ಅಂಗನವಾಡಿ ಮಕ್ಕಳಿಗೆ ಇನ್ನು ಮುಂದೆ ವಾರದ 6 ದಿನ ‘ಮೊಟ್ಟೆ ಭಾಗ್ಯ’
ಬೆಂಗಳೂರು ,ಫೆ.3-ಮಕ್ಕಳಲ್ಲಿ ಹೆಚ್ಚುತ್ತಿರುವ ಅಪೌಷ್ಠಿಕತೆಯನ್ನು ನಿವಾರಿಸುವ ಸದುದ್ದೇಶದಿಂದ ರಾಜ್ಯ ಸರ್ಕಾರ ಇನ್ನು ಮುಂದೆ ಅಂಗನವಾಡಿ ಕೇಂದ್ರಗಳಲ್ಲಿ ಮೊಟ್ಟೆ ವಿತರಿಸಲು ಮುಂದಾಗಿದೆ. ವಾರದ ಆರು ದಿನದಲ್ಲಿ ಮಕ್ಕಳಿಗೆ ಮೊಟ್ಟೆ ವಿತರಿಸುವ ಯೋಜನೆಯನ್ನು ಹಣಕಾಸು ಖಾತೆ ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಬಜೆಟ್ನಲ್ಲಿ ಮಾಡಲಿದ್ದಾರೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ರಾಜ್ಯಸರ್ಕಾರಕ್ಕೆ ಶಿಫಾರಸ್ಸು ನೀಡಿರುವಂತೆ ರಾಜ್ಯದ ಎಲ್ಲಾ ಅಂಗನವಾಡಿಗಳಲ್ಲೂ ಮಕ್ಕಳಿಗೆ ಮೊಟ್ಟೆ ವಿತರಿಸುವ ಅಗತ್ಯವಿದೆ ಎಂದು ಪ್ರತಿಪಾದಿಸಿತ್ತು.
ಇತ್ತೀಚೆಗೆ ಬಿಡುಗಡೆಯಾದ ವರದಿಯಂತೆ 1 ವರ್ಷದಿಂದ 6 ವರ್ಷದೊಳಗಿನ ಮಕ್ಕಳಲ್ಲಿ ಅಪೌಷ್ಠಿಕತೆ ಹೆಚ್ಚಾಗುತ್ತಿದೆ. ಮಕ್ಕಳ ಬೆಳವಣಿಗೆ ನಿರೀಕ್ಷಿತ ಪ್ರಮಾಣದಲ್ಲಿ ಆಗುತ್ತಿಲ್ಲ. ಅಂಗವೈಕಲ್ಯತೆ, ಉಸಿರಾಟದ ತೊಂದರೆ, ಉಬ್ಬಸ, ಹೃದಯ ಸಂಬಂಧಿಕಾಯಿಲೆಗಳು ಬರುತ್ತಿರುವುದರಿಂದ ಮೊ ಟ್ಟೆ ನೀಡುವಂತೆ ಸಲಹೆ ನೀಡಲಾಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ ಕಳೆದ ಜ.18 ರಂದು ಹೊರಡಿಸಿರುವ ಆದೇಶದಂತೆ ಅಂಗನವಾಡಿಗಳಲ್ಲಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಮಕ್ಕಳಿಗೆ ಮೊಟ್ಟೆ ವಿತರಿಸಲು ಮುಂದಾಗಿತ್ತು.
ಕೇವಲ ಎಸ್ಸಿ-ಎಸ್ಟಿ ಮಕ್ಕಳಿಗೆ ಮಾತ್ರ ಮೊಟ್ಟೆ ವಿತರಿಸಿದರೆ, ಮಕ್ಕಳಲ್ಲಿ ಅಸಮಾನತೆ ಉಂಟಾಗುತ್ತದೆ ಎಂಬ ಕಾರಣಕ್ಕಾಗಿ ಪುನಃ ಮತ್ತೊಂದು ಅಧಿಸೂಚನೆ ಹೊರಡಿಸಲಾಗಿದೆ. ಈ ಪ್ರಕಾರ ಇನ್ನುಮುಂದೆ ರಾಜ್ಯದ ಎಲ್ಲಾ ಅಂಗನವಾಡಿಗಳಲ್ಲಿ ಸೋಮವಾರದಿಂದ ಶನಿವಾರದವರೆಗೆ ಅಂದರೆ ವಾರದ ಆರು ದಿನ ಮೊಟ್ಟೆ ವಿತರಿಸಲಿದೆ. ಮಕ್ಕಳಿಗೆ ಮೊಟ್ಟೆ ನೀಡುವುದರಿಂದ ಶಾರೀರಿಕ, ಬೌದ್ಧಿಕ, ಮಾನಸಿಕ ಬೆಳವಣಿಗೆಯ ಜೊತೆಗೆ ಪೌಷ್ಠಿಕತೆ ಹೆಚ್ಚಾಗುತ್ತದೆ. ಜೊತೆಗೆ ಅಂಗನವಾಡಿಗಳಲ್ಲಿ ದಾಖಲಾತಿ ಕಡಿಮೆಯಾಗುತ್ತಿದ್ದು, ಈ ಯೋಜನೆ ಮೂಲಕ ದಾಖಲಾತಿ ಹೆಚ್ಚಿಸುವ ನಿಟ್ಟಿನಲ್ಲಿ ಈ ಕ್ರಮಕೈಗೊಳ್ಳಲಾಗಿದೆ. ಮುಂದಿನ ತಿಂಗಳ 2ನೆ ವಾರ ಮಂಡನೆಯಾಗುವ ಬಜೆಟ್ನಲ್ಲಿ ಅಧಿಕೃತವಾಗಿ ಈ ಯೋಜನೆ ಘೋಷಣೆಯಾಗಲಿದೆ ಎಂದು ಸರ್ಕಾರ ಉನ್ನತ ಮೂಲಗಳು ತಿಳಿಸಿವೆ.
< Eesanje News 24/7 ನ್ಯೂಸ್ ಆ್ಯಪ್ >
Click Here to Download : Android / iOS