ಬೆಂಗಳೂರು,ಅ.8- ನ್ಯಾಯಮೂರ್ತಿ ನಾಗಮೋಹನ್ ದಾಸ್ ನೇತೃತ್ವದ ಸಮಿತಿ ನೀಡಿರುವ ವರದಿಯ ಶಿಫಾರಸ್ಸಿನಂತೆ ಪರಿಶಿಷ್ಟ ಜಾತಿ ಮೀಸಲಾತಿ ಪ್ರಮಾಣವನ್ನು ಶೇ.15ರಿಂದ 17ಕ್ಕೆ ಹಾಗೂ ಪರಿಶಿಷ್ಟ ಪಂಗಡದ ಮೀಸಲಾತಿ ಪ್ರಮಾಣವನ್ನು ಶೇ.3ರಿಂದ ಶೇ.7ಕ್ಕೆ ಹೆಚ್ಚಳ ಮಾಡಿ ತಕ್ಷಣವೇ ಸರ್ಕಾರದ ಆದೇಶ ಹೊರಡಿಸಲು ಇಂದು ನಡೆದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ, ನ್ಯಾಯಮೂರ್ತಿ ಸದಾಶಿವ ಆಯೋಗದ ಶಿಫಾರಸ್ಸಿನಂತೆ ಒಳಮೀಸಲಾತಿ ಅನುಷ್ಠಾನಗೊಳಿಸುವ ಸಂಬಂಧ ವರದಿಯ ಅಧ್ಯಯನ ನಡೆಸಿ ಸರ್ಕರಕ್ಕೆ ವರದಿ ಸಲ್ಲಿಸಲು ಕಾನೂನು ಸಚಿವರ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟ ಉಪಸಮಿತಿ ರಚಿಸಲಾಗಿದೆ ಎಂದರು.
ನಿನ್ನೆ ನಡೆದ ಸರ್ವಪಕ್ಷಗಳ ನಾಯಕರ ಸಭೆಯಲ್ಲೂ ನ್ಯಾ. ನಾಗಮೋಹನ್‍ದಾಸ್ ನೇತೃತ್ವದ ಸಮಿತಿಯ ವರದಿ ಶಿಫಾರಸ್ಸನ್ನು ಅನುಷ್ಠಾನಗೊಳಿಸಲು ತೀರ್ಮಾನಿಸಲಾಗಿತ್ತು. ಇಂದು ನಡೆದ ವಿಶೇಷ ಸಂಪುಟ ಸಭೆಯಲ್ಲಿ ತಕ್ಷಣವೇ ಮೀಸಲಾತಿ ಹೆಚ್ಚಳದ ಬಗ್ಗೆ ಸರ್ಕಾರದ ಆದೇಶ ಹೊರಡಿಸಿ ಅನುಷ್ಠಾನಗೊಳಿಸುವ ಬಗ್ಗೆ ತೀರ್ಮಾನಿಸಲಾಯಿತು ಎಂದು ಹೇಳಿದರು.
ಒಂದೆರಡು ದಿನದಲ್ಲಿ ಸರ್ಕಾರದ ಆದೇಶ ಹೊರಬೀಳಲಿದ್ದು, ಆ ದೇಶದಲ್ಲಿ ಯಾವ ರೀತಿ ಮೀಸಲಾತಿ ಪ್ರಮಾಣ ಹೆಚ್ಚಳವಾಗಲಿದೆ, ಹೇಗೆ ಮೀಸಲಾತಿ ಅನುಷ್ಠಾನಗೊಳಿಸಬೇಕು ಎಂಬ ಸ್ಪಷ್ಟನೆ ಸಿಗಲಿದೆ. ಎಸ್ಸಿ-ಎಸ್ಟಿ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಲಾಗಿದೆ. ಅಲ್ಲದೆ ಇದಕ್ಕೆ ನ್ಯಾಯಮೂರ್ತಿ ಸುಭಾಷ್ ಆಡಿ ನೇತೃತ್ವದ ಸಮಿತಿ ವರದಿ, ನ್ಯಾಯಮೂರ್ತಿ ನಾಗಮೋಹನದ್ ನೇತೃತ್ವದ ಸಮಿತಿ ವರದಿ, ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿಗಳಿವೆ. ಆದರೆ ಇತರೆ ಹಿಂದುಳಿದ ವರ್ಗಗಳ ಬೇಡಿಕೆಗೆ ಸಂಬಂಧಿಸಿದಂತೆ ಯಾವುದೇ ಅಧ್ಯಯನದ ವರದಿಗಳು, ಆಯೋಗದ ವರದಿಗಳು ಸರ್ಕಾರದ ಮುಂದೆ ಸದ್ಯಕ್ಕಿಲ್ಲ ಎಂದರು.
ಹೀಗಾಗಿ ತಕ್ಷಣಕ್ಕೆ ಎಸ್ಸಿ-ಎಸ್ಟಿ ಮೀಸಲಾತಿ ಹೆಚ್ಚಳಕ್ಕೆ ತೀರ್ಮಾನ ಕೈಗೊಳ್ಳಲಾಗಿದೆ. ಇದರಿಂದ ಶಿಕ್ಷಣ, ನೇಮಕಾತಿಗೆ ಸಂಬಂಧಿಸಿದಂತೆ ಅನುಕೂಲವಾಗಲಿದ್ದು, ಎಸ್ಸಿ-ಎಸ್ಟಿ ಸಮುದಾಯಕ್ಕೆ ಶಕ್ತಿ ತುಂಬುವ ಕೆಲಸವಾಗಿದೆ. ಎಸ್ಸಿಯಲ್ಲಿ 103 ಜಾತಿಗಳು, ಎಸ್ಟಿಯಲ್ಲಿ 56ರಿಂದ 57 ಜಾತಿಗಳಿವೆ. ಇಷ್ಟು ಸಮುದಾಯವನ್ನು ಕಡೆಗಣಿಸುವಂತದ್ದಲ್ಲ ಎಂದು ಹೇಳಿದರು.
ನ್ಯಾಯಮೂರ್ತಿ ನಾಗಮೋಹನ್ ದಾಸ್ ವರದಿಯಲ್ಲಿ ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿಯಂತೆ ಒಳಮೀಸಲಾತಿ ಕಲ್ಪಿಸಬೇಕು ಎಂಬ ಉಲ್ಲೇಖವಿದೆ. ಹೀಗಾಗಿ ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿಯನ್ನು ಮತ್ತೊಮ್ಮೆ ಅವಲೋಕನ ಮಾಡಿ ಒಳಮೀಸಲಾತಿ ಹೇಗೆ ಜಾರಿಗೊಳಿಸಬೇಕು ಎಂಬ ಬಗ್ಗೆ ವರದಿ ನೀಡಲು ಕಾನೂನು ಸಚಿವರ ಅಧ್ಯಕ್ಷತೆಯಲ್ಲಿ ಸಂಪುಟ ಉಪಸಮಿತಿ ರಚಿಸಲು ತೀರ್ಮಾನಿಸಲಾಯಿತು.
ಈಗಾಗಲೇ ಮೀಸಲಾತಿ ಹೆಚ್ಚಳಕ್ಕೆ ಸಂಬಂಧಿಸಿದಂತೆ ಸಾಕಷ್ಟು ಹೋರಾಟುಗಳು ನಡೆದಿವೆ, ಮನವಿಗಳು ಬಂದಿವೆ. ಒಬಿಸಿಗೆ ಸೇರಿಸಬೇಕು, ಎಸ್ಟಿಗೆ ಸೇರಿಸಬೇಕು ಎಂಬ ಮನವಿಗಳಿವೆ. ಈ ಬಗ್ಗೆ ಸಮಗ್ರವಾಗಿ ಚರ್ಚಿಸಿ ಒಟ್ಟು ಮೀಸಲಾತಿ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು.
ಈಗಾಗಲೇ ತಮಿಳುನಾಡಿನಲ್ಲಿ ಸಂವಿಧಾನಕ್ಕೆ ತಿದ್ದುಪಡಿ ತಂದು ಶೇ. 69ರಷ್ಟು ಮೀಸಲಾಗಿ ನೀಡಲಾಗುತ್ತಿದೆ. ನ್ಯಾಯಾಲಯದಲ್ಲಿ ತಡೆಯಾಜ್ಞೆ ತರಬಾರದು ಎಂಬ ಕಾರಣಕ್ಕೆ ಮೀಸಲಾತಿ ಹೆಚ್ಚಳವನ್ನು ಷೆಡ್ಯಲ್ 9ರಡಿ ತರಬೇಕಿದೆ. ಕೆಲವು ರಾಜ್ಯಗಳು ಮೀಸಲಾತಿ ಹೆಚ್ಚಳವನ್ನು ಅನುಷ್ಠಾನ ಮಾಡಿವೆ. ಕೆಲವು ರಾಜ್ಯಗಳು ಮೀಸಲಾತಿ ಹೆಚ್ಚಳಕ್ಕೆ ನಿರ್ಧರಿಸಿವೆ. ಸಂವಿಧಾನದ ಪ್ರಕಾರ ಶೇ.50ರಷ್ಟು ಮಿತಿ ದಾಟಬಾರದು ಎಂಬ ಬಗ್ಗೆ ಸುಪ್ರೀಂಕೋರ್ಟ್ ತೀರ್ಪಿದೆ.
ಒಬಿಸಿ ವಿಚಾರದ ಬಗ್ಗೆಯೂ ಚರ್ಚೆ ಮಾಡಬೇಕಿದೆ. ಹೀಗಾಗಿ ನಾವು ಮಾತು ಕೊಟ್ಟಂತೆ ಎಸ್ಸಿ-ಎಸ್ಟಿ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹೆಚ್ಚಳ ಮಾಡಿ ಅನುಷ್ಠಾನ ಮಾಡುತ್ತಿದ್ದೇವೆ. ಬೇರೆ ಸಮುದಾಯದ ಬೇಡಿಕೆ ಬಗ್ಗೆಯೂ ಚರ್ಚೆ ಮಾಡುತ್ತೇವೆ. ಆದರೆ ಆ ಬೇಡಿಕೆಗಳ ವೈಜ್ಞಾನಿಕ ಅಧ್ಯಯನದ ವರದಿ ಇಲ್ಲ. ವರದಿ ಇಲ್ಲದೆ ಅನುಷ್ಠಾನ ಮಾಡಲಾಗುವುದಿಲ್ಲ ಎಂದರು.
ಮೀಸಲಾತಿ ಪ್ರಮಾಣ ಹೆಚ್ಚಿಸಿರುವುದರಿಂದ ಯಾವ ರೀತಿ ಮೀಸಲಾತಿ ಹೊಂದಾಣಿಕೆ ಮಾಡಬೇಕು ಎಂಬ ಬಗ್ಗೆ ಆದೇಶದಲ್ಲಿ ಸ್ಪಷ್ಟಪಡಿಸಲಾಗುವುದು ಎಂದು ಹೇಳಿದರು.