ಅನರ್ಹತೆ ಭೀತಿಯಲ್ಲಿ 8 ವಿಧಾನ ಪರಿಷತ್ ಸದಸ್ಯರು

8-Members--01

ಬೆಂಗಳೂರು,ಜೂ.1– ಪ್ರಯಾಣ ಹಾಗೂ ದಿನಭತ್ಯೆ ದುರುಪಯೋಗ ಆರೋಪಕ್ಕೆ ಗುರಿಯಾಗಿರುವ ಮೇಲ್ಮನೆಯ ಎಂಟು ಮಂದಿ ಸದಸ್ಯರಿಗೆ ಅನರ್ಹತೆ ಭೀತಿ ಎದುರಾಗಿದೆ. ಬಿಬಿಎಂಪಿ ಪ್ರತಿಪಕ್ಷದ ನಾಯಕ ಪದ್ಮನಾಭ ರೆಡ್ಡಿ ಅವರು ವಿಧಾನಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ ಅವರಿಗೆ ಪ್ರಯಾಣ ಭತ್ಯೆ ದುರುಪಯೋಗಪಡಿಸಿಕೊಂಡ ಎಂಟು ಮಂದಿ ಸದಸ್ಯರನ್ನು ಅನರ್ಹಗೊಳಿಸಬೇಕೆಂದು ದೂರು ನೀಡಿದ್ದರು.   ಈ ದೂರಿನನ್ವಯ ಸಭಾಪತಿ ಶಂಕರಮೂರ್ತಿ, ಸದಸ್ಯರಾದ ರಘು ಆಚಾರ್, ಅಲ್ಲಂ ವೀರಭದ್ರಪ್ಪ , ಆರ್.ಬಿ.ತಿಮ್ಮಾಪುರ, ಎಸ್.ರವಿ, ಬೋಸರಾಜು, ಸಿ.ಆರ್.ಮನೋಹರ್, ಎಂ.ಡಿ.ಲಕ್ಷ್ಮಿನಾರಾಯಣ ಹಾಗೂ ಅಪ್ಪಾಜಿ ಗೌಡ ಸೇರಿದಂತೆ ಒಟ್ಟು ಎಂಟು ಮಂದಿಗೆ ನೋಟಿಸ್ ಜಾರಿ ಮಾಡಿದ್ದು ಜೂ.3ರೊಳಗೆ ಉತ್ತರಿಸಬೇಕೆಂದು ಸೂಚಿಸಿದ್ದಾರೆ. ಪ್ರಯಾಣ ಹಾಗೂ ದಿನಭತ್ಯೆ ದುರುಪಯೋಗಪಡಿಸಿಕೊಂಡಿರುವ ನಿಮ್ಮ ಮೇಲೆ ಕ್ರಿಮಿನಲ್ ಕೇಸ್ ಹಾಕಿ ಸದಸ್ಯತ್ವವನ್ನು ಏಕೆ ಅನರ್ಹಗೊಳಿಸಬಾರದು ಎಂದು ನೋಟಿಸ್‍ನಲ್ಲಿ ಪ್ರಶ್ನಿಸಿದ್ದಾರೆ.ಸಂವಿಧಾನದ ಕಲಂ 243 ಆರ್ ಹಾಗೂ ಕರ್ನಾಟಕ ಮುನ್ಸಿಪಲ್ ಕಾಯ್ದೆ 1976ರ ಪ್ರಕಾರ ಸೆಕ್ಷನ್ 7(1)(ಡಿ) ಪ್ರಕಾರ ಸುಳ್ಳು ವಿಳಾಸ ನೀಡಿ ಮತದಾನ ಮಾಡುವುದು ಕಾನೂನು ಬಾಹಿರ ಎಂದು ಸಭಾಪತಿಗಳು ನೋಟಿಸ್‍ನಲ್ಲಿ ಸದಸ್ಯರ ಗಮನಕ್ಕೆ ತಂದಿದ್ದಾರೆ.  ಅಲ್ಲದೆ ಈ ಪ್ರಕರಣ ಕ್ರಿಮಿನಲ್ ಮೊಕದ್ದಮೆಗೆ ಸಮಾನಾಗಿದ್ದು , 2007 ಲೋಕಸಭಾ ಸದಸ್ಯರ ಅನರ್ಹ ಪ್ರಕರಣದಲ್ಲಿ ಎಸ್‍ಸಿಸಿ 184ನೇ ಕಲಂ ಪ್ರಕಾರ ಎಲ್‍ಟಿಸಿ ಸೌಲಭ್ಯ ದುರುಪಯೋಗಪಡಿಸಿಕೊಂಡು ಅನರ್ಹಗೊಳಿಸಿರುವುದನ್ನು ಉಲ್ಲೇಖಿಸಿದ್ದಾರೆ.   ಈ ಪ್ರಕರಣವನ್ನು ಸಿಬಿಐ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ವಿಚಾರಣೆಯನ್ನು ನಡೆಸಿರುವುದರಿಂದ ದೂರಿನ ಅನ್ವಯ ನೋಟಿಸ್ ನೀಡಿರುವುದಾಗಿ ಸ್ಪಷ್ಟಪಡಿಸಿದ್ದಾರೆ.

ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಸುಮಾರು 40 ಲಕ್ಷ ನಷ್ಟವುಂಟು ಮಾಡಿರುವ ನಿಮ್ಮ ಮೇಲೆ ಕ್ರಿಮಿನಲ್ ಕೇಸ್ ಹಾಕುವುದಕ್ಕೆ ಕಾನೂನಿನಲ್ಲಿ ಅವಕಾಶವಿದೆ. ಅಲ್ಲದೆ ಹಿಂದೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನಂತೆ ನಿಮ್ಮ ಸದಸ್ಯತ್ವವನ್ನು ಅನರ್ಹಗೊಳಿಸಬಹುದು ಎಂದು ಹೇಳಿದ್ದಾರೆ.  ಸಭಾಪತಿಗಳು ನೋಟಿಸ್ ಜಾರಿ ಮಾಡಿರುವ ಹಿನ್ನೆಲೆಯಲ್ಲಿ ಸದಸ್ಯರಿಗೆ ಕಾನೂನಿನ ಸಂಕಷ್ಟ ಎದುರಾಗಿದೆ. ರಾಜ್ಯಸಭೆಯ ಪ್ರಕರಣವೊಂದನ್ನು ಉಲ್ಲೇಖ ಮಾಡಿರುವುದರಿಂದ ಎಂಟು ಮಂದಿ ಕಾನೂನಿನ ತೂಗುಗತ್ತಿಯಿಂದ ಹೇಗೆ ಪಾರಾಗಲಿದ್ದಾರೆ ಎಂಬ ಯಕ್ಷ ಪ್ರಶ್ನೆ ಎದುರಾಗಿದೆ.

ಏನಿದು ಪ್ರಕರಣ:

ಬಿಬಿಎಂಪಿ ಚುನಾವಣೆ ಸಂದರ್ಭದಲ್ಲಿ ಪಾಲಿಕೆಯಲ್ಲಿ ಅಧಿಕಾರ ಹಿಡಿಯಲೇಬೇಕೆಂದು ಪಟ್ಟು ಹಿಡಿದಿದ್ದ ಕಾಂಗ್ರೆಸ್ ಮೇಲ್ಮನೆಯ ಕೆಲವು ಸದಸ್ಯರ ಸುಳ್ಳು ವಿಳಾಸ ನೀಡಿ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿತ್ತೆಂಬ ಆರೋಪವಿತ್ತು. ಕಳೆದ ಎರಡು ಮೇಯರ್ ಚುನಾವಣೆ ವೇಳೆ ಈ ಎಲ್ಲ ಎಂಟು ಸದಸ್ಯರು ಮತದಾನ ಮಾಡಿದ್ದರು. ಆದರೆ ಬೆಂಗಳೂರಿನ ನಿವಾಸಿಗಳೆಂದು ವಿಳಾಸ ನೀಡಿದ್ದು , ವಿವಾದಕ್ಕೆ ಕಾರಣವಾಗಿತ್ತು.  ಬೆಂಗಳೂರು ನಿವಾಸಿಗಳೆಂದು ಹೇಳಿ ಒಟ್ಟು 40 ಲಕ್ಷ ಪ್ರಯಾಣ ಭತ್ಯೆ ಪಡೆದಿದ್ದರು. ಬಹುತೇಕ ಎಲ್ಲ ಸದಸ್ಯರು ನೆಪ ಮಾತ್ರಕ್ಕೆ ಬೆಂಗಳೂರು ವಿಳಾಸ ನೀಡಿ ಸರ್ಕಾರದ ಸವಲತ್ತುಗಳನ್ನು ದುರುಪಯೋಗಪಡಿಸಿಕೊಂಡಿದ್ದಾರೆಂಬ ಆರೋಪ ಕೇಳಿಬಂದಿತ್ತು.


ಇದನ್ನು ಬಿಬಿಎಂಪಿ ಪ್ರತಿಪಕ್ಷದ ನಾಯಕ ಪದ್ಮನಾಭ ರೆಡ್ಡಿ ದಾಖಲೆಗಳ ಸಮೇತ ಬಿಡುಗಡೆ ಮಾಡಿದ್ದರು. ಅಲ್ಲದೆ ಸರ್ಕಾರಕ್ಕೆ ವಂಚನೆ ಮಾಡಿರುವ ಈ ಎಲ್ಲರ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಸದಸ್ಯತ್ವ ಅನರ್ಹಗೊಳಿಸುವಂತೆ ಸಭಾಪತಿ ಶಂಕರಮೂರ್ತಿಗೂ ದೂರು ನೀಡಿದ್ದರು.

ಅನರ್ಹತೆಯ ಭೀತಿ:

ಈ ಹಿಂದೆ ನೋಟಿಗಾಗಿ ಪ್ರಶ್ನೆ ಪ್ರಕರಣದಲ್ಲಿ ಕಾರ್ಪೊರೇಟ್  ಕಂಪನಿಗಳ ಪರ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಪ್ರಶ್ನೆ ಕೇಳಲು 12 ಸದಸ್ಯರಿಗೆ ಹಣದ ಆಮಿಷವೊಡ್ಡಲಾಗಿತ್ತು. ಖಾಸಗಿ ಸುದ್ದಿ ವಾಹಿನಿಯೊಂದು ಕುಟುಕು ಕಾರ್ಯಾಚರಣೆ ಮೂಲಕ ಸದಸ್ಯರು ಹಣ ಪಡೆದಿರುವುದನ್ನು ದಾಖಲೆಗಳ ಸಮೇತ ಬಹಿರಂಗಪಡಿಸಿತ್ತು.   ಅಂದು ಸಾಕಷ್ಟು ವಿವಾದ ಸೃಷ್ಟಿಸಿದ್ದ ಪ್ರಕರಣದಲ್ಲಿ ರಾಜ್ಯಸಭೆ ಹಾಗೂ ಲೋಕಸಭೆಯ ಒಟ್ಟು ಹನ್ನೆರಡು ಸದಸ್ಯರನ್ನು ಸದಸ್ಯತ್ವದಿಂದಲೇ ಅನರ್ಹಗೊಳಿಸಲಾಗಿತ್ತು.

ಲೋಕಸಭೆ ಸ್ಪೀಕರ್ ಮತ್ತು ಸಭಾಪತಿಗಳ ಈ ನಿರ್ಧಾರವನ್ನು ಪ್ರಶ್ನಿಸಿ ಅನರ್ಹಗೊಂಡ ಸದಸ್ಯರು ಸುಪ್ರೀಂಕೋರ್ಟ್‍ನಲ್ಲಿ ಪ್ರಶ್ನಿಸಿದ್ದರು. ಅಂತಿಮವಾಗಿ ವಾದ-ವಿವಾದ ಆಲಿಸಿದ ನ್ಯಾಯಾಲಯ ಸಂಸತ್ ತೆಗೆದುಕೊಂಡಿರುವ ನಿರ್ಧಾರವನ್ನು ಎತ್ತಿ ಹಿಡಿದಿತ್ತು.   ಇದೀಗ ಇದೇ ಅಂಶವನ್ನು ಶಂಕರಮೂರ್ತಿ ನೋಟಿಸ್‍ನಲ್ಲಿ ಉಲ್ಲೇಖ ಮಾಡಿರುವುದರಿಂದ ಎಂಟು ಮಂದಿ ಭವಿಷ್ಯ ಅಡ್ಡಕತ್ತರಿಯಂತಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Sri Raghav

Admin