ಕೇವಲ 300 ರೂ. ಪಿಂಚಣಿಗಾಗಿ ತಿಂಗಳಪೂರ್ತಿ ಕಾಯುವ ಅಶಕ್ತ ವಯೋವೃದ್ಧರು

Social Share

ನವದೆಹಲಿ,ಜು.31- ವಾರಾಂತ್ಯ ಮೋಜು ಮಾಡುವವರು ಒಂದು ಸಿನಿಮಾ ಟಿಕೆಟ್‍ಗಾಗಿ, ಕ್ಯಾಪ್ಯೂಸಿನೋಗಾಗಿ ತಲಾ 300 ರೂ. ಖರ್ಚು ಮಾಡುತ್ತಾರೆ. ಆದರೆ ಇದೇ ಮೊತ್ತದ ಪಿಂಚಣಿಗಾಗಿ ತಿಂಗಳು ಪೂರ್ತಿ ಕಾದು ಕುಳಿತುಕೊಳ್ಳುವವರು ಲಕ್ಷಾಂತರ ಅಶಕ್ತರು, ವಯೋವೃದ್ಧರು ದೇಶದಲ್ಲಿದ್ದಾರೆ.

ಇಂದಿರಾ ಗಾಂಧಿ ರಾಷ್ಟ್ರೀಯ ವಯೋವೃದ್ದ ಪಿಂಚಣಿ, ಇಂದಿರಾಗಾಂಧಿ ರಾಷ್ಟ್ರೀಯ ವಿಧವಾ ವೇತನ ಮತ್ತು ರಾಷ್ಟ್ರೀಯ ವಿಕಲಚೇತನರ ಪಿಂಚಣಿಯಡಿ ಮಾಸಿಕ 300 ರೂ.ಗಳನ್ನು ನೀಡಲಾಗುತ್ತಿದೆ. 2012ರ ಮೊದಲು ಇದು 200 ರೂ.ಗಳಿತ್ತು. 100 ರೂ. ಹೆಚ್ಚಳದ ಬಳಿಕ ಈಗ 300 ರೂ.ಗಳಾಗಿವೆ. 10 ವರ್ಷಗಳಾದರೂ ಇದು ಪರಿಷ್ಕರಣೆಯಾಗಿಲ್ಲ. ಕೇಂದ್ರ ಸರ್ಕಾರ ರಾಷ್ಟ್ರೀಯ ಸಾಮಾಜಿಕ ನೆರವು ಕಾರ್ಯಕ್ರಮ(ಎನ್‍ಎಸ್‍ಎಪಿ)ದಡಿ ಬಡತನ ರೇಖೆಗಿಂತ ಕೆಳಗಿರುವ ಕುಟುಂಬದವರಿಗೆ ಪಿಂಚಣಿ ಸೌಲಭ್ಯ ನೀಡುತ್ತಿದೆ.

ಪ್ರಸ್ತುತ ಹಣದುಬ್ಬರ ಮತ್ತು ಬೆಲೆ ಏರಿಕೆಗಳಲ್ಲಿ 300 ರೂ.ಗೆ ದವಸ-ಧಾನ್ಯ ಖರೀದಿಸುವುದು ಸಾಧ್ಯವಾಗುತ್ತಿಲ್ಲ. ಆದರೂ ಕೆಲವು ಕುಟುಂಬಗಳಿಗೆ ಇದೇ ಆದಾಯದ ಮೂಲವಾಗಿದೆ. 70 ವರ್ಷದ ಹಿರಿದೇವಿ ಪಾಶ್ರ್ವವಾಯು ಪೀಡಿತರಾಗಿ 10 ವರ್ಷಗಳಿಂದ ಹಾಸಿಗೆ ಹಿಡಿದಿದ್ದಾರೆ. ಕೇಂದ್ರ ಸರ್ಕಾರ ನೀಡುವ ಪಿಂಚಣಿ ಆಕೆಯ ಒಂದು ವಾರದ ಪರಿಕರ ಖರೀದಿಗೆ ಸಹಾಯವಾಗಿದೆ. ಆಕೆಯ ಗಂಡ ವಯೋವೃದ್ಧ ಪಿಂಚಣಿ ಪಡೆಯುತ್ತಿದ್ದು, ಆಗೋಹೀಗೋ ಕಷ್ಟಪಟ್ಟು ಜೀವನ ನಡೆಸುತ್ತಿದ್ದಾರೆ.

72 ವರ್ಷದ ಲಾಲ್‍ರಾಮ್ ಅವರು ಕೂಡ ಪಾಶ್ರ್ವವಾಯುಗೆ ತುತ್ತಾಗಿದ್ದು ಮಾತನಾಡುವ ಸಾಮಥ್ರ್ಯ ಹೊಂದಿಲ್ಲ. ಅವರ ಸೊಸೆ ಗಂಗಾ ಅವರ ಪ್ರಕಾರ ಇಡೀ ಕುಟುಂಬದ ಮಾಸಿಕ ಆದಾಯ ಪಿಂಚಣಿ ಸೇರಿದಂತೆ 2000 ರೂ.ಗಳು. ಆರು ಜನರ ಕುಟುಂಬ ನಿರ್ವಹಣೆ ಇದರಿಂದ ಕಷ್ಟಸಾಧ್ಯವಾಗಿದೆ.

ದೇಶದಲ್ಲಿ ಸುಮಾರು 3 ಕೋಟಿ ಜನರು ಎನ್‍ಎಸ್‍ಎಪಿಯ ಫಲಾನುಭವಿಗಳಾಗಿದ್ದಾರೆ. ಇವರಿಗೆ ಪಿಂಚಣಿ ಹೊರತುಪಡಿಸಿ ಬೇರೆ ಆದಾಯವಿಲ್ಲ. ಆದ್ದರಿಂದ ಪಿಂಚಣಿಯನ್ನು 5000 ರೂ.ಗೆ ಹೆಚ್ಚಿಸಬೇಕು ಎಂದು ಬೇಡಿಕೆ ಕೇಳಿಬಂದಿದೆ. ಕೆಲವು ರಾಜ್ಯಗಳಲ್ಲಿ ಸ್ಥಳೀಯ ಸರ್ಕಾರಗಳು ಕೇಂದ್ರದ ಪಿಂಚಣಿ ಯೋಜನೆಗೆ ತಮ್ಮ ನೆರವನ್ನು ಸೇರಿಸಿ ಸಹಾಯ ಮಾಡುತ್ತಿವೆ. ಆದರೆ ಬಹಳಷ್ಟು ಪ್ರದೇಶಗಳಲ್ಲಿ ಕೇಂದ್ರ ಸರ್ಕಾರದ ಪಿಂಚಣಿಯೇ ಆದಾಯ ಮೂಲವಾಗಿದೆ.

ಕೇಂದ್ರ ಸರ್ಕಾರದ ಮೂಲಗಳ ಪ್ರಕಾರ ಎನ್‍ಎಸ್‍ಎಪಿ ಯೋಜನೆಗಾಗಿ ವಾರ್ಷಿಕ 3500 ಕೋಟಿ ರೂ.ಗಳನ್ನು ಖರ್ಚು ಮಾಡಲಾಗುತ್ತಿದೆ. ಅಶಕ್ತರು ಮತ್ತು ದುಡಿಮೆಯ ಸಾಮಥ್ರ್ಯ ಇಲ್ಲದವರಿಗೆ ಘನತೆಯುತ ಜೀವನ ಕಲ್ಪಿಸಿಕೊಡುವುದು ನಾಗರಿಕ ಸಮಾಜದ ಜವಾಬ್ದಾರಿ ಹೀಗಾಗಿ ಅವರ ಪಿಂಚಣಿಯನ್ನು ಏರಿಕೆ ಮಾಡಬೇಕು. ಮಧ್ಯವರ್ತಿಗಳ ಹಾವಳಿಯಿಲ್ಲದೆ ಫಲಾನುಭವಿಗಳಿಗೆ ನೇರವಾಗಿ ಸವಲತ್ತುಗಳು ದೊರೆಯಬೇಕೆಂಬ ಆಗ್ರಹ ಕೇಳಿಬಂದಿದೆ.

Articles You Might Like

Share This Article