ಅನಿಲ್​, ಉದಯ್​ ಕುಟುಂಬಕ್ಕೆ ಸರ್ಕಾರದಿಂದ ತಲಾ 5 ಲಕ್ಷ ರೂ. ಸಹಾಯಧನ

Mastigudi

ಬೆಂಗಳೂರು.ನ.13 : ‘ಮಾಸ್ತಿಗುಡಿ’ ಚಿತ್ರೀಕರಣದ ವೇಳೆ ತಿಪ್ಪಗೊಂಡನಹಳ್ಳಿ ಕೆರೆಯಲ್ಲಿ ಹೆಲಿಕ್ಯಾಪ್ಟರ್ ನಿಂದ ಜಿಗಿದು ನೀರಲ್ಲಿ ಮುಳುಗಿ ಮೃತಪಟ್ಟ ನಟರಾದ ಅನಿಲ್, ಉದಯ್ ಕುಟುಂಬಕ್ಕೆ ರಾಜ್ಯ ಸರ್ಕಾರ ತಲಾ 5 ಲಕ್ಷ ರೂ. ಧನಸಹಾಯ ಘೋಷಿಸಿದೆ. ಬೆಂಗಳೂರಿನ ಚಲನಚಿತ್ರ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು.  ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ. ಗೋವಿಂದು ಅವರು ಸಿಎಂ ಸಿದ್ದರಾಮಯ್ಯರನ್ನು ಭೇಟಿ ಮಾಡಿ ನಟರಿಬ್ಬರ ಕುಟುಂಬಕ್ಕೆ ಪರಿಹಾರ ಘೋಷಿಸುವಂತೆ ಮನವಿ ಮಾಡಿದ್ದರು. ಪರಿಶೀಲಿಸುವುದಾಗಿ ಭರವಸೆ ನೀಡಿದ್ದ ಸಿಎಂ, ಇಂದು ಬೆಂಗಳೂರಿನ ಜಿಕೆವಿಕೆ ಆವರಣದಲ್ಲಿ ನಡೆದ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ತಲಾ ಐದು ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.

ನಿರ್ದೇಶಕ, ಸಾಹಸ ನಿರ್ದೇಶಕರ ಬೇಜವಾಬ್ದಾರಿಯಿಂದ ಹೆಲಿಕಾಪ್ಟರ್ನಿಂದ ನೀರಿಗೆ ಹಾರಿ ಅನಿಲ್, ಉದಯ್ ನವೆಂಬರ್ 7 ರಂದು ಸಾವನಪ್ಪಿದ್ದರು. ನೀರಿಗೆ ಹಾರಿದ್ದ ಮೂವರಲ್ಲಿ ನಟ ದುನಿಯಾ ವಿಜಯ್ ಅವರನ್ನು ಮಾತ್ರ ರಕ್ಷಣೆ ಮಾಡಲಾಗಿತ್ತು.

125 ಚಿತ್ರಕ್ಕೆ ಸಹಾಯಧನ:

ಇದುವರೆಗೂ ರಾಜ್ಯ ಸರ್ಕಾರದ ವತಿಯಿಂದ ಪ್ರತಿ ವರ್ಷ 100 ಚಿತ್ರಗಳಿಗೆ ಸಹಾಯಧನ ನೀಡಲಾಗುತ್ತಿತ್ತು. ಮುಂದಿನ ವರ್ಷದಿಂದ ಇದನ್ನು 125 ಚಿತ್ರಗಳಿಗೆ ಹೆಚ್ಚಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಇದೇ ಸಂದರ್ಭ ಘೋಷಿಸಿದ್ದಾರೆ.

► Follow us on –  Facebook / Twitter  / Google+

Sri Raghav

Admin