ಅಕ್ರಮ ಶಸ್ತ್ರಾಸ್ತ್ರ ಬಳಸಿದ ಪ್ರಕರಣದಲ್ಲಿ ಸಲ್ಮಾನ್ ಖಾನ್ ಖುಲಾಸೆ

Spread the love

Salman-Khan-01

ಜೋಧ್‍ಪುರ್ (ರಾಜಸ್ತಾನ), ಜ.18-ಹದಿನೆಂಟು ವರ್ಷಗಳ ಹಿಂದೆ (1998) ಎರಡು ಕೃಷ್ಣಮೃಗಗಳನ್ನು ಬೇಟೆಯಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ರಮ ಶಸ್ತ್ರಾಸ್ತ್ರ ಬಳಸಿದ ಆರೋಪಕ್ಕೆ ಗುರಿಯಾಗಿದ್ದ ಬಾಲಿವುಡ್ ಖ್ಯಾತ ನಟ ಸಲ್ಮಾನ್‍ಖಾನ್‍ರನ್ನು ರಾಜಸ್ತಾನದ ಜೋಧ್‍ಪುರ್ ಜೆಸಿಎಂ ನ್ಯಾಯಾಲಯ ಖುಲಾಸೆಗೊಳಿಸಿದೆ. ಇದರೊಂದಿಗೆ ಸಲ್ಮಾನ್‍ಗೆ ಬಿಗ್ ರಿಲೀಫ್ ದೊರೆತಂತಾಗಿದೆ.   ಮುಖ್ಯ ನ್ಯಾಯಿಕ ದಂಡಾಧಿಕಾರಿ (ಜೆಸಿಎಂ) ದಲ್ಪತ್ ಸಿಂಗ್ ರಾಜಪುರೋಹಿತ್ ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ 51 ವರ್ಷದ ಸಲ್ಮಾನ್‍ಖಾನ್‍ರನ್ನು ಈ ಆರೋಪದಿಂದ ಖುಲಾಸೆಗೊಳಿಸಿ ತೀರ್ಪು ನೀಡಿದರು.

ಜೋಧ್‍ಪುರ್ ಸಮೀಪದ ಕಾನ್‍ಕಾನಿ ಪ್ರದೇಶದಲ್ಲಿ ಅಕ್ಟೋಬರ್ 1 ಮತ್ತು 2ರಂದು ಹಮ್ ಸಾಥ್ ಸಾಥ್ ಹೈ ಸಿನಿಮಾ ಚಿತ್ರೀಕರಣದ ವೇಳೆ ಅಳಿವಿನ ಅಂಚಿನಲ್ಲಿರುವ ಎರಡು ಕೃಷ್ಣಮೃಗಗಳನ್ನು (ಬ್ಲಾಕ್‍ಬಕ್) ಸಲ್ಮಾನ್ ಬೇಟೆಯಾಡಿ ಕೊಂದಿದ್ದರು ಎಂದು ಆರೋಪಿಸಲಾಗಿತ್ತು. ಈ ಬೇಟೆಗೆ ಅಕ್ರಮ ಶಸ್ತ್ರಾಸ್ತ್ರಗಳನ್ನು ಬಳಸಿದ ಆರೋಪವೂ ಬಾಲಿವುಡ್ ನಟನ ಮೇಲಿತ್ತು. ವನ್ಯಜೀವಿ (ಸಂರಕ್ಷಣಾ) ಕಾಯ್ದೆ, ಹಾಗೂ ಶಸ್ತ್ರಾಸ್ತ್ರ ಕಾಯ್ದೆಯ 3.25 ಮತ್ತು 3.27 ಸೆಕ್ಷನ್‍ಗಳ ಅಡಿ ಇವರ ವಿರುದ್ಧ ಪ್ರಕರಣ ದಾಖಲಾಗಿತ್ತು.. ಈ ಸಂಬಂಧ ಬಾಲಿವುಡ್ ತಾರೆಯರರಾದ ಸೈಫ್ ಅಲಿ ಖಾನ್, ಟಬು, ನೀಲಂ ಮತ್ತು ಸೋನಾಲಿ ಬೇಂದ್ರೆ ಅವರಿಗೂ ಈ ಹಿಂದೆ ಸಮನ್ಸ್‍ಗಳನ್ನು ಜಾರಿಗೊಳಿಸಲಾಗಿತ್ತು.

1998ರ ಸೆಪ್ಟೆಂಬರ್‍ನಲ್ಲೇ ಲೈಸನ್ಸ್ ಅವಧಿ ಮುಗಿದಿದ್ದ ಅಮೆರಿಕನ್ ರೈಫಲ್ ಮತ್ತು ರಿವಾಲ್ವರ್ ಬಳಸಿ ಸಲ್ಮಾನ್ ಕೃಷ್ಣಮೃಗಗಳನ್ನು ಭೇಟೆಯಾಡಿ ಕೊಂದಿದ್ದರು ಎಂಬ ಆರೋಪಗಳ ಸಂಬಂಧ ಜೋಧ್‍ಪುರ್ ಸೆಷನ್ಸ್ ಕೋರ್ಟ್‍ನಲ್ಲಿ ಸುದೀರ್ಘ ವಿಚಾರಣೆ ನಡೆದಿತ್ತು.  ಈ ಪ್ರಕರಣದ ವಾದ-ಪ್ರತಿವಾದಗಳ ಪ್ರಕ್ರಿಯೆ ಜನವರಿ 9ರಂದು ಪೂರ್ಣಗೊಂಡಿತ್ತು. ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಸಂದರ್ಭದಲ್ಲಿ ಸಲ್ಮಾನ್ ಖಾನ್ ಬಳಿ ಇಂಥ ಯಾವುದೇ ಶಸ್ತ್ರಾಸ್ತ್ರಗಳು ಇರಲಿಲ್ಲ. ಅವರ ಬಳಿ ಇದ್ದದ್ದು ಅಪಾಯಕಾರಿಯಲ್ಲದ ಏರ್‍ಗನ್ ಎಂದು ಅವರ ಪರ ವಕೀಲ ಎಚ್.ಎಂ.ಸಾರಸ್ವತ್ ಈ ಹಿಂದೆ ವಾದಿಸಿದ್ದರು.

ಇಂದು ಕೂಡ ವಾದಿ ಮತ್ತು ಪ್ರತಿವಾದಿಗಳ ವಕೀಲರ ವಾದ ಮಂಡನೆಗಳನ್ನು ಆಲಿಸಿದ ಸಿಜೆಎಂ ರಾಜಪುರೋಹಿತ್, ಈ ಪ್ರಕರಣದಲ್ಲಿ ಸಾಕ್ಷ್ಯಾಧಾರಗಳ ಕೊರತೆ ಇದೆ. ಸಲ್ಮಾನ್ ಖಾನ್ ಬೇಟೆ ಸಂದರ್ಭದಲ್ಲಿ ಅಕ್ರಮ ಶಸ್ತ್ರಾಸ್ತ್ರಗಳನ್ನು ಹೊಂದಿದ್ದರು ಎಂಬುದನ್ನು ಸಾಬೀತು ಮಾಡುವ ದಾಖಲೆಗಳು ಇದರ ಕಾರಣ ಅವರನ್ನು ನಿರ್ದೋಷಿ ಎಂದು ಘೋಷಿಸುವುದಾಗಿ ತೀರ್ಪು ನೀಡಿದರು.
ಅರ್ಧಗಂಟೆ ತಡವಾಗಿ ಕೋರ್ಟ್‍ಗೆ ಬಂದ ಸಲ್ಮಾನ್ : ಈ ಪ್ರಕರಣದ ಅಂತಿಮ ತೀರ್ಪು ಇಂದು ಇರುವ ಕಾರಣ ಖುದ್ದು ಹಾಜರಾಗುವಂತೆ ಸಲ್ಮಾನ್‍ಗೆ ಸೂಚನೆ ನೀಡಲಾಗಿತ್ತು. ತಮ್ಮ ಸಹೋದರಿ ಅಲ್ವಾರಿ ಅವರೊಂದಿಗೆ ನಿನ್ನೆ ರಾತ್ರಿಯೇ ಜೋಧ್‍ಪುರ್‍ಗೆ ಆಗಮಿಸಿದ್ದರು. ತಾವು ವಾಸ್ತವ್ಯ ಹೂಡಿದ್ದ ಹೋಟೆಲ್‍ನಿಂದ ಕೋರ್ಟ್ ತಲುಪಲು ಕೇವಲ ಏಳು ನಿಮಿಷಗಳು ಸಾಕು.

ಆದರೆ ಟಿಂಟೆಡ್ ಗ್ಲಾಸ್ ಅಳವಡಿಸಿದ್ದ ಅವರ ಕಾರು ಕೋರ್ಟ್‍ನತ್ತ ತೆರಳುತ್ತಿದ್ದಾಗ. ಮಾರ್ಗಮಧ್ಯೆ ಪೊಲೀಸರು ತಡೆದು ಪ್ರಶ್ನಿಸಿದರು. ಇದರಿಂದ ವಿಳಂಬವಾಗುವುದನ್ನು ಮನಗಂಡ ಸಲ್ಮಾನ್ ತಮ್ಮ ವಕೀಲರಿಗೆ ಸುದ್ದಿ ಮುಟ್ಟಿಸಿ ವಿಳಂಬಕ್ಕಾಗಿ ಅನುಮತಿ ಕೋರುವಂತೆ ತಿಳಿಸಿದ್ದರು. ಅದರಂತೆ ಕೋರ್ಟ್ ಅವರಿಗೆ ಅರ್ಧಗಂಟೆಯೊಳಗೆ ಹಾಜರಿರುವಂತೆ ಸೂಚಿಸಿತ್ತು. ತಡವಾಗಿ ನ್ಯಾಯಾಲಯಕ್ಕೆ ಬಂದ ಬಾಲಿವುಡ್ ನಟನನ್ನು ನ್ಯಾಯಾಧೀಶರು ತರಾಟೆಗೆ ತೆಗೆದುಕೊಂಡು ಕೆಲವೇ ನಿಮಿಷಗಳಲ್ಲಿ ತೀರ್ಪು ಪ್ರಕಟಿಸಿದರು.  ಕೋರ್ಟ್ ಮುಂದೆ ಅಸಂಖ್ಯಾತ ಜನರು ಜಮಾಯಿಸಿದ್ದ ಕಾರಣ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.

ಸಲ್ಮಾನ್ ಸಂತಸ:


ಸುದ್ದಿಗಾರರೊಂದಿಗೆ ಮಾತನಾಡಿದ ಸಲ್ಮಾನ್, ಅಪಾರ ಅಭಿಮಾನಿಗಳು ಮತ್ತು ಬೆಂಬಲಿಗರ ಆಶೀರ್ವಾದ, ಶುಭ ಹಾರೈಕೆ ಮತ್ತು ಪ್ರಾರ್ಥನೆಯಿಂದ ನಾನು ಈ ಪ್ರಕರಣದಿಂದ ಖುಲಾಸೆಗೊಂಡಿರುವುದಕ್ಕೆ ಅತೀವ ಸಂತಸವಾಗುತ್ತಿದೆ ಎಂದು ನುಡಿದರು.

Facebook Comments

Sri Raghav

Admin