ಅಂ.ರಾ. ಕೋರ್ಟ್ನಲ್ಲಿ ಇಂದು ಅಂತಿಮ ತೀರ್ಪು : ನೇಣು ಕುಣಿಕೆಯಿಂದ ಜಾಧವ್ ಪಾರಾಗುವರೇ..?
ನವದೆಹಲಿ, ಮೇ 18-ಭಾರತೀಯ ನೌಕಾ ಪಡೆಯ ನಿವೃತ್ತ ಅಧಿಕಾರಿ ಕುಲಭೂಷಣ್ ಜಾಧವ್ ಅವರಿಗೆ ಪಾಕಿಸ್ತಾನದ ಸೇನಾ ನ್ಯಾಯಾಲಯ ವಿಧಿಸಿದ ಗಲ್ಲು ಶಿಕ್ಷೆ ಪ್ರಶ್ನಿಸಿ ಭಾರತ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಅಂತಾರಾಷ್ಟ್ರೀಯ ನ್ಯಾಯಾಲಯವು ಇಂದು ಕೈಗೆತ್ತಿಕೊಂಡಿದ್ದು ತೀರ್ಪಿನತ್ತ ಎಲ್ಲರ ಚಿತ್ತ ಕೇಂದ್ರೀಕೃತವಾಗಿದೆ. ಜಾಧವ್ ನೇಣು ಕುಣಿಕೆಯಿಂದ ಪಾರಾಗಬೇಕೆಂಬುದು ಎಲ್ಲ ಭಾರತೀಯ ಪ್ರ್ರಾರ್ಥನೆಯಾಗಿದೆ. ಅಲ್ಲದೇ ಅವರು ಸುರಕ್ಷಿತವಾಗಿ ಬಿಡುಗಡೆಯಾಗಲಿದ್ದಾರೆ ಎಂಬ ಆಶಾಭಾವನೆಯೂ ವ್ಯಕ್ತವಾಗಿದೆ. ಭಾರತ ಮತ್ತು ಪಾಕಿಸ್ತಾನದ ನಡುವೆ ಅನೇಕ ವರ್ಷಗಳ ನಂತರ ಭಾರೀ ಕಾನೂನು ಸಂಘರ್ಷಕ್ಕೆ ಕಾರಣವಾದ ಈ ಪ್ರಕರಣ ಅಂತಾರಾಷ್ಟ್ರೀಯ ಮಟ್ಟದಲ್ಲೂ ತೀವ್ರ ಕುತೂಹಲ ಕೆರಳಿಸಿದೆ.
ನೆದರ್ಲೆಂಡ್ಸ್ನ ಹೇಗ್ನಲ್ಲಿರುವ ವಿಶ್ವಸಂಸ್ಥೆಯ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಮುಖ್ಯ ನ್ಯಾಯಮೂರ್ತಿ ಅಬ್ರಾಹಾಂ ನೇತೃತ್ವದ 11 ನ್ಯಾಯಾಧೀಶರ ಪೀಠದ ಮುಂದೆ ಇಂದು ಸಹ ಭಾರತ ತನ್ನ ಸಮರ್ಥ ವಾದವನ್ನು ಮಂಡಿಸಿತು. ಭಾರತವನ್ನು ಪ್ರತಿನಿಧಿಸಿರುವ ಹಿರಿಯ ವಕೀಲ ಹರೀಶ್ ಸಾಳ್ವೆ ಮತ್ತು ದೀಪಕ್ ಮಿತ್ತಲ್, ಪಾಕಿಸ್ತಾನದ ಏಕಪಕ್ಷೀಯ ನಿರ್ಧಾರದ ವಿರುದ್ಧ ಇಂದು ಕೂಡ ಬಲವಾದ ವಾದಗಳನ್ನು ದಾಖಲಿಸಿ ಪೂರಕ ಸಾಕ್ಷ್ಯಾಧಾರಗಳನ್ನು ಒದಗಿಸಿದರು.
ಮೇ 15ರಂದು ನಡೆದ ವಿಚಾರಣೆ ವೇಳೆ ಸುಮಾರು 90 ನಿಮಿಷಗಳ ಕಾಲ ವಾದ ಮಂಡಿಸಿದ್ದ ಸಾಳ್ವೆ,ಜಾಧವ್ ಅವರಿಗೆ ಪಾಕ್ ಮಿಲಿಟರಿ ನ್ಯಾಯಾಲಯ ವಿಧಿಸಿರುವ ಗಲ್ಲು ಶಿಕ್ಷೆಯು ವಿಯೆನ್ನಾ ಮತ್ತು ಇತರ ಅಂತಾರಾಷ್ಟ್ರೀಯ ಸಮಾವೇಶದ ನಿರ್ಣಯಕ್ಕೆ ವಿರುದ್ಧವಾಗಿದೆ. ಹೀಗಾಗಿ ಅವರನ್ನು ಮರಣದಂಡನೆಯಿಂದ ಮುಕ್ತಗೊಳಿಸಬೇಕು ಎಂದು ವಾದಿಸಿದ್ದರು. ಅಂತಾರಾಷ್ಟ್ರೀಯ ಕೋರ್ಟ್ನಲ್ಲಿ ಪಾಕಿಸ್ತಾನಕ್ಕೆ ಮುಖಭಂಗವಾಗಿತ್ತು.
ಬೇಹುಗಾರಿಕೆ ಆರೋಪದ ಮೇಲೆ ಜಾಧವ್ ಅವರನ್ನು ಏಕಪಕ್ಷೀಯವಾಗಿ ವಿಚಾರಣೆ ನಡೆಸಿದ ಪಾಕ್ ಮಿಲಿಟರಿ ಕೋರ್ಟ್ ಅವರಿಗೆ ಮರಣದಂಡನೆ ವಿಧಿಸಿತ್ತು.
ಜಾಧವ್ ಅವರನ್ನು ಕಳೆದ ವರ್ಷ ಪಾಕಿಸ್ತಾನದ ಬೇಹುಗಾರಿಕೆ ಸಂಸ್ಥೆ ಐಎಸ್ಐ ಏಜೆಂಟ್ಗಳು ಇರಾನಿನಿಂದ ಅಪಹರಿಸಿ, ಪಾಕ್ಗೆ ಕರೆದೊಯ್ದಿತ್ತು. ನಂತರ ಅವರ ಮೇಲೆ ಗೂಢಚಾರಿಕೆ ಆರೋಪ ಹೊರೆಸಲಾಗಿತ್ತು.
< Eesanje News 24/7 ನ್ಯೂಸ್ ಆ್ಯಪ್ >