ಅಬಕಾರಿ ಖಾತೆಗೆ ಲಾಬಿ : ಮುಖ್ಯಮಂತ್ರಿಗಳ ಜೊತೆ ಸಮಾಲೋಚನೆ ನಡೆಸಿದ ಆರ್.ಬಿ.ತಿಮ್ಮಾಪುರ್

R.B.Timmapura

ಬೆಂಗಳೂರು, ಡಿ.26- ರಾಸಲೀಲೆ ಪ್ರಕರಣದಲ್ಲಿ ಸಿಕ್ಕಿಬಿದ್ದು ಎಚ್.ವೈ.ಮೇಟಿ ರಾಜೀನಾಮೆ ನೀಡಿದ ನಂತರ ತೆರವಾಗಿರುವ ಸ್ಥಾನಕ್ಕೆ ಲಾಬಿ ತೀವ್ರಗೊಂಡಿದ್ದು, ಇಂದು ಬಾಗಲಕೋಟೆ ಜಿಲ್ಲೆಯ ಆರ್.ಬಿ.ತಿಮ್ಮಾಪುರ್, ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಸಚಿವ ಸ್ಥಾನ ನೀಡುವಂತೆ ಮನವಿ ಮಾಡಿದ್ದಾರೆ.
ಅಪಾರ ಬೆಂಬಲಿಗರೊಂದಿಗೆ ಗೃಹ ಕಚೇರಿ ಕೃಷ್ಣಾಗೆ ಆಗಮಿಸಿದ ತಿಮ್ಮಾಪುರ್ ಬಾಗಲಕೋಟೆ ಜಿಲ್ಲೆಗೆ ರಾಜಕೀಯ ಪ್ರಾತಿನಿಧ್ಯ ನೀಡುವಂತೆ ಮನವಿ ಮಾಡಿದರು.

ಎಚ್.ವೈ.ಮೇಟಿ ಕುರುಬ ಸಮುದಾಯಕ್ಕೆ ಸೇರಿದವರಾಗಿದ್ದು, ಅದೇ ಸಮುದಾಯಕ್ಕೆ ಸಚಿವ ಸ್ಥಾನ ನೀಡಬೇಕು ಎಂಬ ಚರ್ಚೆಗಳು ನಡೆಯುತ್ತಿವೆ. ಬಿ.ಬಿ.ಚಿಮ್ಮನಕಟ್ಟಿ, ಎಚ್.ಎಂ.ರೇವಣ್ಣ, ಎಂ.ಟಿ.ಬಿ. ನಾಗರಾಜ್ ಸೇರಿದಂತೆ ಹಲವಾರು ಮಂದಿ ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ.
ಬಾಗಲಕೋಟೆ ಜಿಲ್ಲೆಯಲ್ಲಿ ಒಟ್ಟು 7 ಕ್ಷೇತ್ರಗಳ ಪೈಕಿ 6 ಕ್ಷೇತ್ರಗಳಲ್ಲೂ ಕಾಂಗ್ರೆಸ್ ಜಯಗಳಿಸಿದೆ. ಉಮಾಶ್ರೀ ಅವರು ಜಿಲ್ಲೆಯಿಂದ ಸಚಿವರಾಗಿದ್ದಾರೆ. ಹೆಚ್ಚುವರಿಯಾಗಿ ಮೇಟಿ ಅವರನ್ನು ಸಂಪುಟಕ್ಕೆ ತೆಗೆದುಕೊಳ್ಳಲಾಗಿತ್ತು. ರಾಸಲೀಲೆ ಪ್ರಕರಣದ ನಂತರ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ನಿರ್ಗಮಿಸಿದ್ದಾರೆ. ಖಾಲಿ ಇರುವ ಸ್ಥಾನಕ್ಕೆ ನೇಮಕಾತಿ ಮಾಡಲು ಸಂಪುಟವಿಸ್ತರಿಸಬೇಕು ಎಂಬ ಒತ್ತಡಗಳು ಹೆಚ್ಚುತ್ತಿವೆ. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈವರೆಗೂ ನನ್ನ ಬಳಿ ಅರ್ಜಿ ಹಿಡಿದುಕೊಂಡು ಯಾರೂ ಬಂದಿಲ್ಲ. ಹೀಗಾಗಿ ಸಂಪುಟ ವಿಸ್ತರಣೆ ಸದ್ಯಕ್ಕಿಲ್ಲ ಎಂದು ಹೇಳಿದ್ದರು.

ಅದರ ಬೆನ್ನಲ್ಲೇ ತಿಮ್ಮಾಪುರ್ ಇಂದು ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಸಚಿವ ಸ್ಥಾನ ನೀಡುವಂತೆ ಮನವಿ ಮಾಡಿದ್ದಾರೆ. ಕಳೆದ ಚುನಾವಣೆಯಲ್ಲಿ ಮೀಸಲು ಕ್ಷೇತ್ರದಿಂದ ಸ್ಪರ್ಧಿಸಿ ಕಡಿಮೆ ಅಂತರದಿಂದ ಸೋಲುಕಂಡ ಅವರು ಇತ್ತೀಚೆಗೆ ವಿಧಾನಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.
ತಮಗೆ ಸಚಿವ ಸ್ಥಾನ ನೀಡುವುದರಿಂದ ವಿಧಾನಪರಿಷತ್‍ಗೂ ಆದ್ಯತೆ ನೀಡಿದಂತಾಗುತ್ತದೆ. ಬಾಗಲಕೋಟೆ ಜಿಲ್ಲೆಗೂ ರಾಜಕೀಯ ಪ್ರಾತಿನಿಧ್ಯ ಸಿಗಲಿದೆ ಮತ್ತು ದಲಿತರಲ್ಲಿ ಎಡಗೈ ಸಮುದಾಯಕ್ಕೆ ಆದ್ಯತೆ ನೀಡದಂತಾಗಲಿದೆ. ಹೀಗಾಗಿ ತಮಗೆ ಸಚಿವ ಸ್ಥಾನ ನೀಡುವಂತೆ ಬೇಡಿಕೆ ಮುಂದಿಟ್ಟಿದ್ದಾರೆ.

ತಿಮ್ಮಾಪುರ್ ಅವರ ಪರವಾಗಿ ವಕಾಲತ್ತು ವಹಿಸಲು ನೂರಾರು ಮಂದಿ ಕಾರ್ಯಕರ್ತರು ಗೃಹ ಕಚೇರಿ ಕೃಷ್ಣಾಕ್ಕೆ ಆಗಮಿಸಿದ್ದರು. ಆದರೆ, ಪೊಲೀಸರು ಅವರನ್ನು ಬಾಗಿಲಲ್ಲೇ ತಡೆದು ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಲು ಅವಕಾಶ ಸಿಗದಂತೆ ಮಾಡಿದರು. ಇದರಿಂದ ಕೆಲ ಕಾರ್ಯಕರ್ತರು ಪೊಲೀಸರ ಮೇಲೆ ಆಕ್ರೋಶಗೊಂಡ ಪ್ರಕರಣ ನಡೆಯಿತು.  ಆದರೆ, ತಿಮ್ಮಾಪುರ್ ಅವರು ಬಹಳ ಹೊತ್ತು ಮುಖ್ಯಮಂತ್ರಿ ಅವರ ಜತೆಗಿದ್ದು, ಸಚಿವ ಸ್ಥಾನಕ್ಕೆ ಮನವಿ ಮಾಡಿದ್ದಾರೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download

Sri Raghav

Admin