ಬೆಂಗಳೂರು,ಅ.8- ದಸರಾ ಹಬ್ಬದ ಅಂಗವಾಗಿ ಬಿಡುವು ನೀಡಲಾಗಿದ್ದ ದೊಡ್ಡ ದೊಡ್ಡ ಕಟ್ಟಡಗಳ ಒತ್ತುವರಿ ತೆರವು ಕಾರ್ಯಚರಣೆ ಸೋಮವಾರದಿಂದ ಮತ್ತೆ ಆರಂಭವಾಗಲಿದೆ. ಸುಪ್ರಸಿದ್ಧ ದಸರಾ ಹಬ್ಬದ ಸಂದರ್ಭದಲ್ಲಿ ಪೂಜೆ ಮಾಡಿ ನಿಲ್ಲಿಸಲಾಗಿದ್ದ ಜೆಸಿಬಿ ಯಂತ್ರಗಳು ಹಾಗೂ ಬುಲ್ಡೋಜರ್‍ಗಳು ಮತ್ತೆ ಘರ್ಜನೆ ಮಾಡಲು ಸಿದ್ದವಾಗಿವೆ.
ಈಗಾಗಲೇ ಒತ್ತುವರಿದಾರ ಪಟ್ಟಿ ಸಿದ್ದಪಡಿಸಿಕೊಂಡಿರುವ ಕಂದಾಯ ಇಲಾಖೆ ಮತ್ತು ಬಿಬಿಎಂಪಿ ಅಧಿಕಾರಿಗಳು ಸೋಮವಾರದಿಂದ ಒತ್ತುವರಿ ತೆರವು ಕಾರ್ಯಚರಣೆಯನ್ನು ಚುರುಕುಗೊಳಿಸಲು ತೀರ್ಮಾನಿಸಿದ್ದಾರೆ.
ಮಳೆ ಬಂದಾಗ ಬಿಬಿಎಂಪಿ ವಿರುದ್ಧ ಬಾಯಿಗೆ ಬಂದಂತೆ ಹೇಳಿಕೆ ನೀಡುವ ಪ್ರತಿಷ್ಠಿತ ವ್ಯಕ್ತಿಗಳು ಹಾಗೂ ಸಂಸ್ಥೆಗಳು ರಾಜಕಾಲುವೆ ಒತ್ತುವರಿ ಮಾಡಿಕೊಂಡಿರುವುದು ಸಾಬೀತಾಗಿರುವುದರಿಂದ ಸೋಮವಾರದಿಂದ ಎಲ್ಲ ರೀತಿಯ ಒತ್ತುವರಿ ತೆರವು ಮಾಡಲಾಗುವುದು ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.
ಸರ್ಕಾರಕ್ಕೆ ಬ್ಲಾಕ್ ಮೇಲ್ ಮಾಡಿ ನಮ್ಮ ಕಂಪನಿಗಳನ್ನು ಬೇರೆ ರಾಜ್ಯಕ್ಕೆ ವರ್ಗಾವಣೆ ಮಾಡುತ್ತೇವವೆ ಎಂದು ಬೊಬ್ಬೆ ಹೊಡೆಯುತ್ತಿರುವ ಐಟಿ-ಬಿಟಿ ಮಂದಿಗಳು ರಾಜಕಾಲುವೆಗಳನ್ನು ಒತ್ತುವರಿ ಮಾಡಿಕೊಂಡಿದ್ದಾರೆ.
ಒತ್ತುವರಿ ಮಾಡಿರೋ ವಿಲ್ಲಾ. ಐಟಿಬಿಟಿ ಕಂಪನಿಗಳ ಹೆಸರು ನೋಡಿ ಬಿಬಿಎಂಪಿ ಎಂಜಿನಿಯರ್‍ಗಳೇ ಬೆಚ್ಚಿ ಬಿದ್ದಿದ್ದಾರೆ.
ಬೃಹತ್ ರಾಜಕಾಲುವೆ ಒತ್ತುವರಿ ಮಾಡಿಕೊಂಡಿರುವ ಇಕೋಸ್ಪೇಸ್ ಸಂಸ್ಥೆಗೆ ದೊಡ್ಡ ಗಂಡಾಂತರ ಕಾದಿದೆ. ಸೋಮವಾರ ಸಂಸ್ಥೆ ಒತ್ತುವರಿ ಮಾಡಿಕೊಂಡಿರುವ 12 ಅಂತಸ್ತಿನ ಮೂರು ಕಟ್ಟಡಗಳನ್ನು ಧ್ವಂಸಗೊಳಿಸಲು ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ.
ಒತ್ತುವರಿ ತೆರವುಗೊಳಿಸುವ ಅಧಿಕಾರಿಗಳಿಗೆ ಫ್ರೀ ಹ್ಯಾಂಡ್ ನೀಡಲಾಗಿದ್ದು, ಇಕೋಸ್ಪೇಸ್ ಸಂಸ್ಥೆಗೆ ಕಂದಾಯ ಇಲಾಖೆ ನೋಟೀಸ್ ಜಾರಿ ಮಾಡಿ ಒತ್ತುವರಿ ತೆರವುಗೊಳಿಸಲಾಗುವುದು. ಸಾವಳಕೆರೆಯಿಂದ ಬೆಳ್ಳಂದೂರು ಕೆರೆಗೆ ಸಂಪರ್ಕ ಕಲ್ಪಿಸುವ ರಾಜಕಾಲುವೆಯ 500 ಮೀಟರ್ ಉದ್ದದ, 40 ರಿಂದ 50 ಅಡಿ ಅಗಲದ ಜಾಗವನ್ನು ಇಕೋಸ್ಪೇಸ್ ಒತ್ತುವರಿ ಮಾಡಿಕೊಂಡಿದೆ ಎಂಬ ಆರೋಪಗಳು ಕೇಳಿ ಬಂದಿವೆ.
ಅದೇ ರೀತಿ ರಾಜಕಾಲುವೆ ಒತ್ತುವರಿ ಮಾಡಿ ನಿರ್ಮಿಸಿರುವ ಪೂರ್ವ ಪಾಕ್ರ್ರಿq್ಜï ನ ಮೂರು ವಿಲ್ಲಾಗಳು ಹಾಗೂ ರೈನ್ ಬೋ ಲೇಔಟ್ ನ 30 ವಿಲ್ಲಾಗಳು ಡೆಮಾಲಿಷನ್ ಮಾಡುವುದು ಫಿಕ್ಸ್ ಆಗಿದೆ. ಇದುವರೆಗೂ ನಾವು ಯಾವುದೇ ಒತ್ತುವರಿ ಮಾಡಿಲ್ಲ ಎಂದು ಬೊಬ್ಬೆ ಹೊಡೆಯುತ್ತಿದ್ದ ಪ್ರತಿಷ್ಠಿತ ಕಂಪನಿಗಳು ಕಂದಾಯ ಇಲಾಖೆ ತಯಾರಿಸಿರುವ ಒತ್ತುವರಿದಾರರ ಪಟ್ಟಿ ನೋಡಿ ಬೆಚ್ಚಿ ಬಿದ್ದಿದ್ದಾರೆ.
ಒತ್ತುವರಿ ತೆರವಿಗೆ ನ್ಯಾಯಾಲಯದಿಂದ ತಡೆಯಾಜ್ಞೆ ತರಲು ಸಾಧ್ಯವಿಲ್ಲ ಎಂಬ ಅರಿವಿರುವ ಒತ್ತುವರಿದಾರರು ಮುಂದೇನೂ ಮಾಡುವುದು ಎಂದು ತಲೆ ಮೇಲೆ ಕೈ ಹೊತ್ತಿ ಕುಳಿತಿದ್ದಾರೆ. ಕಂದಾಯ ಸಚಿವ ಆರ್.ಅಶೋಕ್ ಅವರು ನಾವು ಎಂತಹ ದೊಡ್ಡ ವ್ಯಕ್ತಿಗಳೂ ರಾಜಕಾಲುವೆ ಒತ್ತುವರಿ ಮಾಡಿಕೊಂಡಿದ್ದರೂ ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸುತ್ತೇವೆ ಎಂಬ ಹೇಳಿಕೆ ನೀಡಿರುವುದರಿಂದ ಬರುವ ಸೋಮವಾರದಿಂದ ಮತ್ತೆ ಬುಲ್ಡೋಜರ್‍ಗಳು ಸದ್ದು ಮಾಡುವುದು ಗ್ಯಾರಂಟಿಯಾಗಿದೆ.
ನೋಟೀಸ್: ಮಹದೇವಪುರ ವಲಯದಲ್ಲಿ ಒತ್ತುವರಿ ಮಾಡಿಕೊಂಡಿರುವ ಆರ್‍ಸಿಸಿ ರೆಸಿಡೆನ್ಷಿಯಲ್ ಕಟ್ಟಡ ಮಾಲೀಕರು ಹಾಗೂ ಶೀಲವಂತನ ಕೆರೆ, ಕಸವನಹಳ್ಳಿ, ಬೆಳ್ಳಂದೂರು ಕೆರೆ ಒತ್ತುವರಿದಾರರು ಹಾಗೂ ದಿಯಾ ಶಾಲೆಯವರು ಮಾಡಿಕೊಂಡಿರುವ ಒತ್ತುವರಿ ಪ್ರದೇಶಗಳ ಮಾಲೀಕರಿಗೂ ನೋಟೀಸ್ ಜಾರಿ ಮಾಡಲಾಗಿದೆ.
ಇದರ ಜೊತೆಗೆ ಇನ್ನಿತರ ಕೆಲವರು ಮಾಡಿಕೊಂಡಿರುವ ಒತ್ತುವರಿ ತೆರವಿಗೆ ನ್ಯಾಯಲಯದಿಂದ ತಡೆಯಾಜ್ಞೆ ತಂದಿದ್ದು, ಒತ್ತುವರಿ ಮಾಡಿಕೊಂಡಿರುವುದು ಸಾಬೀತಾದರೇ ಯಾವುದೇ ಮುಲಾಜಿಗೆ ಒಳಗಾಗದೇ ಒತ್ತುವರಿ ತೆರವು ಮಾಡಿ ಎಂದು ನ್ಯಾಯಲಯ ಸೂಚಿಸಿ ಕೆಲವು ತಡೆಯಾಜ್ಞೆಗಳನ್ನು ತೆರವುಗೊಳಿಸಿರುವುದರಿಂದ ಅಂತಹ ಕಟ್ಟಡಗಳ ಒತ್ತುವರಿ ತೆರವಿಗೂ ಸೋಮವಾರದಿಂದ ಕಾರ್ಯಚರಣೆ ಆರಂಭಗೊಳ್ಳುವ ಸಾಧ್ಯತೆಗಳಿವೆ.