ಅದ್ಧೂರಿ ಪರಿವರ್ತನಾ ಯಾತ್ರೆಗೆ ಬಿಜೆಪಿ ಮಾಸ್ಟರ್ ಪ್ಲಾನ್

Parivartana-Yatre--01
ಬೆಂಗಳೂರು,ಜ.24-ವಿಧಾನಸಭೆ ಚುನಾವಣೆಗೆ ಹೊಸ ದಿಕ್ಸೂಚಿ ಎಂದೇ ಹಾಳಲಾಗುತ್ತಿರುವ ಬಿಜೆಪಿ ಪರಿವರ್ತನಾ ಯಾತ್ರೆಯ ಸಮಾರೋಪ ಸಮಾರಂಭವನ್ನು ಅದ್ಧೂರಿಯಾಗಿ ಹಾಗೂ ಯಶಸ್ವಿಯಾಗಲು ನಡೆಸಲು ಬಿಜೆಪಿ ಮಾಸ್ಟರ್ ಪ್ಲಾನ್ ರೂಪಿಸಿದೆ. ಈ ಹಿಂದೆ ನ.2ರಂದು ಪರಿವರ್ತನಾ ಯಾತ್ರೆಯ ಉದ್ಘಾಟನೆ ಕಾರ್ಯಕ್ರಮದಲ್ಲಿ ಜನರಿಲ್ಲದೆ ಮುಜುಗರಕ್ಕೆ ಸಿಲುಕಿತ್ತು. ಇದನ್ನು ಸವಾಲಾಗಿ ಸ್ವೀಕರಿಸಿರುವ ಬಿಜೆಪಿ ನಾಯಕರು ಫೆಬ್ರವರಿ 4ರಂದು ಸಮಾರೋಪ ಸಮಾರಂಭವನ್ನು ಅತ್ಯಂತ ಯಶಸ್ವಿಯಾಗಿ ನಡೆಸಲು ಟೊಂಕ ಕಟ್ಟಿ ನಿಂತಿದ್ದಾರೆ.

ಇಡೀ ಕಾರ್ಯಕ್ರಮದ ಉಸ್ತುವಾರಿಯನ್ನು ಬಿಜೆಪಿ ರಾಷ್ಟ್ರೀಯ ಸಂಘಟನಾ ಸಹ ಕಾರ್ಯದರ್ಶಿ ಸಂತೋಷ್ ಹೆಗಲಿಗೆ ನೀಡಲಾಗಿದ್ದು , ಆರ್‍ಎಸ್‍ಎಸ್ ನಾಯಕರೇ ಉಸ್ತುವಾರಿಯನ್ನು ನೋಡಿಕೊಳ್ಳಲಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ, ಕೇಂದ್ರ ಸಚಿವರಾದ ರಾಜನಾಥ್ ಸಿಂಗ್, ಅರುಣ್ ಜೇಟ್ಲಿ , ಬಿಜೆಪಿ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳು ಸೇರಿದಂತೆ ಘಟಾನುಘಟಿ ನಾಯಕರು ಅಂದು ಆಗಮಿಸಲಿದ್ದು ಚುನಾವಣೆ ರಣ ಕಹಳೆ ಮೊಳಗಿಸಲಿದ್ದಾರೆ.
ಕನ್ನಡಪರ ಸಂಘಟನೆಗಳು ಮಹದಾಯಿ ನದಿ ನೀರು ಹಂಚಿಕೆ ವಿವಾದವನ್ನು ಮುಂದಿಟ್ಟುಕೊಂಡು ಅಂದು ಬೆಂಗಳೂರು ಬಂದ್‍ಗೆ ಕರೆ ನೀಡಿವೆ. ಆದರೆ ಇದನ್ನು ಗಂಭೀರವಾಗಿ ಪರಿಗಣಿಸದ ಬಿಜೆಪಿ ನಾಯಕರು ಸಮಾರೋಪ ಸಮಾರಂಭವನ್ನು ಯಶಸ್ವಿಯಾಗಿ ನಡೆಸಲು ಈಗಾಗಲೇ ಅಗತ್ಯ ಸಿದ್ದತೆಯನ್ನು ಪ್ರಾರಂಭಿಸಿದೆ.

ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿರುವ ಈ ಕಾರ್ಯಕ್ರಮಕ್ಕೆ ಪ್ರತಿ ಜಿಲ್ಲೆಯಿಂದ ಹತ್ತು ಸಾವಿರ ಕಾರ್ಯಕರ್ತರು ಸೇರಿದಂತೆ ಒಟ್ಟು ಐದು ಲಕ್ಷಕ್ಕೂ ಹೆಚ್ಚು ಪಕ್ಷದ ಕಾರ್ಯಕರ್ತರನ್ನು ಕರೆತರುವ ಮೂಲಕ ಬಿಜೆಪಿ ಆಡಳಿತರೂಢ ಕಾಂಗ್ರೆಸ್‍ಗೆ ಸೆಡ್ಡು ಹೊಡೆಯಲಿದೆ. ಕಾರ್ಯಕ್ರಮಕ್ಕೆ ಎಲ್ಲಿಯೂ ಕೂಡ ಕಿಂಚಿತ್ತೂ ತೊಂದರೆಯಾಗದಂತೆ ಪ್ರಮುಖರಿಗೆ ಹೊಣೆಗಾರಿಕೆಯನ್ನು ನೀಡಲಾಗಿದೆ. ಎಲ್ಲ ಕಾರ್ಯಕ್ರಮಗಳು ಸಂತೋಷ್ ಅವರ ಸುಪರ್ದಿಯಲ್ಲೇ ನಡೆಯಲಿದ್ದು, ಇದಕ್ಕಾಗಿ ವಿಶೇಷ ತಂಡಗಳನ್ನು ರಚಿಸಲಾಗಿದೆ.

ರಾಜ್ಯಾದ್ಯಂತ ಸುಮಾರು ನಾಲ್ಕು ಸಾವಿರ ಬಸ್‍ಗಳಲ್ಲಿ ಕಾರ್ಯಕರ್ತರು ಆಗಮಿಸಲಿದ್ದು , ಇದಕ್ಕಾಗಿ ವಿವಿಧ ಕಡೆ ಬಸ್ ತಂಗುದಾಣಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಮಂಗಳೂರಿಗೆ ಆಗಮಿಸುವ ಕಾರ್ಯಕರ್ತರನ್ನು ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಕರೆದೊಯ್ಯಲು ಪಕ್ಷದ ನಿಷ್ಠಾವಂತ ಕಾರ್ಯಕರ್ತರ ಪಡೆಯನ್ನು ರಚಿಸಲಾಗಿದೆ. ಇವರು ಎಲ್ಲಿಯೂ ಕೂಡ ಕಾರ್ಯಕರ್ತರಿಗೆ ತೊಂದರೆಯಾಗದಂತೆ ನೇರವಾಗಿ ಮೈದಾನಕ್ಕೆ ಕರೆದೊಯ್ಯುವ ತಂಡವಾಗಿ ಕೆಲಸ ಮಾಡಲಿದೆ. ಇನ್ನು ನಗರದಲ್ಲಿ ಸಂಚಾರಿ ದಟ್ಟಣೆಯಾಗದಂತೆ ವಾಹನಗಳು ಹಾದುಹೋಗುವ ಹಾಗೂ ಬರುವ ಪ್ರಮುಖ ಮಾರ್ಗಗಳಲ್ಲಿ ಸ್ವಯಂ ಕಾರ್ಯಕರ್ತರು ಕರ್ತವ್ಯ ನಿರ್ವಹಿಸಲಿದ್ದಾರೆ. ಈ ಹಿಂದೆ ಪರಿವರ್ತನಾ ಯಾತ್ರೆಯ ಉದ್ಘಾಟನೆ ಸಮಾರಂಭದ ಹೊಣೆಗಾರಿಕೆಯನ್ನು ಆರ್.ಅಶೋಕ್ ಹೆಗಲಿಗೆ ನೀಡಲಾಗಿತ್ತು. ಆದರೆ ಅದು ಫ್ಲಾಪ್ ಶೋ ಆಗಿದ್ದರಿಂದ ಪಕ್ಷದ ಮುಖಂಡರು ಭಾರೀ ಮುಜುಗರಕ್ಕೆ ಒಳಗಾಗಿದ್ದರು.

ಇದೀಗ ಸಂತೋಷ್ ಹೊಣೆಗಾರಿಕೆಯನ್ನು ತೆಗೆದುಕೊಂಡಿರುವುದರಿಂದ ಯಾವುದೇ ರೀತಿಯ ಅವಘಡಗಳು ಸಂಭವಿಸಿದಂತೆ ಎಚ್ಚರಿಕೆಯ ಹೆಜ್ಜೆಗಳನ್ನು ಇಡಲಾಗಿದೆ. ಈ ಹಿಂದೆ ಕೇರಳದಲ್ಲಿ ಅಲ್ಲಿನ ಆಡಳಿತಾರೂಢ ಸಿಪಿಎಂ ಸರ್ಕಾರದ ವಿರುದ್ಧ ಅಮಿತ್ ಷಾ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಸಂತೋಷ್ ಯಶಸ್ವಿಯಾಗಿ ನಿಭಾಯಿಸಿದ್ದರು. ಹೀಗಾಗಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಪರಿವರ್ತನಾ ಯಾತ್ರೆ ಸಮಾರೋಪ ಸಮಾರಂಭದ ಹೊಣೆಗಾರಿಕೆಯನ್ನು ಸಂತೋಷ್‍ಗೆ ನೀಡಿದ್ದಾರೆ.

Sri Raghav

Admin