ಅಕ್ರಮ ಲಾರಿಗಳನ್ನು ಟಚ್ ಮಾಡಕ್ಕೆ ಭಯಾನಾ? ಹಾಕ್ರಿ ಕೇಸ್,ಬಡೀರಿ ನೋಡೋಣ

lorry
ಬಾಗೇಪಲ್ಲಿ, ಮಾ.25- ಪ್ರತಿ ನಿತ್ಯ ಬಾಗೇಪಲ್ಲಿ ಮತ್ತು ಗುಡಿಬಂಡೆ ತಾಲ್ಲೂಕಿನಿಂದ ಅಕ್ರಮ ಗಣಿಗಾರಿಕೆಯ ಹಲವಾರು ಲಾರಿಗಳು ಸಂಚರಿಸುತ್ತಿದ್ದು, ಇದ್ಯಾವುದೂ ನಿಮ್ಮ ಕಣ್ಣಿಗೆ ಕಾಣಿಸುತ್ತಿಲ್ಲವೆ? ಇವುಗಳನ್ನು ಟಚ್ ಮಾಡಕ್ಕೆ ನಿಮಗೆ ಭಯಾನಾ? ಹಾಕ್ರಿ ಕೇಸ್, ಬಡೀರಿ ನೋಡೋಣ.. ಹೀಗೆ ಶಾಸಕ ಎಸ್.ಎನ್. ಸುಬ್ಬಾರೆಡ್ಡಿಯವರು ಅಧಿಕಾರಿಗಳ ವಿರುದ್ದ ಕೆಂಡಾಮಂಡಲವಾದ ಸನ್ನಿವೇಶ ಕಂಡು ಬಂದಿತು. ಅಕ್ರಮ ಗಣಿಗಾರಿಕೆ ಮತ್ತು ಮರಳು ಸಾಗಾಣಿಕೆ ನಿಲ್ಲಿಸುವ ಸಲುವಾಗಿಯೇ ಇಲ್ಲಿನ ತಾಪಂ ಸಭಾಂಗಣದಲ್ಲಿ ಬಾಗೇಪಲ್ಲಿ ಮತ್ತು ಗುಡಿಬಂಡೆ ತಾಲ್ಲೂಕುಗಳ ಪೋಲಿಸ್ ಅಧಿಕಾರಿಗಳು, ತಹಶೀಲ್ದಾರರು, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಹಾಗು ಆರ್‍ಟಿಒ ಅಧಿಕಾರಿಗಳ ಸಭೆಯನ್ನು ಕರೆದು ಅಕ್ರಮ ಗಣಿಗಾರಿಕೆ ಮತ್ತು ಮರಳು ಸಾಗಾಣಿಕೆ ನಿಲ್ಲಿಸುವಲ್ಲಿ ವಿಫಲವಾಗಿರುವ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಗುಡಿಬಂಡೆ ತಾಲೂಕಿನಲ್ಲಿ ನಡೆಯುತ್ತಿರುವ ಜಲ್ಲಿ ಕ್ರಷರುಗಳ ಬಗ್ಗೆ ಮಾತನಾಡಿದಾಗ 6 ಜಲ್ಲಿ ಕ್ರಷರ್‍ಗಳಿವೆ ಎಂದು ಇನ್ಸ್‍ಪೆಕ್ಟರ್ ಗೌತಮ್ ತಿಳಿಸಿದಾಗ ಮೊದಲು ಬೆಟ್ಟ ಹತ್ತಿ ನೋಡಿ ಎಷ್ಟಿವೆ ಎಂದು ಗೊತ್ತಾಗುತ್ತೆ. ಪರವಾನಗಿ ಇಲ್ಲದೆ ನಡೆಸುತ್ತಿರುವ ಜಲ್ಲಿ ಕ್ರಷರುಗಳನ್ನು ಹೇಗೆ ಬಿಡ್ತಿದ್ದೀರಿ ಎಂದು ಪ್ರಶ್ನಿಸಿದರು. ಈಗಾಗಲೇ ಗುಡಿಬಂಡೆ ಠಾಣೆಯಲ್ಲಿ 98 ಕೇಸ್ ಹಾಕಿದ್ದೇವೆ ಎಂದು ತಿಳಿಸಿದಾಗ ಕಾಟಾಚಾರದ ಕೇಸ್ ಬೇಡ. ಅಕ್ರಮವಾಗಿ ಗಣಿಗಾರಿಕೆಯನ್ನು ನಡೆಸುತ್ತಿರುವವರು ಯಾರನ್ನೂ ಕೇರ್ ಮಾಡುವುದಿಲ್ಲ. ಮೊದಲು ಅನಧಿಕೃತ ಜಲ್ಲಿ ಕ್ರಷರುಗಳನ್ನು ನಿಲ್ಲಿಸಿ ನಿಗದಿತವಾದ ತೂಕಕ್ಕಿಂತ ಹೆಚ್ಚಿಗೆ ಸಾಗಿಸುತ್ತಿರುವ ಟಿಪ್ಪರುಗಳು ಮತ್ತು ಅಕ್ರಮವಾಗಿ ಮರಳು ಸಾಗಿಸುತ್ತಿರುವ ಲಾರಿಗಳನ್ನು ಹಿಡಿದು ಹಾಕ್ರಿ ಎಂದು ತಹಶೀಲ್ದಾರ್ ನಂಜಪ್ಪ ಮತ್ತು ಇನ್ಸ್‍ಪೆಕ್ಟರ್ ಗೌತಮ್‍ರವರಿಗೆ ಸೂಚಿಸಿದರು.
ಬಾಗೇಪಲ್ಲಿ ತಾಲ್ಲೂಕಿನಿಂದಲೇ ನಿತ್ಯ ಅಕ್ರಮ ಗಣಿಗಾರಿಕೆಯ 15 ಲಾರಿಗಳು ಸಂಚರಿಸುತ್ತಿವೆ. ಬಹುತೇಕ ಕಡೆಗಳಲ್ಲಿ ಯಾವುದೇ ಪರವಾನಗಿಯಿಲ್ಲದೆ ಗಣಿಗಾರಿಕೆಯನ್ನು ನಡೆಸಲಾಗುತ್ತಿದೆ. ನಿಮ್ಮ ಪೋಲಿಸ್ ಠಾಣೆಯ ಮುಂಭಾಗದಲ್ಲಿಯೇ ರಾಜಾರೋಷವಾಗಿ ಸಂಚರಿಸುತ್ತಿದ್ದರೂ ಅವುಗಳನ್ನು ನೀವು ಟಚ್ ಮಾಡಕ್ಕೆ ಆಗುತ್ತಿಲ್ಲ ಯಾಕೆ? ತಾಲ್ಲೂಕಿನ ವಿವಿದ ಕಡೆಗಳಿಂದ ನಿತ್ಯ ಹಲವಾರು ಲಾರಿಗಳಲ್ಲಿ ಮರಳು ಸಾಗಾಟ ನಡೆಯುತ್ತಿದೆ ಇದನ್ನು ಯಾಕೆ ತಡೆಯುತ್ತಿಲ್ಲ ನಿಮಗೇನು ಭಯಾನಾ? ಎಂದು ಸರ್ಕಲ್ ಇನ್ಸ್‍ಪೆಕ್ಟರ್ ಗೋವಿಂದರಾಜು ರವರನ್ನು ಪ್ರಶ್ನಿಸಿದಾಗ ನೋಟೀಸ್ ಕೊಡ್ತೀನಿ ಎಂದಾಗ ಅವರು ನೋಟೀಸುಗಳಿಗೆ ಹೆದರುವುದಿಲ್ಲ ಮೊದಲು ಹಾಕ್ರಿ ಕೇಸ್,ಬಡೀರಿ ನೋಡೋಣ ಎಂದು ಕಟುವಾಗಿ ಸೂಚಿಸಿದರು.

ನಾನೇ ಪೋನ್ ಮಾಡಿದರು ಬಿಡಬೇಡಿ: ನಾನು ಎಂದೂ ಅಕ್ರಮ ಗಣಿಗಾರಿಕೆ ಮಾಡುವವರಿಗೆ ಬೆಂಬಲ ನೀಡುವುದಿಲ್ಲ.ಅವರಿಂದ ನನಗೇನೂ ಆಗಬೇಕಿಲ್ಲ. ಯಾವನಿಂದಲೂ ಅರ್ಧಕಾಫಿ ಸಹ ನಾನು ಕುಡಿದಿಲ್ಲ, ನಿಮ್ಮ ಕೆಲಸಕ್ಕೆ ನಾನು ಎಂದು ಅಡ್ಡಿಯಾಗುವುದಿಲ್ಲ. ವಸ್ತುಸ್ಥಿತಿ ಹೀಗಿರಬೇಕಾದರೆ ಅಧಿಕಾರಿಗಳು ನಿರ್ಧಾಕ್ಷಿಣ್ಯ ಕ್ರಮ ಜರುಗಿಸುತ್ತಿಲ್ಲವೇಕೆ ಎಂದರು.ನಿಮ್ಮ ವರ್ತನೆಯಿಂದ ಸಮಾಜಕ್ಕೆ ತಪ್ಪು ಸಂದೇಶ ಹೋಗುತ್ತದೆ, ನನಗೆ ಅಪಕೀರ್ತಿ ಬರುತ್ತದೆ. ನೈಸರ್ಗಿಕ ಸಂಪತ್ತನ್ನು ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿಯಲ್ಲವೆ? ನೀವು ಯಾರ ಮುಲಾಜಿಗೂ ಮಣಿಯಬೇಡಿ, ಯಾರ ಪೋನ್ ಮಾಡಿದರು ಅಕ್ರಮ ಗಣಿಗಾರಿಕೆಯ ಲಾರಿಗಳನ್ನು ಬಿಡಬೇಡಿ, ಸ್ವತಃ ನಾನೇ ಪೋನ್ ಮಾಡಿದರು ಬಿಡಬೇಡಿ ಎಂದು ಸೂಚಿಸಿದರು.ಸಭೆಯಲ್ಲಿ ಗುಡಿಬಂಡೆ ತಹಶೀಲ್ದಾರ್ ನಂಜಪ್ಪ, ಇನ್ಸ್‍ಪೆಕ್ಟರ್ ಗೌರಮ್, ಬಾಗೇಪಲ್ಲಿ ಸರ್ಕಲ್ ಇನ್ಸ್‍ಪೆಕ್ಟರ್ ಗೋವಿಂದರಾಜು, ಸಬ್ ಇನ್ಸ್‍ಪೆಕ್ಟರ್ ವೆಂಕಟೇಶ್, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಿರಿಯ ವಿಜ್ಞಾನಿ ರಾನ್ ಜಿ ನಾಯಕ್, ಆರ್‍ಟಿಒ ಅಧಿಕಾರಿ ಕಮಲ್ ಬಾಬು ಮತ್ತಿತರರು ಉಪಸ್ಥಿತರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin