‘ರೇಪ್ ಸ್ಟಾರ್’ ರಾಮ್ ರಹೀಮ್ ಗೆ 10 ವರ್ಷ ಜೈಲು
ಚಂಢೀಗಡ, ಆ.28-ಹದಿನೈದು ವರ್ಷಗಳ ಹಿಂದೆ ಇಬ್ಬರು ಸಾಧ್ವಿಯವರ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ ಅಪರಾಧಿ ಎಂದು ಘೋಷಿತನಾದ ಡೇರಾ ಸಚ್ಚಾ ಸೌಧ ಮುಖ್ಯಸ್ಥ ಬಾಬಾ ಗುರ್ಮೀತ್ ರಾಮ್ರಹೀಂ ಸಿಂಗ್ ಸಿಬಿಐ ವಿಶೇಷ ನ್ಯಾಯಾಲಯ ಇಂದು 10 ವರ್ಷಗಳ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಇದೇ ವಿಶೇಷ ಕಫ್ರ್ಯೂ ಇದ್ದರೂ ಕೂಡ ಹರಿಯಾಣದ ಸೀರ್ಸಾ ಮತ್ತು ಪುಲ್ಯಾದಲ್ಲಿ ಬಾಬಾನ ಭಕ್ತರು ಹಿಂಸಾಚಾರ ನಡೆಸಿ ಕೆಲವು ವಾಹನಗಳಿಗೆ ಅಗ್ನಿಸ್ಪರ್ಶ ಮಾಡಿದ್ದಾರೆ.
ಸಿಂಗ್ನನ್ನು ಅಪರಾಧಿ ಎಂದು ಘೋಷಿಸಿದ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಜಗದೀಪ್ ಸಿಂಗ್ ಅವರು ರೋಹ್ಟಕ್ ಜಿಲ್ಲಾ ಜೈಲಿಗೆ ಆಗಮಿಸಿ ವಿಚಾರಣೆ ನಡೆಸಿ ಶಿಕ್ಷೆಯ ಪ್ರಮಾಣವನ್ನು 10 ವರ್ಷಗಳು ಎಂದು ಘೋಷಣೆ ಮಾಡಿದರು. ಇದೊಂದು ಅಪರೂಪದಲ್ಲೇ ಅಪರೂಪ ಪ್ರಕರಣ ಎಂದು ಅವರು ಹೇಳಿ ಅತ್ಯಾಚಾರಿ ಬಾಬಾನಿಗೆ 10 ವರ್ಷ ಶಿಕ್ಷೆ ವಿಧಿಸಿದರು. ಇದಕ್ಕೂ ಮುನ್ನ ಬಾಬಾ ಪರ ವಕೀಲರು ಆರೋಪಿಯ ವಯೋಮಾನವನ್ನು ಗಣನೆಗೆ ತೆಗೆದುಕೊಳ್ಳುವಂತೆ ಮನವಿ ಮಾಡಿದ್ದರು. ಬಾಬಾ 45ಕ್ಕೂ ಹೆಚ್ಚು ಮಹಿಳೆಯರ ಮೇಲೆ ಅತ್ಯಾಚಾರ ಎಸಗಿದ್ದಾನೆ. ಆತನಿಗೆ ಕಠಿಣ ಸಜೆ ವಿಧಿಸುವಂತೆ ಸಿಬಿಐ ಪರ ವಕೀಲರು ಮನವಿ ಮಾಡಿದರು.
ತನ್ನ ಜೊತೆ ದತ್ತು ಪುತ್ರಿ ಹನಿಪ್ರೀತ್ ಇನ್ಸಾನ್ಳನ್ನು ಜೈಲಿನಲ್ಲಿ ಇರಿಸಿಕೊಳ್ಳಲು ಅನುಮತಿ ನೀಡಬೇಕೆಂಬ ಬಾಬಾನ ವಿಚಿತ್ರ ಬೇಡಿಕೆಯನ್ನು ಕೋರ್ಟ್ ತಳ್ಳಿ ಹಾಕಿತ್ತು. ವಾದ-ಪ್ರತಿವಾದದ ಒಂದು ಹಂತದಲ್ಲಿ ಬಾಬಾ ಕುಸಿದು ಬಿದ್ದ. ಪಂಚಕುಲಾದಲ್ಲಿ ಅಪರಾಧಿ ಎಂದು ಘೋಷಿತನಾಗಿದ್ದ ಬಾಬಾನನ್ನು ಶುಕ್ರವಾರವೇ ರೋಹ್ಡಕ್ ಜೈಲಿಗೆ ತರಲಾಗಿತ್ತು. ಆತನನ್ನು ಮತ್ತೆ ಪಂಚಕುಲಾ ನ್ಯಾಯಾಲಯಕ್ಕೆ ಕರೆ ತಂದರೆ ಮತ್ತಷ್ಟು ಹಿಂಸೆ ಭುಗಿಲೇಳಬಹುದು ಎಂಬ ಕಾರಣಕ್ಕಾಗಿ ನ್ಯಾಯಾಧೀಶರೇ ಜಿಲ್ಲಾ ಜೈಲಿಗೆ ಹೋಗಿ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸುವಂತೆ ಪಂಬಾಜ್ ಮತ್ತು ಹರಿಯಾಣ ಹೈಕೋರ್ಟ್ ಸೂಚಿಸಿತ್ತು.
ಬಾಬಾನಿಗೆ ಶಿಕ್ಷೆ ವಿಧಿಸುವ ಮುನ್ನವೇ ಹರಿಯಾಣದ ಸೀರ್ಸಾ, ಪುಲ್ಯಾ ಸೇರಿದಂತೆ ಕೆಲವೆಡೆ ಹಿಂಸಾಚಾರಕ್ಕೆ ಇಳಿದ ಬಾಬಾನ ಬೆಂಬಲಿಗರು ಕೆಲವು ವಾಹನಗಳನ್ನು ಸುಟ್ಟು ಹಾಕಿದ್ದಾರೆ. ಈ ಮಧ್ಯೆ, ಡೇರಾ ಸಚ್ಚಾ ಸೌಧದ ಕೇಂದ್ರವೊಂದರಲ್ಲಿ ಬಾಬಾ ಅನುಯಾಯಿಗಳು ಅಡಗಿಸಿಟ್ಟಿದ್ದ ಪೆಟ್ರೋಲ್ ಬಾಂಬ್ಗಳು ಮತ್ತು ಜೆಲ್ಲಿ ಬಾಂಬ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬಾಬಾನ ಶಿಕ್ಷೆ ಪ್ರಮಾಣ ಘೋಷಣೆ ಹಿನ್ನೆಲೆಯಲ್ಲಿ ಹರ್ಯಾಣ ಮತ್ತು ಪಂಜಾಬ್ ರಾಜ್ಯಗಳಲ್ಲಿ ಭಾರೀ ಭದ್ರತಾ ವ್ಯವಸ್ಥೆಯನ್ನು ಕೈಗೊಳ್ಳಲಾಗಿದ್ದು, ಹಿಂಸಾಚಾರ ನಡೆಸುವವರ ವಿರುದ್ಧ ಕಂಡಲ್ಲಿ ಗುಂಡಿಕ್ಕಲು ಆದೇಶ ನೀಡಲಾಗಿದೆ.
ಅತ್ಯಾಚಾರ ಪ್ರಕರಣದಲ್ಲಿ ಬಾಬಾ ದೋಷಿ ಎಂದು ಸಿಬಿಐ ವಿಶೇಷ ನ್ಯಾಯಾಲಯ ಶುಕ್ರವಾರ ಘೋಷಿಸುತ್ತಿದ್ದಂತೆ ಹರಿಯಾಣದ ಸಿರ್ಸಾ, ಪಂಚಕುಲಾ ಸೇರಿದಂತೆ ವಿವಿಧೆಡೆ ಡೇರಾ ಬೆಂಬಲಿಗರು ಭಾರೀ ಹಿಂಸಾಚಾರ ನಡೆಸಿದರು. ಉದ್ರಿಕ್ತ ಗುಂಪನ್ನು ಚದುರಿಸಲು ಪೊಲೀಸರು ಗೋಲಿಬಾರ್ ನಡೆಸಿದ್ದರು. ವ್ಯಾಪಕ ಹಿಂಸಾಚಾರ ಮತ್ತು ಗೋಲಿಬಾರ್ನಲ್ಲಿ 37 ಮಂದಿ ಮೃತಪಟ್ಟು, 400ಕ್ಕೂ ಹೆಚ್ಚು ಜನರು ಗಾಯಗೊಂಡರು. ಬಾಬಾ ಭಕ್ತರ ಆಕ್ರೋಶಕ್ಕೆ ಅನೇಕ ವಾಹನಗಳು ಮತ್ತು ಸಾರ್ವಜನಿಕ ಆಸ್ತಿ-ಪಾಸ್ತಿಗಳು ಬೆಂಕಿಗಾಹುತಿಯಾದವು.
ಗಲಭೆಗೆ ಸಂಬಂಧಿಸಿದಂತೆ 600ಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ಬಂಧಿಸಿ ಮಾರಕಾಸ್ತ್ರಗಳನ್ನು ವಶಕ್ಕೆ ತೆಗೆದುಕೊಂಡರು.
ಅಲ್ಲದೇ ಹರಿಯಾಣ ಮತ್ತು ಪಂಜಾಬ್ನಲ್ಲಿರುವ ಹಲವು ಡೇರಾ ಧಾರ್ಮಿಕ ಕೇಂದ್ರಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಯಿತು.