ಕೈಗಾರಿಕಾ ಸುಧಾರಣೆಗೆ ಶೆಟ್ಟರ್ ಸಲಹೆ ಪಡೆಯುವೆ : ಸಚಿವ ನಿರಾಣಿ

Social Share

ಬೆಂಗಳೂರು,ಅ.8- ಪಕ್ಷದ ಹಿರಿಯರು ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಜಗದೀಶ್ ಶೆಟ್ಟರ್ ಅವರ ಸಲಹೆ ಪಡೆದು ಕೈಗಾರಿಗಾ ವಲಯದಲ್ಲಿ ಸುಧಾರಣೆ ತರಲು ತಾವು ಬದ್ದರಾಗಿದ್ದೇವೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಹೇಳಿದ್ದಾರೆ.

ಕರ್ನಾಟಕ ಈಗಲೂ ಕೈಗಾರಿಕಾ ವಲಯದಲ್ಲಿ ದೇಶದಲ್ಲೇ ಮುಂಚೂಣಿ ರಾಜ್ಯವಾಗಿದೆ. ಜಗದೀಶ್ ಶೆಟ್ಟರ್ ಅವರು ಯಾವ ಅರ್ಥದಲ್ಲಿ ಹೇಳಿದ್ದಾರೆ ಎಂಬುದು ತಮಗೆ ತಿಳಿದಿಲ್ಲ. ಆದರೂ ಅವರ ಹೇಳಿಕೆಯನ್ನು ಸಕಾರಾತ್ಮಕವಾಗಿ ಪರಿಗಣಿಸುತ್ತೇವೆ ಎಂದು ನಿರಾಣಿಯವರು ತಿಳಿಸಿದ್ದಾರೆ.

ಕಳೆದ ನಾಲ್ಕು ತ್ರೈಮಾಸಿಕ ಅವಧಿಯಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಯಲ್ಲಿ ಇಡೀ ದೇಶದಲ್ಲೆ ಅತಿ ಹೆಚ್ಚು ಬಂಡವಾಳ ಹೂಡಿಕೆಯಾಗಿರುವುದು ಕರ್ನಾಟಕದಲ್ಲೇ. ಇದು ರಾಜ್ಯವು ಕೈಗಾರಿಕಾಸ್ನೇಹಿ ಎಂಬುದನ್ನು ತೋರಿಸುತ್ತದೆ. ನಾವು ಬಂಡವಾಳ ಹೂಡಿಕೆ ಮಾಡುವ ಉದ್ಯಮಿಗಳಿಗೆ ನಾವು ಕೊಡುವಂತಹ ಸೌಲಭ್ಯಗಳನ್ನು ದೇಶದ ಯಾವುದೇ ರಾಜ್ಯದಲ್ಲೂ ಕೊಡುವುದಿಲ್ಲ ಎಂದಿದ್ದಾರೆ.

ಜಗದೀಶ್ ಶೆಟ್ಟರ್ ಅವರು ಹಿರಿಯರು. ರಾಜ್ಯದ ಮುಖ್ಯಮಂತ್ರಿಗಳಾಗಿ ವಿವಿಧ ಇಲಾಖೆಗಳ ಸಚಿವರಾಗಿ ಸಮರ್ಪಕವಾಗಿ ನಿರ್ವಹಣೆ ಮಾಡಿದ ಅನುಭವ ಅವರಿಗಿದೆ. ಅವರ ಹೇಳಿಕೆಯನ್ನು ನಾನು ಟೀಕೆ ಎಂದು ಪರಿಗಣಿಸುವುದಿಲ್ಲ. ಅದನ್ನು ಸಕಾರಾತ್ಮಕವಾಗಿ ತೆಗೆದುಕೊಂಡು ಅವರು ಕೊಟ್ಟ ಸಲಹೆಗಳನ್ನು ಪರಿಹರಿಸುವುದಾಗಿ ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದ್ದಾರೆ.

ಇತ್ತೀಚೆಗೆ ತಾವು ಮುಖ್ಯಮಂತ್ರಿಗಳೊಂದಿಗೆ ದಾವೋಸ್‍ಗೆ ಭೇಟಿ ನೀಡಿದ ವೇಳೆ ಕರ್ನಾಟಕದಲ್ಲಿ ಕೈಗಾರಿಕಾ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆಗಿರುವ ಅವಕಾಶಗಳನ್ನು ಮನವರಿಕೆ ಮಾಡಿಕೊಟ್ಟಿದ್ದೆವು. ಇದರ ಪರಿಣಾಮವಾಗಿ ರಾಜ್ಯದಲ್ಲಿ ಸುಮಾರು 52 ಸಾವಿರ ಕೋಟಿಗೂ ಅಧಿಕ ಬಂಡವಾಳ ಹೂಡಿಕೆ ಮಾಡಲು ಉದ್ಯಮಿಗಳು ಮುಂದೆ ಬಂದಿದ್ದಾರೆ ಒಂದು ಲಕ್ಷಕ್ಕೂ ಅಧಿಕ ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ತಿಳಿಸಿದ್ದಾರೆ.

ಬೆಂಗಳೂರು ಮಾತ್ರವಲ್ಲದೆ ರಾಜ್ಯದ 2 ಮತ್ತು 3ನೇ ಹಂತದ ನಗರಗಳಲ್ಲೂ ಉದ್ಯಮಿಗಳು ಬಂಡವಾಳ ಹೂಡಿಕೆ ಮಾಡಲು ಉದ್ಯಮಿಗಳು ಆಸಕ್ತಿ ತೋರಿದ್ದಾರೆ. ಮೈಸೂರು, ಮಂಗಳೂರು, ಹುಬ್ಬಳ್ಳಿ-ಧಾರವಾಡ, ಕಲಬುರಗಿ , ಶಿವಮೊಗ್ಗ, ದಾವಣಗೆರೆ ಹೀಗೆ ಹಲವಾರು ನಗರಗಳಲ್ಲಿ ಬಂಡವಾಳ ಹೂಡಿಕೆ ಮಾಡಲು ವಿಶ್ವದ ಮುಂಚೂಣಿ ಉದ್ಯಮಿಗಳು ಆಸಕ್ತಿ ತೋರಿದ್ದಾರೆ.

ಕರ್ನಾಟಕ ಇಂದು ದೇಶದ ಯಾವುದೇ ರಾಜ್ಯಗಳಿಗೂ ಕಡಿಮೆ ಇಲ್ಲ ಎಂಬಂತೆ ಕೈಗಾರಿಕೆಯಲ್ಲಿ ದಾಪುಗಾಲಿಟ್ಟಿದೆ. ಉದ್ಯಮಿಗಳಿಗೆ ಅಗತ್ಯವಿರುವ ಭೂಮಿ, ನೀರು, ವಿದ್ಯುತ್, ರಸ್ತೆ ಸೇರಿದಂತೆ ವಿಶ್ವ ದರ್ಜೆಯ ಮೂಲಭೂತ ಸೌಲಭ್ಯಗಳನ್ನು ಒದಗಿಸಿಕೊಡುತ್ತಿದ್ದೇವೆ. ಹೀಗೆ ರಾಜ್ಯವನ್ನು ಕೈಗಾರಿಕಾ ಸ್ನೇಹಿ ರಾಜ್ಯವನ್ನಾಗಿಸಲು ನಮ್ಮ ಇಲಾಖೆ ಬದ್ದವಾಗಿದೆ.

ಹಿರಿಯರಾದ ಜಗದೀಶ್ ಶೆಟ್ಟರ್ ಅವರ ಹೇಳಿಕೆಯನ್ನು ಗೌರವಿಸುತ್ತೇನೆ. ಅವರನ್ನು ನೀಡಿರುವ ಸಲಹೆಗಳನ್ನು ಸಕಾರಾತ್ಮಕವಾಗಿ ಪರಿಗಣಿಸಿ ಇಲಾಖೆಯಲ್ಲಿ ಅನುಷ್ಠಾನ ಮಾಡುವುದಾಗಿ ಹೇಳಿದ್ದಾರೆ.

Articles You Might Like

Share This Article