ನವದೆಹಲಿ,ಅ.8- ತಮಗೆ ಅವಶ್ಯವಿರುವ ಇಂಧನವನ್ನು ಯಾವ ದೇಶದಿಂದ ಬೇಕಾದರೂ ನಾವು ಖರೀದಿಸುತ್ತೇವೆ. ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಯಾವುದೇ ದೇಶ ರಷ್ಯಾದಿಂದ ತೈಲ ಖರೀದಿಸಬಾರದು ಎಂದು ನಮಗೆ ಹೇಳಿಲ್ಲ ಎಂದು ಪೆಟ್ರೋಲಿಯಂ ಸಚಿವ ಹರ್ದೀಪ್‍ಸಿಂಗ್ ಪುರಿ ಹೇಳಿದ್ದಾರೆ.
ರಷ್ಯಾ-ಉಕ್ರೇನ್ ಯುದ್ಧದ ನಂತರ ಜಾಗತಿಕ ಇಂಧನ ವ್ಯವಸ್ಥೆ ಹದಗೆಟ್ಟಿದೆ. ಹೀಗಾಗಿ ಪ್ರಪಂಚದಾದ್ಯಂತದ ಇಂಧನಕ್ಕಾಗಿ ಹಾಹಾಕಾರ ಎದ್ದಿದೆ. ನಾವು ನಮ್ಮ ದೇಶದ ನಾಗರೀಕರ ಹಿತದೃಷ್ಟಿಯಿಂದ ರಷ್ಯಾದಿಂದ ಇಂಧನ ಅಮುದು ಮಾಡಿಕೊಳ್ಳುತ್ತಿದ್ದೇವೆ ಎಂದು ಅವರು ಹೇಳಿದರು.
ಉಕ್ರೇನ್ ಮೇಲಿನ ದಾಳಿಯ ನಂತರ ಪಾಶ್ಚಿಮಾತ್ಯ ದೇಶಗಳು ರಷ್ಯಾದಿಂದ ಇಂಧನ ಖರೀದಿಯನ್ನು ಕ್ರಮೇಣ ಕಡಿಮೆಗೊಳಿಸುತ್ತಿವೆ. ಆದರೆ ನಾವು ನಮ್ಮ ದೇಶದ ಹಿತದೃಷ್ಟಿಯಿಂದ ಕಡಿಮೆ ದರಕ್ಕೆ ರಷ್ಯಾದಿಂದ ಇಂಧನ ಖರೀದಿಸುತ್ತಿದ್ದೇವೆ. ಹೀಗಾಗಿ ರಷ್ಯಾ ಮತ್ತು ನಮ್ಮ ನಡುವೆ ಇದ್ದ ವ್ಯಾಪಾರ ವಹಿವಾಟಿನಲ್ಲಿ ಏರಿಕೆಯಾಗಿದೆ ಎಂದು ಅವರು ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಅವರು, ರಷ್ಯಾದಿಂದ ತೈಲ ಖರೀದಿಯನ್ನು ನಿಲ್ಲಿಸುವಂತೆ ಭಾರತಕ್ಕೆ ಯಾರೂ ಹೇಳಿಲ್ಲ. ಯಾರ ಮಾತನ್ನು ಕೇಳುವ ಪರಿಸ್ಥಿತಿಯಲ್ಲಿ ನಾವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಅಮೆರಿಕಾದ ಇಂಧನ ಕಾರ್ಯದರ್ಶಿ ಜೆನ್ನಿಫರ್ ಗ್ರಾನ್‍ಹೋಮ್ ಅವರೊಂದಿಗಿನ ದ್ವಿಪಕ್ಷಿಯ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈ ವಿಷಯ ತಿಳಿಸಿದರು.
ಗ್ರೀನ್ ಎನರ್ಜಿ ಕಾರಿಡಾರ್ ಯೋಜನೆಯಲ್ಲಿ ಅಮೆರಿಕ ಮತ್ತು ಭಾರತ ಒಟ್ಟಿಗೆ ಕೆಲಸ ಮಾಡಲಿವೆ. ಯುಎಸ್‍ನಿಂದ 20 ಶತಕೋಟಿ ಮೌಲ್ಯದ ಇಂಧನವನ್ನು ಖರೀದಿಸುವ ಸಂಬಂಧ ಉಭಯ ರಾಷ್ಟ್ರಗಳು ಒಡಂಬಡಿಕೆ ಮಾಡಿಕೊಂಡವು.