ಅಕ್ರಮ ದಂಧೆಕೋರರೊಂದಿಗೆ ಅಧಿಕಾರಿಗಳು ಶಾಮೀಲು : ಆರೋಪ

Spread the love

beluru

ಬೇಲೂರು, ಅ.6- ಹಳೇಬೀಡು ಹೋಬಳಿಯ ಸಾಕಷ್ಟು ಗ್ರಾಮಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮತ್ತು ಇಸ್ಪೀಟ್ ಕ್ಲಬ್‍ಗಳು ನಡೆಯುತಿದ್ದರೂ ಸಂಬಂಧಿಸಿದ ಅಧಿಕಾರಿಗಳು ಯಾವುದೆ ಕ್ರಮ ಕೈಗೊಳ್ಳದೆ ಇರುವುದು ನೋಡಿದರೆ, ಈ ಅಕ್ರಮ ದಂಧೆಕೋರರೊಂದಿಗೆ ಅಧಿಕಾರಿಗಳು ಶಾಮೀಲಾಗಿರುವ ಬಗ್ಗೆ ಅನುಮಾನಗಳು ವ್ಯಕ್ತವಾಗುತ್ತಿದೆ ಎಂದು ದಸಂಸ(ಕೃಷ್ಣಪ್ಪ) ಸ್ಥಾಪಿತ ಜಿಲ್ಲಾ ಸಂಘಟನಾ ಸಂಚಾಲಕ ಲಿಂಗರಾಜು ದೂರಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಳೇಬೀಡು ಮತ್ತು ಮಾಧಿಹಳ್ಳಿ ಹೋಬಳಿಗಳ ಸಾಣೇನಹಳ್ಳಿ, ಗಂಗೂರು, ಬಂಡಿಲಕ್ಕನಕೊಪ್ಪಲು, ದೊಡ್ಡಕೋಡಿಹಳ್ಳಿ ನಂಜಾಪುರ ಹಾಗೂ ಇನ್ನಿತರೆ ಗ್ರಾಮಗಳಲ್ಲಿನ ಅಂಗಡಿ ಮತ್ತು ಹೋಟೆಲ್‍ಗಳಿಗೆ ಹಳೇಬೀಡು ಮತ್ತು ಹಗರೆಯ ಬಾರ್ ಮತ್ತು ವೈನ್ ಶಾಪ್‍ಗಳಿಂದ ಮಾಲೀಕರೆ ಅಕ್ರಮವಾಗಿ ಮದ್ಯಗಳನ್ನು ನೇರವಾಗಿ ಗ್ರಾಮಗಳಿಗೆ ಸರಬರಾಜು ಮಾಡುವ ಮುಲಕ ಗ್ರಾಮಗಳ ಜನರ ನೆಮ್ಮದಿಯನ್ನು ಹಾಳು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಇಷ್ಟಲ್ಲದೆ ಹಳೇಬೀಡಿನಲ್ಲಿ ಇಸ್ಪೀಟು ಆಟವನ್ನು ಆಡಿಸುತ್ತಿರುವುದು ಕಣ್ಣಿಗೆ ಎದ್ದು ಕಾಣುತ್ತಿದೆ. ಅಲ್ಲದೆ ಬಾರ್‍ಗಳನ್ನು ಬೆಳಗ್ಗೆ 10 ಗಂಟೆಗೆ ತೆರೆಯಬೇಕೆಂದು ನಿಯಮವಿದ್ದರೂ ಅದನ್ನು ಗಾಳಿಗೆ ತೂರಿ ಮುಂಜಾನೆ 5 ಗಂಟೆಯಿಂದ ರಾತ್ರಿ 12 ಗಂಟೆವರೆಗೆ ತೆಗೆದಿರುತ್ತಾರೆ. ಇದರಿಂದ ಪ್ರವಾಸಿ ತಾಣವಾದ ಹಳೇಬೀಡಿನಲ್ಲಿ ಕುಡುಕರ ಹಾವಳಿ ಹೆಚ್ಚಾಗುತ್ತಿದೆ. ಮತ್ತು ಬಾರ್‍ಗಳಲ್ಲಿ ಹಳೇಬೀಡು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇಸ್ಪೀಟ್ ದಂಧೆ ಎಗ್ಗಿಲ್ಲದೆ ನಡೆಯುತಿದ್ದರು ಪೊಲೀಸ್ ಇಲಾಖೆ ಅಧಿಕಾರಿಗಳು ಗಮನಹರಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ತಕ್ಷಣವೆ ಸಂಬಂಧಿಸಿದ ಅಬಕಾರಿ ಅಧಿಕಾರಿಗಳು ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳು ಗಮನಹರಿಸಿ ಕ್ರಮ ಕೈಗೊಳ್ಳದಿದ್ದಲ್ಲಿ ಸಂಬಂಧಿಸಿದ ಇಲಾಖೆಗಳ ಮುಂದೆ ಉಗ್ರವಾದ ಪ್ರತಿಭಟನೆಯನ್ನು ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಹುಲಿಕೆರೆ ಕುಮಾರ್, ಆನಂದ್, ಭೈರೇಶ್, ಹರೀಶ್ ಇದ್ದರು.

 

► Follow us on –  Facebook / Twitter  / Google+

 

Facebook Comments

Sri Raghav

Admin