ಅಖಿಲೇಶ್ ಪರ ಶೇ.90ರಷ್ಟು ಬೆಂಬಲವಿದೆ, ನಮ್ಮದೇ ನಿಜವಾದ ಪಕ್ಷ : ರಾಮ್ಗೋಪಾಲ್ ಯಾದವ್ ಘೋಷಣೆ
ನವದೆಹಲಿ, ಜ.3- ಉತ್ತರ ಪ್ರದೇಶದ ಆಡಳಿತಾರೂಢ ಸಮಾಜವಾದಿ ಪಕ್ಷದಲ್ಲಿ ಭುಗಿಲೆದ್ದಿರುವ ಭಿನ್ನಮತ ಇಂದು ಇನ್ನೊಂದು ತಿರುವು ಪಡೆದುಕೊಂಡಿದೆ. ಮುಖ್ಯಮಂತ್ರಿ ಅಖಿಲೇಶ್ ಯಾದವ್ ಪರ ಶೇ.90ರಷ್ಟು ಶಾಸಕರು ಬೆಂಬಲ ವ್ಯಕ್ತಪಡಿಸಿರುವುದರಿಂದ ನಮ್ಮದೇ ನಿಜವಾದ ಸಮಾಜವಾದಿ ಪಕ್ಷ ಎಂದು ಪಕ್ಷದ ಮುಖಂಡ ರಾಮ್ಗೋಪಾಲ್ ಯಾದವ್ ಸಾರಿದ್ದಾರೆ. ರಾಜಧಾನಿಯಲ್ಲಿಂದು ಕೇಂದ್ರ ಚುನಾವಣಾ ಆಯೋಗಕ್ಕೆ ಪಕ್ಷದ ಸೈಕಲ್ ಚಿಹ್ನೆ ಕುರಿತು ಹಕ್ಕು ಪ್ರತಿಪಾದನೆ ಮಂಡಿಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಅಖಿಲೇಶ್ ಯಾದವ್ ಪರ ಶೇ.90ರಷ್ಟು ಶಾಸಕರ ಬೆಂಬಲವಿದೆ. ಹೀಗಾಗಿ ನಮ್ಮದೇ ನಿಜವಾದ ಸಮಾಜವಾದಿ ಪಕ್ಷ ಹಾಗೂ ಈ ಚಿಹ್ನೆಯನ್ನು ತಮ್ಮ ಬಣಕ್ಕೇ ನಿಡಬೇಕೆಂದು ಚುನಾವಣಾ ಆಯೋಗಕ್ಕೆ ಮನವಿ ಮಾಡಿರುವುದಾಗಿ ಹೇಳಿದರು. ಇದರೊಂದಿಗೆ ಪಕ್ಷದ ಪರಮೋಚ್ಚ ನಾಯಕ ಮುಲಾಯಂಸಿಂಗ್ ಯಾದವ್ಗೆ ಸಡ್ಡು ಹೊಡೆದಿದ್ದಾರೆ.
ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅಖಿಲೇಶ್ ಬಣದ ಮತ್ತೊಬ್ಬ ಧುರೀಣ ಮತ್ತು ರಾಜ್ಯಸಭಾ ಸದಸ್ಯ ಕಿರಣ್ಮಯಿ ನಂದಾ ತಮ್ಮನ್ನು ಉಚ್ಚಾಟಿಸಿ ಮುಲಾಯಂ ಅವರು ಹೊರಡಿಸಿರುವ ಆದೇಶ ಪತ್ರದ ಸಹಿ ಬಹುಶಃ ನಕಲು ಎಂದು ಸಂಶಯ ವ್ಯಕ್ತಪಡಿಸಿದರು.
ನಿಲ್ಲದ ಸೈಕಲ್ ಕಿತ್ತಾಟ:
ಒಂದೆಡೆ ಮುಲಾಯಂ ಬಣ ಮತ್ತು ಇನ್ನೊಂದೆಡೆ ಅಖಿಲೇಶ್ ಬಣ ಪಕ್ಷದ ಸೈಕಲ್ ಚಿಹ್ನೆಗಾಗಿ ಕಿತ್ತಾಡುತ್ತ ಚುನಾವಣಾ ಆಯೊಜಗದ ಮೆಟ್ಟಿಲು ಏರಿದೆ. ಆದರೆ, ಈ ಎರಡೂ ಬಣಗಳ ಮನವಿ ಸ್ವೀಕರಿಸಿರುವ ಆಯೋಗವು ಈ ಬಗ್ಗೆ ವಿಚಾರಣೆ ನಡೆಸಿ ಸ್ಪಷ್ಟ ತೀರ್ಮಾನ ಕೈಗೊಳ್ಳುವ ಪ್ರಕ್ರಿಯೆಗೆ ಸುಮಾರು ಮೂರು ತಿಂಗಳು ಬೇಕಾಗುತ್ತದೆ. ಆದರೆ, ಐದು ರಾಜ್ಯಗಳ ಚುನಾವಣೆಗಳ ಹಿನ್ನೆಲೆಯಲ್ಲಿ ಆಯೋಗಕ್ಕೆ ಇದನ್ನು ಪರಿಶೀಲಿಸುವ ವ್ಯವಧಾನ ಇಲ್ಲ. ಹೀಗಾಗಿ ಸಮಾಜವಾದಿ ಪಕ್ಷದ ಅಧಿಕೃತ ಸೈಕಲ್ ಚಿಹ್ನೆಯನ್ನು ಮುಟ್ಟುಗೋಲು ಹಾಕಿಕೊಂಡು ಎರಡೂ ಬಣಗಳಿಗೂ ಪ್ರತ್ಯೇಕ ಹೆಸರು ಮತ್ತು ಚಿಹ್ನೆಗಳನ್ನು ನೀಡುವ ಬಗ್ಗೆ ಪರಿಶೀಲಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.