ಅಪಾರ್ಟ್‍ಮೆಂಟ್-ಪಿಜಿಗಳಲ್ಲಿ ಲ್ಯಾಪ್‍ಟಾಪ್’ಗಳನ್ನು ಕದ್ದು ಮಾರುತ್ತಿದ್ದ ದಂಪತಿ ಬಂಧನ

Spread the love

Laptop-Arrested-01

ಬೆಂಗಳೂರು,ಮಾ.2-ಅಪಾರ್ಟ್‍ಮೆಂಟ್ ಹಾಗೂ ಪಿಜಿಗಳಿಗೆ ನುಗ್ಗಿ ಲ್ಯಾಪ್‍ಟಾಪ್ ಕಳವು ಮಾಡಿ ಮಾರುತ್ತಿದ್ದ ದಂಪತಿಯನ್ನು ಮಡಿವಾಳ ಠಾಣೆ ಪೊಲೀಸರು ಬಂಧಿಸಿ 72 ಲಕ್ಷ ರೂ. ಮೌಲ್ಯದ ಲ್ಯಾಪ್‍ಟಾಪ್, ಕ್ಯಾಮೆರಾಗಳು, ಐಪ್ಯಾಡ್, ಟಾಬ್‍ಗಳನ್ನು ವಶಪಡಿಸಿಕೊಂಡಿದ್ದಾರೆ.   ಇಟ್ಟಮಡು ಲೇಔಟ್‍ನ ನಿವಾಸಿ ಸುಮೀರ್(32), ರಾಜೇಶ್ವರಿ ಬಂಧಿತ ಆರೋಪಿಗಳು.
ಮೂಲತಃ ಪಂಜಾಬ್‍ನವನಾದ ಸುಮೀರ್ 2009ರಲ್ಲಿ ಚಾಮರಾಜಪೇಟೆಯಲ್ಲಿರುವ ಐಐಎಂಡಿ ಕಾಲೇಜಿನಲ್ಲಿ ಹೋಟೆಲ್ ಮ್ಯಾನೇಜ್‍ಮೆಂಟ್ ವ್ಯಾಸಂಗ ಮಾಡಿದ್ದರೆ, ಹೊನ್ನಾವರ ಮೂಲದ ರಾಜೇಶ್ವರಿ ಏರ್ ಹೋಸ್ಟೆಸ್ ತರಬೇತಿ ಪಡೆದಿದ್ದಾಳೆ. ಇಬ್ಬರು ಪ್ರೀತಿಸಿ ವಿವಾಹವಾಗಿ ಇಟ್ಟಮಡುವಿನಲ್ಲಿ ನೆಲೆಸಿದ್ದಾರೆ.

2015ರಲ್ಲಿ ರಾಜಸ್ಥಾನ ಮೂಲದ ಅರುಣ್ ಪಾಟಕ್ ಎಂಬಾತನಿಂದ ಕಳ್ಳತನ ಕಲಿತ ಸುಮೀರ್ ಅದನ್ನೇ ಹವ್ಯಾಸ ಮಾಡಿಕೊಂಡಿದ್ದು , ಪತ್ನಿಯೂ ಆತನಿಗೆ ಸಹಕಾರ ನೀಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.  ಲ್ಯಾಪ್‍ಟಾಪ್ ಕಳವು ಮಾಡುವ ಉದ್ದೇಶದಿಂದಲೇ ಸುಮೀರ್ ಸಾಫ್ಟ್‍ವೇರ್ ಎಂಜಿನಿಯರ್‍ಗಳು ಹಾಗೂ ವಿದ್ಯಾರ್ಥಿಗಳು ಹೆಚ್ಚಾಗಿ ವಾಸವಿರುವ ಪ್ರದೇಶಗಳನ್ನು  ಆಯ್ಕೆ ಮಾಡಿಕೊಂಡು ಅಲ್ಲಿನ ಪಿಜಿ, ಅಪಾರ್ಟ್‍ಮೆಂಟ್‍ಗಳಲ್ಲಿ ಕಳವು ಮಾಡುತ್ತಿದ್ದ.  ಇಂಗ್ಲೀಷ್ , ಹಿಂದೆ ಭಾಷೆಗಳನ್ನು ನಿರರ್ಗಳವಾಗಿ ಮಾತನಾಡುತ್ತಿದ್ದ ಈತ ಈ ಉದ್ದೇಶಕ್ಕಾಗಿಯೇ  ಅಪಾರ್ಟ್‍ಮೆಂಟ್‍ಗಳಲ್ಲಿ ಸೆಕ್ಯುರಿಟಿಗಾರ್ಡ್‍ನ್ನು ಪರಿಚಯ ಮಾಡಿಕೊಂಡು ಮನೆಗಳಿಗೆ ನುಗ್ಗಿ ಕಳವು ಮಾಡುತ್ತಿದ್ದ ಎಂದು ವಿಚಾರಣೆಯಿಂದ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಳವು ಮಾಡಿದ ಲ್ಯಾಪ್‍ಟಾಪ್, ಐಪ್ಯಾಡ್‍ಗಳನ್ನು ಮಾರಲೆಂದೇ ದಂಪತಿ ಹೊಸಕೆರೆಹಳ್ಳಿಯ ಕಾಳಿದಾಸಗರದಲ್ಲಿ ಎಸ್‍ಆರ್ ಕಂಪ್ಯೂಟರ್ಸ್ ಅಂಗಡಿ ತೆರೆದಿದ್ದು , ಅಲ್ಲಿ ಕದ್ದ ಮಾಲುಗಳನ್ನು ಮರಾಟ ಮಾಡುತ್ತಿದ್ದರು.  ಅಂಗಡಿಯಲ್ಲಿ ಮಾರಾಟವಾಗದೆ ಉಳಿದವುಗಳನ್ನು ಉತ್ತಮ ರೀತಿಯಲ್ಲಿ ಪ್ಯಾಕ್ ಮಾಡಿ ತಮಿಳುನಾಡಿನ ಕೊಯಮತ್ತೂರು, ತಿರುಪ್ಪುರ್, ಚೆನ್ನೈ ಹಾಗೂ ನಗರದ  ಎಸ್‍ಪಿ ರಸ್ತೆಯಲ್ಲಿ ಮಾರಾಟ ಮಾಡುತ್ತಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.   ದಂಪತಿಯನ್ನು ಬಂಧಿಸಿ ಒಟ್ಟು 72 ಲಕ್ಷ ರೂ. ಮೌಲ್ಯದ 151 ಲ್ಯಾಪ್‍ಟ್ಯಾಪ್‍ಗಳು, 5 ಕ್ಯಾಮೆರಾ, 4 ಆಪೆಲ್ ಐಪ್ಯಾಡ್, 6 ಟ್ಯಾಬ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ. ಡಿಸಿಪಿ ಡಾ.ಬೋರಲಿಂಗಯ್ಯ ಅವರ ಮಾರ್ಗದರ್ಶನ, ಎಸಿಪಿ ಲಕ್ಷ್ಮಿನಾರಾಯಣ ನೇತೃತ್ವದಲ್ಲಿ ಮಡಿವಾಳ ಠಾಣೆ ಇನ್‍ಸ್ಪೆಕ್ಟರ್ ಮತ್ತು ಸಿಬ್ಬಂದಿ ಆರೋಪಿಗಳನ್ನು ಬಂಧಿಸಿ ಮಾಲು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ತಂಡದ ಕಾರ್ಯವನ್ನು ನಗರ ಪೊಲೀಸ್ ಆಯುಕ್ತ ಪ್ರವೀಣ್‍ಸೂದ್ ಹಾಗೂ ಹೆಚ್ಚುವರಿ ಪೊಲೀಸ್ ಆಯುಕ್ತ ಹೇಮಂತ್ ನಿಂಬಾಳ್ಕರ್ ಅವರು ಶ್ಲಾಘಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin