ರಾಹುಲ್ ಯಾತ್ರೆಯಿಂದ ಮಂಡ್ಯದಲ್ಲಿ ಕಾಂಗ್ರೆಸ್ ಅಲೆ ಸೃಷ್ಟಿಯಾಗಿದೆ : ಚಲುವರಾಯಸ್ವಾಮಿ

Social Share

ಮಂಡ್ಯ,ಅ.9- ಎಐಸಿಸಿ ಮುಖಂಡ ರಾಹುಲ್ ಗಾಂಧಿ ಅವರು ಮಂಡ್ಯ ಜಿಲ್ಲೆಯಲ್ಲಿ ಭಾರತ ಜೋಡೊ ಯಾತ್ರೆ ಸಂಚರಿಸಿದ ನಂತರ ಜಿಲ್ಲೆಯಲ್ಲಿ ಹೊಸ ಹುಮ್ಮಸ್ಸು ಉಂಟಾಗಿದ್ದು, ಕಾಂಗ್ರೆಸ್ ಅಲೆ ಸೃಷ್ಟಿಯಾಗಿದೆ ಎಂದು ಮಾಜಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಡ್ಯ ಜಿಲ್ಲೆಯಲ್ಲಿ ಮಾತ್ರವಲ್ಲ, ಇಡೀ ರಾಜ್ಯದಲ್ಲಿ ಪ್ರಸ್ತುತ ರಾಜಕೀಯದಲ್ಲಿ ಕಾಂಗ್ರೆಸ್ ಪಕ್ಷವೇ ಮುಂಚೂಣಿಯಲ್ಲಿದೆ, ಭಾರತ ಜೋಡೋ ಯಾತ್ರೆಯಿಂದ ನಮ್ಮ ಪಕ್ಷಕ್ಕೆ ಲಾಭವಾಗುವುದು ಖಚಿತ ಎಂದು ವಿವರಿಸಿದರು.

ದೇಶದಲ್ಲಿ ಹಿಂದೆ ಯಾತ್ರೆಗಳು ನಡೆದಿವೆ, ಅಡ್ವಾಣಿ ಅವರು ರಥಯಾತ್ರೆ ಮಾಡಿದರು. ಆದರೆ ದೇಶದ ಉದ್ದಗಲಕ್ಕೂ ಸಂಚರಿಸುವ 3500 ಕಿ.ಮೀ. ಸಂಚರಿಸುವ ಪಾದಯಾತ್ರೆಯನ್ನು ಯಾವ ನಾಯಕನೂ ಮಾಡಿದ ಉದಾಹರಣೆಗಳಿಲ್ಲ, ದೇಶಕ್ಕೆ ಮೂವರು ಪ್ರಧಾನಿಗಳನ್ನು ಕೊಟ್ಟ ಕುಟುಂಬದಿಂದ ಬಂದಂತಹ ರಾಹುಲ್ ಗಾಂಧಿ ಅವರು ಈ ಯಾತ್ರೆ ಕೈಗೊಂಡಿರುವುದು ಅವರಿಗೆ, ದೇಶ ಹಾಗೂ ಜನರ ಮೇಲಿರುವ ಪ್ರೀತಿಯನ್ನು ತೋರಿಸುತ್ತದೆ ಎಂದರು.

ರಾಹುಲ್ ಗಾಂಧಿ ಬಗ್ಗೆ ಬಿಜೆಪಿಯವರು ಟೀಕೆ ಮಾಡುತ್ತಾರೆ, ಆದರೆ ವಾಸ್ತವವಾಗಿ ರಾಹಲ್ ಅವರ ವ್ಯಕ್ತಿತ್ವ ಉನ್ನತವಾದದ್ದು, ನಾನು ಯಾತ್ರೆಯ ಸಂದರ್ಭದಲ್ಲಿ ಅವರ ಒಡನಾಟದಲ್ಲಿದ್ದೆ, ಆಗ ಅವರ ಸರಳತೆ, ವ್ಯಕ್ತಿತ್ವ ಪರಿಚಯವಾಯಿತು. ಅವರಿಗೆ ಜನರ ಮೇಲಿರುವ ಪ್ರೀತಿಯನ್ನು ಇನ್ನೊಬ್ಬ ನಾಯಕನಲ್ಲಿ ನಾವು ನೋಡಲು ಸಾಧ್ಯವಿಲ್ಲ ಎಂದರು.

ರಾಹುಲ್ ಗಾಂಧಿ ಅವರು ಆದಿಚುಂಚನಗಿರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಡಾ.ನಿರ್ಮಲಾನಂದ ಸ್ವಾಮೀಜಿ ಅವರ ಜೊತೆ ಮಾತನಾಡಿ ನಾನು ರಾಜಕೀಯಕ್ಕಾಗಿ ಯಾತ್ರೆ ಮಾಡುತ್ತಿಲ್ಲ, ಜನರನ್ನು ಹತ್ತಿರದಿಂದ ನೋಡಿ ಅವರ ನೋವನ್ನು ಆಲಿಸಲು ಯಾತ್ರೆ ಕೈಗೊಂಡಿದ್ದೇನೆ ಎಂದಾಗ ನನ್ನ ಕಣ್ಣಲ್ಲೂ ನೀರು ಬಂತು ಎಂದು ಹೇಳಿದರು.

ಇಂದು ಮಾಜಿ ಮಂತ್ರಿಗಳ ಮಕ್ಕಳನ್ನೆ ಹಿಡಿದು ನಿಲ್ಲಿಸಲು ಸಾಧ್ಯವಿಲ್ಲ, ಆದರೆ ದೇಶಕ್ಕೆ ಮೂವರು ಸಮರ್ಥ ಪ್ರಧಾನಿಗಳನ್ನು ಕೊಟ್ಟ ಪ್ರತಿಷ್ಠಿತ ಕುಟುಂಬದಿಂದ ಬಂದ ರಾಹುಲ್ ಗಾಂಧಿಯವರ ಯಾತ್ರೆ ದೇಶದ ಸಂವಿಧಾನ ಹಾಗೂ ಪ್ರಜಾಪ್ರಭುತ್ವದ ಉಳಿವಿಗೆ ಅತ್ಯಗತ್ಯವಾಗಿತ್ತು ಎಂದು ನುಡಿದರು.

ಮಂಡ್ಯ ಜಿಲ್ಲೆಯಲ್ಲಿ ಯಾತ್ರೆಯ ಯಶಸ್ವಿಗೆ ಸಹಕರಿಸಿದ ಸಾರ್ವಜನಿಕರು, ಪಕ್ಷದ ಕಾರ್ಯಕರ್ತರು, ಮುಖಂಡರು, ಮಾಧ್ಯಮದವರು ಹಾಗೂ ಪೊಲೀಸ್ ಸಿಬ್ಬಂದಿಗಳಿಗೆ ಧನ್ಯವಾದ ತಿಳಿಸುವುದಾಗಿ ಹೇಳಿದರು.

ಭಾರತ ಜೋಡೋ ಯಾತ್ರೆಗೆ ಮಂಡ್ಯ ಜಿಲ್ಲೆಯಿಂದ ಸುಮಾರು 5 ಲಕ್ಷ ಜನ ಭಾಗವಹಿಸಿದ್ದರು. ಅದಕ್ಕಿಂತ ಹೆಚ್ಚಾಗಿ ರಾಹುಲ್ ಗಾಂಧಿ ಅವರನ್ನು ನೋಡುವುದಕ್ಕಾಗಿಯೇ ಇದಕ್ಕಿಂತ ದುಪ್ಪಟ್ಟು ಜನ ಆಗಮಿಸಿದ್ದರು. ಪಕ್ಷದ ಶಕ್ತಿ ಪ್ರದರ್ಶನಕ್ಕಾಗಿ ಯಾತ್ರೆ ನಡೆಸಲಿಲ್ಲ, ಜನರ ಬಳಿಗೆ ತೆರಳುವುದಕ್ಕಾಗಿ ಯಾತ್ರೆ ನಡೆದಿದೆ ಎಂದು ವಿವರಿಸಿದರು.

ಸಾರ್ವಕರ್ ಫೋಟೋ ಪ್ರದರ್ಶನ ಬಿಜೆಪಿಯವರ ಕುತಂತ್ರ ಯಾತ್ರೆಯಲ್ಲಿ ಸಾರ್ವಕರ್ ಫೋಟೋ ಪ್ರದರ್ಶನ ಮಾಡಿದ್ದು, ಬಿಜೆಪಿಯ ರಾಜಕೀಯ ಕುತಂತ್ರವೇ ಹೊರತು, ಇದು ನಮ್ಮ ಪಕ್ಷದ ಕಾರ್ಯಕರ್ತರು ಕೆಲಸವಾಗಿಲ್ಲ, ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದೇವೆ ಎಂದು ಚಲುವರಾಯಸ್ವಾಮಿ ಸ್ಪಷ್ಟಪಡಿಸಿದರು.

ಗೋಷ್ಠಿಯಲ್ಲಿ ಮಾಜಿ ಶಾಸಕರಾದ ಪಿ.ಎಂ.ನರೇಂದ್ರಸ್ವಾಮಿ, ರಮೇಶ್ ಬಂಡಿಸಿದ್ದೇಗೌಡ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ್, ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಅಂಜನಾ ಶ್ರೀಕಾಂತ್, ಮುಖಂಡರಾದ ಅಮರಾವತಿ ಚಂದ್ರಶೇಖರ್, ಸಿದ್ದರೂಢ, ವಿಜಯಕುಮಾರ್ ಮತ್ತಿತರರು ಭಾಗವಹಿಸಿದ್ದರು.

Articles You Might Like

Share This Article