ಬೆಂಗಳೂರು,ಅ.9- ಅವಾಚ್ಯ ಶಬ್ದಗಳಿಂದ ಬೈದು ಧಮ್ಕಿ ಹಾಕಿದ್ದ ರೌಡಿಯನ್ನು ಇಬ್ಬರು ಆಟೋ ಚಾಲಕರು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಬಯ್ಯಪ್ಪನಹಳ್ಳಿಯ ಎನ್‍ಜಿಎಫ್ ವೃತ್ತದ ಬಳಿ ಕಳೆದ ರಾತ್ರಿ ನಡೆದಿದೆ. ಕೃಷ್ಣಯ್ಯನಪಾಳ್ಯ 4ನೇ ಕ್ರಾಸ್‍ನ ನಿವಾಸಿ ರಾಹುಲ್ ಅಲಿಯಾಸ್ ಪಲ್ಲು ಕೊಲೆಯಾದ ರೌಡಿ. ಈತ ಫುಡ್ ಡಿಲವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಎಂದು ಪೊಲೀಸರು ಈ ಸಂಜೆಗೆ ತಿಳಿಸಿದ್ದಾರೆ.
ಘಟನೆ ವಿವರ: ಬಯ್ಯಪ್ಪನಹಳ್ಳಿಯ ಆಟೋ ನಿಲ್ದಾಣದ ಬಳಿ ಬಾಡಿಗೆ ವಿಚಾರದಲ್ಲಿ ರೌಡಿ ರಾಹುಲ್ ಸ್ನೇಹಿತ ಮುರುಗನ್ ಹಾಗೂ ಅರುಣ್, ಸತ್ಯವೇಲು ಜೊತೆ ಜಗಳವಾಗಿತ್ತು. ನಂತರ ಮುರುಗನ್ ತನ್ನ ಸ್ನೇಹಿತ ರಾಹುಲ್ ಭೇಟಿ ಮಾಡಿ ಜಗಳದ ಬಗ್ಗೆ ತಿಳಿಸಿ ಅರುಣ್‍ನ ಮೊಬೈಲ್ ನಂಬರ್‍ನ್ನು ನೀಡಿದ್ದಾನೆ.
ಸ್ವಲ್ಪ ಸಮಯದಲ್ಲೇ ಅರುಣ್‍ಗೆ ಕರೆ ಮಾಡಿದ ರಾಹುಲ್ ಆತನ ತಾಯಿಯ ಬಗ್ಗೆ ಅವಾಚ್ಯವಾಗಿ ನಿಂದಿಸಿದ್ದಾನೆ. ನಂತರ ಸತ್ಯವೇಲುಗೂ ದೂರವಾಣಿ ಕರೆ ಮಾಡಿ ಆತನ ಪತ್ನಿಯ ಬಗ್ಗೆ ಬೈಯ್ದು, ಇಬ್ಬರು ನನ್ನ ಬಳಿ ಬರಬೇಕು. ಇಲ್ಲವಾದರೆ ಮುಗಿಸಿಬಿಡುತ್ತೇನೆ. ನನ್ನ ಬಗ್ಗೆ ನಿಮಗೆ ಗೊತ್ತು ತಾನೇ ಎಂದು ಧಮ್ಕಿ ಹಾಕಿ ಮೊಬೈಲ್ ಕರೆ ಕಟ್ ಮಾಡಿದ್ದಾನೆ.
ಇದರಿಂದ ಆಕ್ರೋಶಗೊಂಡ ಅರುಣ್ ಮತ್ತು ಸತ್ಯವೇಲು, ರಾಹುಲ್‍ಗೆ ಬುದ್ದಿ ಕಲಿಸಲು ನಿರ್ಧರಿಸಿ ಮನೆಗಳಿಗೆ ಹೋಗಿ ಚಾಕು ಹಾಗೂ ಮಚ್ಚು ತೆಗೆದುಕೊಂಡು ರೌಡಿ ರಾಹುಲ್ ಎಲ್ಲಿದ್ದಾನೆ ಎಂದು ತಿಳಿದುಕೊಂಡು ರಾತ್ರಿ 10 ಗಂಟೆಗೆ ಎನ್‍ಜಿಎಫ್ ವೃತ್ತದ ಬಳಿ ಬಂದಿದ್ದಾರೆ.
ಆತನನ್ನು ನೋಡುತ್ತಿದ್ದಂತೆ ಗಲಾಟೆ ಶುರುವಾಗಿದೆ. ಮನೆಯಿಂದ ತಂದಿದ್ದ ಮಾರಕಾಸ್ತ್ರಗಳನ್ನು ಹೊರಗೆ ತೆಗೆದು ರಾಹುಲ್‍ಗೆ ಚಾಕುವಿನಿಂದ ಇರಿದು, ಮಚ್ಚಿನಿಂದ ಕೊಚ್ಚಿ ನಡುರಸ್ತೆಯಲ್ಲೇ ಹತ್ಯೆ ಮಾಡಿ ಅಲ್ಲಿಂದ ಅರುಣ್ ಮತ್ತು ಸತ್ಯವೇಲು ಪರಾರಿಯಾಗಿದ್ದಾರೆ.
ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಬಯ್ಯಪ್ಪನಹಳ್ಳಿ ಪೆÇಲೀಸರು, ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಈ ಬಗ್ಗೆ ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ಬಯ್ಯಪ್ಪನಹಳ್ಳಿ ಠಾಣೆ ಪೊಲೀಸರು ಮುಂದಿನ ತನಿಖೆ ಕೈಗೊಂಡು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.