ಮುಂಬೈ,ಅ.8- ಐಷರಾಮಿ ಬಸ್ಸೊಂದು ಅಪಘಾತಕ್ಕೀಡಾಗಿ ಬೆಂಕಿ ಹೊತ್ತಿಕೊಂಡ ಪರಿಣಾಮ ಮಗು ಸೇರಿದಂತೆ 11 ಮಂದಿ ದುರಂತ ಸಾವಿಗೀಡಾಗಿದ್ದು, 38 ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಹಾರಾಷ್ಟ್ರದ ನಾಸಿಕ್-ಔರಂಗಾಬಾದ್ ಹೆದ್ದಾರಿಯಲ್ಲಿ ಇಂದು ನಸುಕಿನಜಾವ ಸಂಭವಿಸಿದೆ.
ಯವತ್ಮಾಲ್‍ನಿಂದ ಮುಂಬೈಗೆ ತೆರಳುತ್ತಿದ್ದ ಬಸ್ ನಾಸಿಕ್‍ನಿಂದ ಪುಣೆಗೆ ಹೋಗುತ್ತಿದ್ದ ಟ್ರಕ್‍ಗೆ ಡಿಕ್ಕಿ ಹೊಡೆದ ಪರಿ ಣಾಮ ಬಸ್‍ನಲ್ಲಿ ಬೆಂಕಿ ಹೊತ್ತಿಕೊಂಡು, ದಟ್ಟ ಹೊಗೆ ಆವರಿಸಿಕೊಂಡಿದೆ. ಪರಿಣಾಮ 11 ಮಂದಿ
ಸ್ಥಳದಲ್ಲೇ ಸಾವನ್ನಪ್ಪಿ 38 ಮಂದಿ ಗಾಯಗೊಂಡಿದ್ದಾರೆ.
ಗಾಯಗೊಂಡವರನ್ನು ರಕ್ಷಿಸಿ ಸ್ಥಳೀಯ ಆಸ್ಪತ್ರೆ ದಾಖಿಸಲಾಗಿದೆ ಎಂದು ನಾಸಿಕ್ ಜಿಲ್ಲೆಯ ಉಪಪೊಲೀಸ್ ಆಯುಕ್ತ ಅಮೋಲ್ ತಾಂಬೆ ತಿಳಿಸಿದ್ದಾರೆ. ಘಟನೆ ಸಂಬಂಧ ಪ್ರಕರಣ ದಾಖಲಾಗಿದ್ದು, ಅಪಘಾತದ ಬಗ್ಗೆ ತನಿಖೆ ನಡೆಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ. ರಕ್ಷಣಾಕಾರ್ಯ ಮುಂದುವರೆದಿದೆ ಎಂದು ನಾಸಿಕ್ ಜಿಲ್ಲಾ ಉಸ್ತುವಾರಿ ಸಚಿವ ದಾದಾ ಭೂಸೆ ತಿಳಿಸಿದ್ದಾರೆ.
# ಮೃತರ ಕುಟುಂಬಗಳಿಗೆ 5 ಲಕ್ಷ ಪರಿಹಾರ:
ಘಟನೆ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಏಕನಾಥ್ ಶಿಂಧೆ ಸೂಕ್ತ ರಕ್ಷಣಾ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಗಾಯಾಳುಗಳ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದ್ದು, ಮೃತಪಟ್ಟವರ ಕುಟುಂಬಗಳಿಗೆ ತಲಾ 5 ಲಕ್ಷ ರೂ. ಪರಿಹಾರ ಘೋಷಿಸಲಾಗಿದೆ ಎಂದು ಮುಖ್ಯಮಂತ್ರಿಗಳ ಕಚೇರಿ ತಿಳಿಸಿದೆ.