ಅಕ್ಷರ ದಾಸೋಹ ಅಕ್ಕರೆಯ ಗುರುಮೂರ್ತಿ : ಬಡಮಕ್ಕಳ ಕಣ್ಮಣಿ ಅಣ್ಣಿಗೇರಿ ಗುರುಗಳು.!

BELGAM-1

ಒಂದು ದೇಶ ಅಭಿವೃದ್ದಿ ಹೊಂದಲು ಶಿಕ್ಷಣ ಅತಿಮುಖ್ಯ. ದೇಶ ಅಭಿವೃದ್ದಿ ಹೊಂದಲು ನಿಜವಾದ ಶಿಲ್ಪಿಗಳು ಶಿಕ್ಷಕ ಮತ್ತು ಇಂದಿನ ಯುವ ಪೀಳಿಗೆಯನ್ನು ಉತ್ತಮ ಮಾಡುವ ಶಿಕ್ಷಣ. ಶಿಕ್ಷಕ ದೇಶದ ಬೆನ್ನಲುಬು – ಶಿಕ್ಷಣ ದೇಶದ ಅಭಿವೃದ್ದಿಯ ಬೆನ್ನಲುಬು. ದೇಶ ಕಟ್ಟುವಲ್ಲಿ, ಉತ್ತಮ ಸಮಾಜ ನಿರ್ಮಾಣ ಮಾಡುವಲ್ಲಿ ಹೊಣೆ ಹೊತ್ತ ಶಿಕ್ಷಕರು ಸಮಾಜದಲ್ಲಿ ಸದಾ ಪೂಜ್ಯನೀಯ ಸ್ಥಾನಕ್ಕೆ ಭಾಜನರು. ಪ್ರತಿಯೊಬ್ಬರ ಜೀವನದಲ್ಲಿಯೂ ಒಬ್ಬ ಮುಖ್ಯ ವ್ಯಕ್ತಿ ಇರುತ್ತಾರೆ. ಅಂತಹ ವ್ಯಕ್ತಿಯನ್ನು ನಿಮಗಿಂದು ಪರಿಚಯಸಲೇಬೇಕು. ಅವರು ಬೇರೆ ಯಾರು ಅಲ್ಲ… ಬಡ ವಿದ್ಯಾರ್ಥಿಗಳ ಜೀವನದಲ್ಲಿ ಅನೇಕ ಬದವಾವಣೆ ತಂದ ಪ್ರೀತಿಯ ಶಿಕ್ಷಕ ಹಾಗೂ ಸ್ವಂತ ಗುರುಕುಲ ಸ್ಥಾಪಿಸಿ ಸಂತರಂತೆ ಬದುಕುತ್ತಿರುವ ಬಿ.ಜಿ. ಅಣ್ಣಿಗೇರಿ ಗುರುಗಳು.

ಬಿಳಿಪಂಚೆ, ಬಿಳಿ ಶರ್ಟ್ ಧರಿಸಿ, ತಲೆ ಮೇಲೆ ಟೋಪಿ ಕೈಯಲ್ಲಿ ಬೆತ್ತ ಹಿಡದ ಪ್ರೀತಿಯ ಗುರುಗಳು, ನಾಡು-ನುಡಿ ಸಮಾಜದ ಬಗ್ಗೆ ಅಪಾರ ಕಳಕಳಿ ಹೊಂದಿದ ಇವರು ಅಂದಿನ ಕಾಲದ ಗುರುಕುಲ ಪದ್ದತಿಯನ್ನು ಇಂದಿಗೂ ಜೀವಂತವಾಗಿಟ್ಟುಕೊಂಡು ಹೋಗುತ್ತಿರುವುದು ಅವರ ವ್ಯಕ್ತಿತ್ವಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಅವರು ಜಿಲ್ಲೆಯ ರೋಣ ತಾಲೂಕಿನ ಮುದೇನಗುಡಿಯಲ್ಲಿ 1930 ಜುಲೈ 23ರಂದು ಜನಿಸಿ ಬಿ.ಎ.ಬಿ.ಎಡ್ ಪದವಿ ಪೂರೈಸಿದ್ದಾರೆ. 1954ರಲ್ಲಿ ಶಿಕ್ಷಕರಾಗಿ ಸೇವೆ ಪ್ರಾರಂಭಿಸಿದ ಇವರು ನಿರಂತರವಾಗಿ ತಮ್ಮ ಇಡೀ ಜೀವನವನ್ನೆ ಮಕ್ಕಳ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಮಕ್ಕಳೆ ನನ್ನ ಆಸ್ತಿ…ಅವರ ಶೈಕ್ಷಣಿಕ ಪ್ರಗತಿಯಲ್ಲೇ ಸಂತೋಷ ಕಾಣುತ್ತೇನೆ ಎನ್ನುವ ಇವರು ಅಪ್ಪಟ ಬ್ರಹ್ಮಚಾರಿಗಳು. ಗುರುಕುಲ ಸ್ಥಾಪಿಸಿದ ಸಂತತಮ್ಮನ್ನು ತಾವೇ ಸವೆಸಿಕೊಂಡು ಮಕ್ಕಳಿಗೆ ಮತ್ತು ಶಿಕ್ಷಣಕ್ಕಾಗಿ ತಮ್ಮ ಸರ್ವಸ್ವವನ್ನೆ ಧಾರೆಯೆರೆಯುವ ಮೂಲಕ ರಾಜ್ಯಕ್ಕೆ ಅನೇಕ ಪ್ರತಿಭಾನ್ವಿತರನ್ನು ನೀಡಿದ ಕೀರ್ತಿಗೆ ಪಾತ್ರರಾಗಿದ್ದಾರೆ.ವ್ಯಾಪಾರಿಕರಣವಾದ ಇಂದಿನ ಶಿಕ್ಷಣ ಪದ್ಧತಿಯಲ್ಲಿ ನಗರದ ಮಾಡೆಲ್ ಹೈಸ್ಕೂಲ್‍ನಲ್ಲಿ 33 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿಯ ಬಳಿಕವೂ ಸ್ವಂತ ಗುರುಕುಲ ಸ್ಥಾಪಿಸಿ ವಿಧ್ಯಾರ್ಥಿಗಳಿಗೆ ಉಚಿತವಾಗಿ ಶಿಕ್ಷಣ ನೀಡುತ್ತಿರುವ ಏಕೈಕ ಧೀಮಂತ.

ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡಬೇಕು, ದೇಶದ ಒಳ್ಳೆಯ ಪ್ರಜೆಗಳನ್ನಾಗಿಸಬೇಕು ಎಂಬ ಧ್ಯೇಯೊದ್ದೇಶಗಳನ್ನು ಹೊಂದಿದ ಅಣ್ಣಿಗೇರಿ ಗುರುಗಳಿಗೆ 2000ನೇ ಇಸ್ವಿಯಲ್ಲಿ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ಆದರೆ ಯಾವುದೆ ಪ್ರಶಸ್ತಿಯಾಗಲಿ, ಪುರಸ್ಕಾರವಾಗಲಿ ಬಯಸಿದ ವ್ಯಕ್ತಿ ಇವರಲ್ಲ.  ಬಿ.ಜಿ. ಅಣ್ಣಿಗೇರಿ ಗುರುಗಳು ತಮ್ಮ ನಿವೃತ್ತಿ ಬಳಿಕ ಸ್ವಂತ ಗುರುಕುಲವನ್ನು ಸ್ಥಾಪಿಸಿ ತಮ್ಮಲ್ಲಿಯ ಜ್ಞಾನವನ್ನು ಮಕ್ಕಳಿಗೆ ಉಚಿತವಾಗಿ ದಾಸೊಹಿಸಬೇಕೆಂಬ ಆಸೆಯೊಂದಿಗೆ ತಮ್ಮ ಆಶ್ರಮದಲ್ಲಿ ಅದು ವಿಶೇಷವಾಗಿ ಬಡಮಕ್ಕಳಿಗೆಂದು ಜ್ಞಾನ ದಾಸೊಹದ ಜೊತೆ ಅನ್ನ ದಾಸೋಹ ನಡೆಸುತ್ತಾ ಬಂದಿದ್ದಾರೆ.

ಇವರು ನಯಾ ಪೈಸೆಗೂ ಆಸೆ ಪಡದ ವ್ಯಕ್ತಿ. ಮಕ್ಕಳಿಗೆ ಉಚಿತವಾಗಿ ಊಟ, ವಸತಿ ಕಲ್ಪಿಸಿ ಇಂದಿಗೂ ಗಣಿತ, ವಿಜ್ಞಾನ, ಸಾಮಾನ್ಯ ಜ್ಞಾನ ಇಂದಿನ ಸ್ಪರ್ದಾತ್ಮಕ ಪರಿಕ್ಷೆಗಳಾದ ನವೋದಯ, ಮೊರಾರ್ಜಿ ಇಂತಹ ಹತ್ತು ಹಲವಾರು ಪರಿಕ್ಷೆಗಳಿಗೆ ಪೂರಕವಾಗಿ ಮಕ್ಕಳಿಗೆ ತರಬೇತಿಸುತ್ತಿದ್ದಾರೆ ಇವರ ಆಶ್ರಮದಲ್ಲಿ ಅದೆಷ್ಟು ವಿಧ್ಯಾರ್ಥಿಗಳು ಆಶ್ರಯ ಪಡೆದುಕೊಂಡು ಹೋಗಿದ್ದಾರೊ ಲೆಕ್ಕವೆ ಇಲ್ಲ. ಹಾಗೆಯೇ ದೇಶ, ವಿದೇಶಗಳಲ್ಲಿ ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ವಿದ್ಯಾರ್ಥಿಗಳು ಆಗಾಗ ತಮ್ಮನ್ನು ನೆನಪಿಸಿಕೊಂಡು ಗುರುಗಳ ಜ್ಞಾನ ಬಂಡಾರಕ್ಕೆ ಬಂದು ಕೈಮುಗಿದು ಹೋಗುತ್ತಾರೆ. ಸಾವಿರಾರು ವಿಧ್ಯಾರ್ಥಿಗಳಿಗೆ ಜೀವನ ರೂಪಿಸಿ ಕೊಟ್ಟ ಇವರು ಈ ವಯಸ್ಸಿನಲ್ಲೂ ಸಹ ಯಾವುದೆ ಪ್ರೊಫೆಸರ್ಗಿಂತ ಕಡಿಮೆಯೇನಿಲ್ಲ. ಈ ಭಾಗದಲ್ಲಿ ಸಂತ ಶಿಕ್ಷಕರೆಂದು ಹೆಸರು ಪಡೆದ ಇವರು ಎಲ್ಲರ ಮನಸ್ಸಿನಲ್ಲೂ ಸಹ ಚಿರಸ್ಮರಣೀಯರಾಗಿದ್ದಾರೆ. ಇಂದಿನ ಯುವ ಪೀಳಿಗೆಗೆ ಪ್ರಿತಿಯಿಂದ ಕಲಿಸುವ ಗುರುವಿಗೆ ನಾವೆಲ್ಲರೂ ಹೃತ್ಪೂರ್ವಕವಾಗಿ ವಂದಿಸೋಣ ಮತ್ತು ಕೈಗೂಡಿಸೋಣ.

ಬಾಕ್ಷನಲ್ಲಿ ಹಾಕಿ..

ಸೆಪ್ಟಂಬರ್ 5 ಶಿಕ್ಷಕರ ದಿನ. ನಮಗೆ ಅಕ್ಷರ ಕಲಿಸಿದ, ಅರಿವು ಮೂಡಿಸಿದ ಹಿರಿಯ ಚೇತನಗಳನ್ನು ನೆನಯಬೇಕಾದ ದಿನ, ಶಿಕ್ಷಕರು ಮಕ್ಕಳ ಜಿವನದಲ್ಲಿ ವಹಿಸುವ ಪಾತ್ರ ಮಹತ್ವವಾದದ್ದು. ಒಂದು ಮಗುವು ತನ್ನ ಎಚ್ಚರ ಸ್ಥಿತಿಯ ಪ್ರಮುಖವಾದ ಕನಿಷ್ಠ ಆರು ಗಂಟೆಗಳ ಕಾಲವನ್ನು ತನ್ನ ಶಿಕ್ಷಕರ ಸಂಪರ್ಕದಲ್ಲಿ ಕಳೆಯುತ್ತದೆ. ಶಿಕ್ಷಕ ಕಲಿಸುವ ಅಕ್ಷರಗಳನ್ನು ಮಾತ್ರ ಕಲಿಯುವುದಿಲ್ಲ. ಅದರ ಜೊತೆ ನಡೆ, ನುಡಿ, ಹಾವಭಾವಗಳನ್ನು ಗಮನಿಸುತ್ತಾ ಅನುಸರಿಸುವ ಪ್ರಯತ್ನವನ್ನು ಮಾಡುತ್ತಿರುತ್ತದೆ. ಮಕ್ಕಳಾಗಲಿ ಅಥವಾ ಇಂದಿನ ಯುವ ಪೀಳಿಗೆಗೆ ಪ್ರಿತಿಯಿಂದ ಕಲಿಸುವ ಯಾರೇ ಶಿಕ್ಷಕರಿದ್ದರೂ ಅವರಿಗೆ ನಾವೇಲ್ಲರೂ ಹೃತ್ಪೂರ್ವಕವಾಗಿ ವಂದಿಸೋಣ.

  • ದಾನೇಶ ಗುಜಮಾಗಡಿ. ಗದಗ

 

► Follow us on –  Facebook / Twitter  / Google+

Sri Raghav

Admin