ಅಕ್ಕ ವಿಶ್ವ ಕನ್ನಡ ಸಮ್ಮೇಳನದಲ್ಲಿ ಜನಮನ ಗೆದ್ದ ಹರಟೆ

Spread the love

kaduru
ಕಡೂರು, ಸೆ.8- ಅಮೆರಿಕದ ನ್ಯೂಜೆರ್ಸಿಯಲ್ಲಿ ನಡೆದ 9ನೆ ಅಕ್ಕ ವಿಶ್ವ ಕನ್ನಡ ಸಮ್ಮೇಳನದಲ್ಲಿ ಆಯೋಜಿಸಿದ್ದ ಚಿಂತಕರ ಚಾವಡಿಯ ಹರಟೆ ಕನ್ನಡಾಭಿಮಾನಿಗಳ ಮನ ಗೆಲ್ಲುವಲ್ಲಿ ಯಶಸ್ವಿಯಾಯಿತು. ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಮಾರ್ಗದರ್ಶನದಲ್ಲಿ ನಡೆದ ಹರಟೆಯಲ್ಲಿ ಸಾಮಾಜಿಕ ಜಾಲ ತಾಣಗಳು ಇಂದು ಪೂರಕವೋ-ಮಾರಕವೋ, ಉಪಕಾರವೋ-ಉಪದ್ರವವೋ ಎಂಬ ನೆಲೆಯಲ್ಲಿ ಪರ-ವಿರೋಧದ ಪರಿಣಾಮಕಾರಿ ಸಂವಾದ ನಡೆದು ಕಾವೇರಿದ ಬಿಸಿ ಹಾಗೂ ನಗೆ ತರಿಸಿದ ಹಾಸ್ಯದಿಂದ ಅರ್ಥಪೂರ್ಣ ಚರ್ಚೆಯಾಗಿ ಸಾರ್ಥಕ್ಯ ಪಡೆಯಿತು. ಕವಿ ಸಿದ್ದಲಿಂಗಯ್ಯ, ವಿಮರ್ಶಕ ಓ.ಎಲ್  ನಾಗಭೂಷಣಸ್ವಾಮಿ,   ಪ್ರೊ ರ.ಕೃಷ್ಣೇಗೌಡ, ಚಟ್ನಳ್ಳಿ ಮಹೇಶ್, ರವಿ ಹರಪನಹಳ್ಳಿ, ಕವಯತ್ರಿ ಶರೀಫ, ಶರಣಬಸಪ್ಪ ಪಾಟೀಲ್ ಹಾಗೂ ಕನ್ನಡ ಮತ್ತು  ಸಂಸ್ಕೃತಿ  ಇಲಾಖೆ ನಿರ್ದೇಶಕ ದಯಾನಂದ್ ಸಮರ್ಥವಾಗಿ ತಮ್ಮ ನಿಲುವು ಮಂಡಿಸಿದರು.

ವಿಜ್ಞಾನ -ತಂತ್ರಜ್ಞಾನದ ಆವಿಷ್ಕಾರಗಳಿಂದಲೇ ನಾಗರಿಕ ಬದುಕಿಗೊಂದು ಅರ್ಥ.ಅತಿವೇಗದ ಮಾಹಿತಿ ಸಂಪರ್ಕದಿಂದ ಜಗತ್ತೇ ಒಂದು ಕುಟುಂಬವಾಗಿ, ಸಾಮರಸ್ಯ ಹಾಗೂ ಸಹ ಜೀವನಕ್ಕೆ ಪೂರಕವಾಗಿರುವ ಈ ಸಾಮಾಜಿಕ ಜಲತಾಣ ಇಂದಿನ ಬದುಕಿಗೆ ಅನಿವಾರ್ಯ ಎಂದು ವಿಷಯದ ಪರವಾದಿಗಳು ಪ್ರತಿಪಾದಿಸಿದರು. ಅಂತಿಮವಾಗಿ ಈ ಜಾಲ ತಾಣ ಅಗತ್ಯವೋ-ಅನಿವಾರ್ಯವೋ ಎಂಬ  ಪ್ರಜ್ಞೆಯೊಂದಿಗೆ  ಬಳಕೆದಾರನ ವಿವೇಕದಿಂದ ಪ್ರೇರಕವೂ ಆಗಬಹುದು- ಮಾರಕವೂ ಆಗಬಹುದೆಂಬ ಸಹಮತದ ನಿಲುವಿನೊಂದಿಗೆ ಗೋಷ್ಠಿ ಸುಸಂಪನ್ನಗೊಂಡಿತು.ಚಟ್ನಳ್ಳಿ ಮಹೇಶ್ ಮಾತನಾಡಿ, ತಾನೂ ಬದುಕಿ ಇತರರ ಬದುಕಿಗೂ ನೆರವೀಯುವ ಮೂಲಕ ಸರ್ವರ ಬಾಳು ಒಂದು ವರವಾಗಬೇಕೆಂಬ ಸಹಬಾಳ್ವೆಯ ದಿವ್ಯ ತತ್ವವೇ ಕನ್ನಡ ಸಾಹಿತ್ಯದ ಜೀವಸತ್ವ ಎಂದು ತಿಳಿಸಿದರು.

 

► Follow us on –  Facebook / Twitter  / Google+

Sri Raghav

Admin