ಅಧಿಕಾರಿಗಳ ಕುಮ್ಮಕ್ಕಿನಿಂದ ಭೂ ಸಂಪತ್ತು ಲೂಟಿ
ಕೆ.ಆರ್.ಪೇಟೆ, ನ.5- ತಾಲೂಕಿನ ವಿವಿಧ ಭಾಗಗಳಲ್ಲಿ 60ಕ್ಕೂ ಹೆಚ್ಚು ವ್ಯಕ್ತಿಗಳು ಅಕ್ರಮ ಕಲ್ಲು ಗಣಿಗಾರಿಕೆಯಲ್ಲಿ ತೊಡಗಿದ್ದು ಅಧಿಕಾರಿಗಳ ಕುಮ್ಮಕ್ಕಿನಿಂದ ಭೂ ಸಂಪತ್ತನ್ನು ಲೂಟಿ ಮಾಡುತ್ತಿದ್ದು, ಸೂಕ್ತ ಕಾನೂನು ಕ್ರಮ ಕೈಗೊಂಡು ಸರಕಾರಕ್ಕೆ ಬರಬೇಕಾದ ತೆರಿಗೆಯನ್ನು ವಸೂಲಿ ಮಾಡಬೇಕೆಂದು ಸಾಮಾಜಿಕ ಕಾರ್ಯಕರ್ತ ಕೆ.ಜೆ.ಚಂದ್ರಶೇಖರ್ ಜಿಲ್ಲಾಧಿಕಾರಿಗಳನ್ನು ಒತ್ತಾಯ ಮಾಡಿದ್ದಾರೆ.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆಯ ಬಗ್ಗೆ ಸೂಕ್ತ ದಾಖಲಾತಿಗಳನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ತಾಲೂಕಿನಲ್ಲಿ ಸುಮಾರು 70 ಸರ್ವೆ ನಂಬರ್ ಜಗದಲ್ಲಿ ಕಲ್ಲು ಗಣಿಕಾರಿಕೆ ನಡೆಯುತ್ತಿದೆ. ಏಳೆಂಟು ಮಂದಿ ಮಾತ್ರ ಲೈಸೆನ್ಸ್ ನವೀಕರಣ ಮಾಡಿಸಿಕೊಂಡಿದ್ದಾರೆ ಆದರೆ ಉಳಿದ 60ಕ್ಕೂ ಹೆಚ್ಚು ಮಂದಿ ಲೈಸೆನ್ಸ್ ನವೀಕರಣ ಮಾಡಿಸಿಕೊಳ್ಳದೇ ಅಕ್ರಮವಾಗಿ ಕಲ್ಲು ಗಣಿಗಾರಿಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಈ ಗಣಿಗಾರಿಕೆಗೆ ಸ್ಥಳೀಯ ಗ್ರಾಮ ಲೆಕ್ಕಾಧಿಕಾರಿಗಳು, ರಾಜಸ್ವ ನಿರೀಕ್ಷಕರು, ಗ್ರಾಮ ಪಂಚಾಯಿತಿ ಆಡಳಿತ ವರ್ಗ ಹಾಗೂ ಜಿಲ್ಲಾ ಗಣಿ ಮತ್ತು ಭೂವಿಜ್ಞಾನ ಅಧಿಕಾರಿಗಳ ಸಂಪೂರ್ಣ ಕುಮ್ಮಕ್ಕಿದೆ ಎಂದು ಗಂಭೀರ ಆರೋಪ ಮಾಡಿದರು.ಕಲ್ಲು ಗಣಿಗಾರಿಕೆಗೆಂದು ಪರವಾನಗಿ(ಲೈಸೆನ್ಸ್) ಅವಧಿ ಮುಗಿದು ಸುಮಾರು 10 ವರ್ಷಗಳು ಕಳೆದರೂ ಇನ್ನೂ ಕೂಡ ಮರು ಪರವಾನಗಿ ಪಡೆದುಕೊಳ್ಳದೆ ನಿರಂತರವಾಗಿ ಕಲ್ಲು ಸಂಪತ್ತನ್ನು ಲೂಟಿ ಮಾಡುತ್ತಿದ್ದಾರೆ ಎಂದು ದೂರಿದರು.ಜಿಲ್ಲಾಧಿಕಾರಿಗಳು ಇತ್ತ ಗಮನಹರಿಸಿ ಪರಿಸರ ಲೂಟಿ ಮಾಡುತ್ತಿರುವ ಕಲ್ಲು ಗಣಿಗಾರಿಕೆ ಮಾಲೀಕರಿಗೆ ಬಿಸಿ ಮುಟ್ಟಿಸಿ ಸರ್ಕಾರಕ್ಕೆ ಬರಬೇಕಾಗಿರುವ ರಾಯಲ್ಟಿ ತೆರಿಗೆಯನ್ನು ವಸೂಲಿ ಮಾಡಬೇಕೆಂದು ಕೆ.ಜೆ.ಚಂದ್ರಶೇಖರ್ ಜಿಲ್ಲಾಧಿಕಾರಿ ಹಾಗೂ ಸರಕಾರವನ್ನು ಒತ್ತಾಯ ಮಾಡಿದ್ದಾರೆ.
► Follow us on – Facebook / Twitter / Google+