ಬೆಂಗಳೂರು,ಅ.8- ಎಲ್ಲ ಧರ್ಮಗಳ ಉದ್ದೇಶ ಮಾನವಕುಲದ ಅಭಿವೃದ್ಧಿಯೇ ಆಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಧರ್ಮ ಮನುಷ್ಯನಿಂದ ಮಾನವನ ಕಡೆಗೆ ಹೋಗುವುದೇ ಸ್ವರ್ಗ. ನಮ್ಮ ದೇಶಕ್ಕೆ ಐದು ಸಾವಿರ ವರ್ಷದ ಚರಿತ್ರೆ ಇದೆ. ನಮ್ಮ ಸಂಸ್ಕøತಿ ಪರಂಪರೆಯನ್ನು ಪಾಲಿಸಿದಾಗ ಸಾರ್ಥಕತೆ ಬರುತ್ತದೆ ಎಂದರು.
ರಾಷ್ಟ್ರೀಯ ಬಸವ ಪ್ರತಿಷ್ಠಾನ ವತಿಯಿಂದ ಬೆಂಗಳೂರಿನ ಅರಮನೆ ಮೈದಾನದಲ್ಲಿಂದು ಹಮ್ಮಿಕೊಂಡಿದ್ದ ರಾಷ್ಟ್ರೀಯ ಬಸವ ಪ್ರತಿಷ್ಠಾನದ ಸರ್ವಧರ್ಮ ಸಂಸತ್ – 2022 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಹುಟ್ಟುವಾಗ ನಮಗೆ ಯಾವುದೇ ಧರ್ಮ ಇರುವುದಿಲ್ಲ ಜಗತ್ತು ಬಿಟ್ಟು ಹೋಗುವಾಗಲೂ ಯಾವುದೇ ಧರ್ಮ ಇರುವುದಿಲ್ಲ. ಆದರೆ ಬದುಕಿರುವಾಗ ಹತ್ತು ಹಲವು ಧರ್ಮಗಳ ಜಾತಿಗಳನ್ನು ಪಾಲಿಸುತ್ತೇವೆ. ಇದು ನಾವು ನಡೆದುಕೊಂಡು ಬಂದಿರುವ ವ್ಯವಸ್ಥೆ ಎಂದರು.
ಮನುಷ್ಯ ಒಂಟಿ ಜೀವಿಯಲ್ಲ ಹಿ ಇಸ್ ಎ ಸೊಸಿಯಲ್ ಎಕ್ಸಿಸ್ಟಿಂಗ್ ಎನಿಮಲ್ ಹೀಗಾಗಿ ಆತ ಸಮಾಜದಲ್ಲಿ ಗುಂಪುಗಳಲ್ಲಿ ಬದುಕುತ್ತಾನೆ ಎಂದರು. ಪ್ರತಿಯೊಬ್ಬ ಮನುಷ್ಯನಿಗೆ ಎರಡು ಐಡೆಂಟಿಟಿ ಇದೆ. ನಾನು ಬಸವರಾಜ ಬೊಮ್ಮಾಯಿ ಎನ್ನುವುದು ನನ್ನ ಒಳಗಿರುವ ಐಡೆಂಟಿಟಿ. ಇನ್ನೊಂದು ನನ್ನ ಬಗ್ಗೆ ಹೊರಗಿರುವ ಐಡೆಂಟಿಟಿ. ಇದು ಎಲ್ಲ ದೇಶಗಳಲ್ಲಿ ಇದೆ.
ಬಸವಣ್ಣನವರು ನಮ್ಮ ಎಲ್ಲ ಸಮಸ್ಯೆಗಳಿಗೆ ಒಂದೇ ಲೈನ್ ನಲ್ಲಿ ಪರಿಹಾರ ನೀಡಿದ್ದಾರೆ. ದಯವಿಲ್ಲದ ಧರ್ಮ ಅದಾವುದಯ್ಯಾ ಎಂದಿದ್ದಾರೆ. ಹೇಗೆ ಬದುಕಬೇಕು ಎಂಬುದಕ್ಕೆ ಕಾಯಕವೇ ಕೈಲಾಸ ಎಂದು ಹೇಳಿದ್ದಾರೆ. ಅದನ್ನು ಇಂಗ್ಲಿಷ್‍ನಲ್ಲಿ ವರ್ಕ್ ಇಸ್ ವರ್ಶಿಪ್ ಎಂದಾಗಿದೆ ಎಂದರು.
ಎಲ್ಲಿ ಕಾಯಕ ಇರುತ್ತದೆಯೋ ಅಲ್ಲಿ ಶಾಂತಿ ಇರುತ್ತದೆ. ಶಾಂತಿ ಇದ್ದಲ್ಲಿ ಸಮಾನತೆ ಇರುತ್ತದೆ. ಸಮಾನತೆ ಇದ್ದಲ್ಲಿ ನೆಮ್ಮದಿ ಇರುತ್ತದೆ ಎಂದು ಅವರು ಹೇಳಿದರು. ಎಲ್ಲ ಧರ್ಮಗಳ ಉದ್ದೇಶ ಮಾನವ ಕುಲ ಅಭಿವೃದ್ದಿಯೇ ಆಗಿದೆ. ಧರ್ಮ ಮನುಷ್ಯನಿಂದ ಮಾನವನ ಕಡೆಗೆ ಹೋಗುವುದೇ ಸ್ವರ್ಗ. ನಮ್ಮ ದೇಶಕ್ಕೆ ಐದು ಸಾವಿರ ವರ್ಷದ ಚರಿತ್ರೆ ಇದೆ ಚಾರಿತ್ರ್ಯ ಬೇಕು. ನಮ್ಮ ದೇಶದ ಸಂಸ್ಕೃತಿ, ಪರಂಪರೆ ಏನಿದೆ ಅದನ್ನು ಪಾಲಿಸಿದಾಗ ಸಾರ್ಥಕತೆ ಬರುತ್ತದೆ ಎಂದು ಅಭಿಪ್ರಾಯಪಟ್ಟರು.
ರಾಷ್ಟ್ರೀಯ ಬಸವ ಪ್ರತಿಷ್ಠಾನ ಒಳ್ಳೆಯ ಕೆಲಸ ಮಾಡುತ್ತಿದೆ. ಸಮಾಜದಲ್ಲಿ ಸಂಬಂಧಗಳು ಕಡಿಮೆಯಾಗುತ್ತಿರುವ ಈ ಸಂದರ್ಭದಲ್ಲಿ ಸಂಬಂಧಗಳು ಗಟ್ಟಿಯಾಗುವ ಕೆಲಸ ಮಾಡಬೇಕು ಎಂದರು. ಎಲ್ಲ ಕಾಯಕ ಸಮುದಾಯಗಳು ತುಳಿತಕ್ಕೊಳಗಾದ ಸಮುದಾಯಗಳ ರಕ್ಷಣೆಗೆ ಬಸವಣ್ಣ ತೆಗೆದುಕೊಂಡ ಸಾಮಾಜಿಕ ಕ್ರಾಂತಿ ಈಗ ಮತ್ತೆ ಸಾಮಾಜಿಕ ಸಮಾನತೆಗೆ ಬದಲಾವಣೆಯಾಗಬೇಕಿದೆ ಎಂದು ಹೇಳಿದರು.
ಕಾಕತಾಳೀಯ ಎನ್ನುವಂತೆ ನಿನ್ನೆ ಒಂದು ಮಹತ್ವದ ತೀರ್ಮಾನ ಮಾಡಿದ್ದೇವೆ. ಎಲ್ಲರನ್ನೂ ಮೇಲೆತ್ತುವ ಕೆಲಸ ಮಾಡದಿದ್ದರೂ ಸಮಾನ ಅವಕಾಶ ಕೊಡುವ ಕೆಲಸ ಮಾಡಿದ್ದೇನೆ . ಎಲ್ಲರೂ ಕೂಡು ಎಸ್ಸಿ-ಎಸ್ಟಿ ಸಮುದಾಯಕ್ಕೆ ಮೀಸಲಾತಿ ಹೆಚ್ಚಳ ಮಾಡುವ ತೀರ್ಮಾನ ಮಾಡಿದ್ದೇನೆ. ಎಲ್ಲ ಹಿರಿಯರ ಆಶೀರ್ವಾದದಿಂದ ಐತಿಹಾಸಿಕ ನಿರ್ಧಾರ ತೆಗೆದುಕೊಂಡಿದ್ದೇನೆ ಎಂದರು.
ಸಚಿವ ವಿ. ಸೊಮಣ್ಣ, ಶಾಸಕ ರಾಜುಗೌಡ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಗೋಪಾಲ ಗೌಡ ವಿ, ಹೈಕೋರ್ಟ್ ನ ನಿವೃತ್ತ ನ್ಯಾಯಮೂರ್ತಿಗಳಾದ ನಾಗಮೊಹನ್ ದಾಸ್, ಇಸ್ರೋ ನಿವೃತ್ತ ಅಧ್ಯಕ್ಷ ಡಾ.ಎಸ್ ಕಿರಣ್ ಕುಮಾರ್ , ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಅವಧೂತ ಶ್ರೀ ವಿನಯ್ ಗುರೂಜಿ, ಶ್ರೀ ಮಲಾನಾ ಅಬುಸೂಫಿಯಾನ್ ಮದನಿ, ಚಿಂತಕ ರಂಜನ್ ದರ್ಗಾ, ಚಂದ್ರಶೇಖರ್ ಶಿವಾಚಾರ್ಯ ಮಹಾಸ್ವಾಮಿಗಳು, ಬೆಂಗಳೂರು ಉತ್ತರ ವಿವಿಯ ಕುಲಸಚಿವರಾದ ಡಾಮಿನಿಕ್.ಡಿ ಹಾಗೂ ಬಸವ ಪ್ರತಿಷ್ಠಾನದ ಅಧ್ಯಕ್ಷ ಎಸ್.ಎಮ್ ಸುರೇಶ್ ಉಪಸ್ಥಿತರಿದ್ದರು.