ನವದೆಹಲಿ,ಸೆ.24- ಮುಂಬರುವ ಚುನಾವಣೆಯಲ್ಲಿ ಬಿಹಾರವನ್ನು ಬಿಜೆಪಿ ಮುಕ್ತಗೊಳಿಸುವುದಾಗಿ ಜೆಡಿಯು ಸವಾಲು ಹಾಕಿದೆ.
ಮುಖ್ಯಮಂತ್ರಿ ನಿತೀಶ್‍ಕುಮಾರ್ ಬಿಜೆಪಿಗೆ ದ್ರೋಹ ಬಗೆದಿದ್ದಾರೆ ಎಂಬ ಷಾ ಹೇಳಿಕೆಗೆ ಪ್ರತಿಕ್ರಿಯಿಸಿರುವ ಜೆಡಿಯು ಅಧ್ಯಕ್ಷ ಲಲನ್‍ಸಿಂಗ್ ಅವರು ಶಾ ಅವರಿಂದ ನಮಗೆ ಯಾವುದೇ ಸರ್ಟಿಫಿಕೇಟ್ ಬೇಕಿಲ್ಲ ಆದರೆ, ಬಿಜೆಪಿಯನ್ನು 2024ರ ಚುನಾವಣೆ ನಂತರ ರಾಜ್ಯದಿಂದ ಹೊರದಬ್ಬಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬಿಹಾರದಲ್ಲಿ ಆಡಳಿತಾರೂಢ ಜೆಡಿಯು, ಆರ್‍ಜೆಡಿ ಹಾಗೂ ಕಾಂಗ್ರೆಸ್ ಮೈತ್ರಿಕೂಟ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಇದನ್ನು ಸಹಿಸದ ಅಮಿತ್ ಷಾ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ಧಾರೆ ಎಂದು ಅವರು ತಿರುಗೇಟು ನೀಡಿದ್ದಾರೆ.
ವಿರೋಧ ಪಕ್ಷದವರ ಮೇಲೆ ಮಾತ್ರ ಕೇಂದ್ರೀಯ ತನಿಖಾ ದಳಗಳನ್ನು ಛೂ ಬಿಡುವ ಕೇಂದ್ರ ಸರ್ಕಾರದವರು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧದ ಆರೋಪಗಳ ತನಿಖೆಯನ್ನು ಕೇಂದ್ರ ತನಿಖಾ ದಳಗಳಿಂದ ನಡೆಸುತ್ತಾರೆಯೇ ಎಂದು ಪ್ರಶ್ನಿಸಿದ್ದಾರೆ.
ಕಳೆದ ಕೆಲವು ವರ್ಷಗಳಲ್ಲಿ ಬಿಜೆಪಿಯ ಎಲ್ಲಾ ಪ್ರಮುಖ ಮಿತ್ರಪಕ್ಷಗಳು ಆ ಪಕ್ಷದೊಂದಿಗಿನ ಸಂಬಂಧವನ್ನು ಕಡಿದುಕೊಂಡಿರುವುದು ಏಕೆ ಎಂಬುದನ್ನು ಗೃಹ ಸಚಿವರು ಪರಿಶೀಲಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ.