ಟ ಮಾತಿಗೆ ಬದ್ಧನಾಗಿದ್ದೇನೆ ಅಂದಿದ್ದೆ. ನನ್ನನ್ನು ಗೇಲಿ ಮಾಡಿದರು, ತಮಾಷೆ ಮಾಡಿದರು. ಆದರೆ ನಾನು ತಾಳ್ಮೆಯಿಂದ ಇದ್ದೆ. ನನ್ನ ಸರ್ಕಾರ ನುಡಿದಂತೆ ನಡೆಯುವ ಸರ್ಕಾರವಾಗಿದೆ ಎಂದು ಸಮರ್ಥಿಸಿಕೊಂಡರು.
ಶಾಸಕ ರಾಜುಗೌಡ ಮಾತನಾಡಿ, ಎಸ್ಸಿ-ಎಸ್ಟಿ ಸಮುದಾಯಕ್ಕೆ ಮೀಸಲಾತಿ ಹೆಚ್ಚು ಮಾಡಿದ ಗಂಡುಗಲಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಶ್ಲಾಘಿಸಿದರು. ಜೇನುಗೂಡಿಗೆ ಕೈ ಹಾಕಿ ಕಚ್ಚಿಸಿಕೊಂಡು ಜೇನುತುಪ್ಪವನ್ನು ತಮಗೆ ತಿನಿಸುವ ಕೆಲಸವನ್ನು ಮುಖ್ಯಮಂತ್ರಿ ಮಾಡಿದ್ದಾರೆ. ನಾವು ಸೈನಿಕರು. ಔರಂಗಜೇಬನಿಗೆ ಸೋಲಿನ ಕಹಿ ನೀಡಿದವರು. ಭಾರತೀಯ ಜನತಾ ಪಕ್ಷದ ಪರವಾಗಿ ನಿಲ್ಲುತ್ತೇವೆ. ಬೇಡ ಇಟ್ಟ ಗುರಿ ತಪ್ಪುವುದಿಲ್ಲ. ಮುಂದೆ ನಮ್ಮ ಜನರು ಇರುತ್ತಾರೆ ಎಂದು ಹೇಳಿದರು.