ಅಂಗನವಾಡಿ ನೌಕರರ ಜೊತೆ ಮತ್ತೊಂದು ಸುತ್ತಿನ ಮಾತುಕತೆಗೆ ಮುಂದಾದ ಸಿಎಂ ಸಿದ್ದರಾಮಯ್ಯ
ಬೆಂಗಳೂರು, ಮಾ.22- ಗೌರವಧನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಮುಷ್ಕರ ನಡೆಸುತ್ತಿರುವ ಅಂಗನವಾಡಿ ನೌಕರರ ಬೇಡಿಕೆಗಳ ಬಗ್ಗೆ ರಾಜ್ಯ ಸರ್ಕಾರ ಸಹಾನುಭೂತಿ ಹೊಂದಿದ್ದು, ಇನ್ನೊಮ್ಮೆ ಸಂಧಾನ ಮಾತುಕತೆ ನಡೆಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಸ್ವಯಂ ಪ್ರೇರಿತವಾಗಿ ಹೇಳಿಕೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಅಂಗನವಾಡಿ ನೌಕರರ ಬೇಡಿಕೆಗಳ ಬಗ್ಗೆ ತಾವು ಸಹಾನುಭೂತಿಯಿಂದಲೇ ನಡೆದುಕೊಳ್ಳುತ್ತಿದ್ದೇವೆ.
ಅವರು ಕೇಳದೇ ಇದ್ದರೂ ಕಾಲ ಕಾಲಕ್ಕೆ ಗೌರವ ಧನ ಪರಿಷ್ಕರಿಸುತ್ತಿದ್ದೇವೆ. ನಿನ್ನೆ ನಡೆದ ಸಂಧಾನ ಸಭೆಯಲ್ಲಿ ಮುಂದಿನ ತಿಂಗಳ 19ರಂದು ಸಭೆ ನಡೆಸಿ ಬೇಡಿಕೆ ಈಡೇರಿಕೆ ಬಗ್ಗೆ ಚರ್ಚಿಸವುದಾಗಿ ಭರವಸೆ ನೀಡಿದ್ದೆ. ಅದಕ್ಕೆ ಒಪ್ಪಿದ್ದ ಅಂಗನವಾಡಿ ನೌಕರರ ಸಂಘದ ಮುಖಂಡರು ಮೀಟಿಂಗ್ ನೋಟಿಸ್ ನೀಡುವಂತೆ ಹೇಳಿದ್ದರು. 10 ನಿಮಿಷದಲ್ಲೇ ಮೀಟಿಂಗ್ ನೋಟಿಸನ್ನು ಸಿದ್ದ ಮಾಡಿಕೊಟ್ಟಿದ್ದೇವೆ ಎಂದರು. ಮುಷ್ಕರ ಹಿಂಪಡೆಯುವುದಾಗಿ ಸಭೆಯಲ್ಲಿ ಭರವಸೆ ನೀಡಿದರು. ಆದರೆ, ಫ್ರೀಡಂ ಪಾರ್ಕ್ಗೆ ಹೋಗಿ ಮತ್ತೆ ಮುಷ್ಕರ ಮುಂದುವರೆಸುವುದಾಗಿ ಹೇಳಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅಂಗನವಾಡಿ ಕೇಂದ್ರ ಸರ್ಕಾರದ ಯೋಜನೆಯಾಗಿದ್ದರೂ ಹಣಕಾಸಿನ ಹೊರೆ ಬೀಳುತ್ತಿರುವುದು ರಾಜ್ಯ ಸರ್ಕಾರದ ಮೇಲೆ ಗೌರವ ಧನದಲ್ಲಿ 5200 ರೂ.ಗಳನ್ನು ನಮ್ಮ ಸರ್ಕಾರ ನೀಡುತ್ತಿದೆ. ಕೇಂದ್ರ ಸರ್ಕಾರ 1800 ರೂ. ಮಾತ್ರ ಕೊಡುತ್ತಿದೆ. ಒಟ್ಟು ವಾರ್ಷಿಕ 580ಕೋಟಿ ರೂ.ನಲ್ಲಿ ರಾಜ್ಯ ಸರ್ಕಾರ 480ಕೋಟಿ., ಕೇಂದ್ರ ಸರ್ಕಾರ 98 ಕೋಟಿ ಅನುದಾನ ಹಂಚಿಕೆ ಮಾಡುತ್ತಿದೆ ಎಂದು ವಿವರಿಸಿದರು. ಇತ್ತೀಚೆಗೆ ಮಂಡಿಸಲಾದ ಬಜೆಟ್ನಲ್ಲಿ ವೈದ್ಯಕೀಯ ಭತ್ಯೆ ಮರುಪಾವತಿ ಹಂಚಿಕೆಯನ್ನು 50ಸಾವಿರ ರೂ.ಗಳಿಗೆ ಹೆಚ್ಚಿಸಲಾಗಿದೆ. ಅವರು ಕೇಳದೇ ಇದ್ದರೂ ಗೌರವಧನವನ್ನು 1ಸಾವಿರಕ್ಕೆ ಹೆಚ್ಚಿಸಿದ್ದೇವೆ. ಮುಂದಿನ ಬಾರಿ ಬಜೆಟ್ನಲ್ಲಿ ಮತ್ತಷ್ಟು ಹೆಚ್ಚಳ ಮಾಡುತ್ತೇವೆ ಎಂದು ಸಿಎಂ ಹೇಳಿದ್ದಾರೆ.
ಈಗಾಗಲೇ ಎರಡು ಸುತ್ತಿನ ಮಾತುಕತೆ ನಡೆಸಲಾಗಿದೆ. ನಮಗೆ ಯಾವುದೇ ಪ್ರತಿಷ್ಠೆಯಿಲ್ಲ. ಮತ್ತೊಂದು ಸುತ್ತಿನ ಮಾತುಕತೆ ನಡೆಸಲು ಸಿದ್ದ ಎಂದಿದ್ದಾರೆ.
ಬರಗಾಲ ಭೀಕರವಾಗಿದ್ದು, ಬಿಸಿಲಿನ ತಾಪ ತೀವ್ರವಾಗಿದೆ. ಕುಡಿಯುವ ನೀರಿನ ಸಮಸ್ಯೆ ಗಂಭೀರ ಸ್ವರೂಪಕ್ಕೆ ಹೋಗಿದೆ. ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗಿದ್ದು, ಸರ್ಕಾರ ಹೆಚ್ಚುವರಿ ಮೇವು ಪೂರೈಸಲು ಕ್ರಮ ಕೈಗೊಳ್ಳಬೇಕೆಂದು ಶಾಸಕರು ಇದೇ ವೇಳೆ ಸಲಹೆ ನೀಡಿದರು. ಮತ್ತೆ ಕೆಲವು ಶಾಸಕರು ಸಚಿವರ ಅಸಹಕಾರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
< Eesanje News 24/7 ನ್ಯೂಸ್ ಆ್ಯಪ್ >