ಅಭಿವೃದ್ಧಿಗಾಗಿ ಬಂಜಾರರು ಯುವಕರು ಸಂಘಟಿತರಾಗಲಿ

Spread the love

4

ಮುದ್ದೇಬಿಹಾಳ,ಫೆ.18- ದೇಶಾದ್ಯಂತ ಸುಮಾರು 10 ಕೋಟಿಯಷ್ಟು ಜನಸಂಖ್ಯೆ ಹೊಂದಿರುವ ಬಂಜಾರಾ ಸಮುದಾಯದವರು ಶ್ರಮಜೀವಿಗಳಾಗಿದ್ದು, ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಇನ್ನೂ ಹೆಚ್ಚು ಸಬಲರಾಗಲು ಸಂಘಟಿತರಾಗಬೇಕಿದೆ. ಬಂಜಾರಾ ಜನರ ಕಸೂತಿಯ ಧರಿಸು ತನ್ನದೇ ಆದ ವೈಶಿಷ್ಟ್ಯ ಹೊಂದಿದೆ. ಅದು ಆರ್ಥಿಕ ದುರ್ಬಲ ಕುಟುಂಬದ ಮಹಿಳೆಗೂ ಸಾಂಸ್ಕೃತಿಕ , ಸಾಮಾಜಿಕ, ಕಲಾತ್ಮಕತೆಯ ಸಿರಿವಂತಿಕೆ ಮೆರೆಯುವಂಥದ್ದು ಎಂದು ನೀಲಾ ನಗರದ ಕುಮಾರ ಮಹಾರಾಜರು ಹೇಳಿದರು.ತಾಲೂಕಿನ ಹುಲ್ಲೂರ ತಾಂಡದ ವೆಂಕಟೇಶ್ವರ ದೇವಸ್ಥಾನದಲ್ಲಿ ಬಂಜಾರಾ ಸಮುದಾಯದ ಕುಲಗುರು ಸಂತ ಶ್ರೀ ಸೇವಾಲಾಲ್ ಮಹಾರಾಜರ 278ನೇ ಜಯಂತ್ಯೋತ್ಸವ ಸಮಾರಂಭವನ್ನು ಲಂಬಾನಿ ಜನರ ಪಾರಂಪರಿಕ ಪೂಜೆಯೊಂದಿಗೆ ಉದ್ಘಾಟಿಸಿ ಅವರು ಮಾತನಾಡಿದರು.

ಸೋಮಲಿಂಗ ಸ್ವಾಮೀಜಿ ಮಾತನಾಡಿ, ಬಂಜಾರ ಸಂಸ್ಕೃತಿಕ, ಪರಂಪರೆ, ಆಚಾರ-ವಿಚಾರಗಳು, ಜೀವನ ಮೌಲ್ಯವನ್ನು ಮುಂದಿನ ಪೀಳಿಗೆ ಕಾಪಾಡಬೇಕು. ಬಂಜಾರಾ ಸಮಾಜ ಅಕ್ಷರ ಜ್ಞಾನ ಪಡೆದುಕೊಂಡು ಮುನ್ನಡೆಯಬೇಕು. ಸಮಾಜ ಜಾಗೃತರಾಗಿ, ಸಂಘಟಿತರಾಗಿ ಎಲ್ಲ ಸಮಾಜದವರೊಂದಿಗೆ ಸೌಹಾರ್ದತೆಯೊಂದಿಗೆ ಅಭಿವೃದ್ಧಿ ಹೊಂದಬೇಕು. ಯುವಕರು ಒಗ್ಗಟ್ಟಾಗಿ ಕೆಲಸ ಮಾಡಬೇಕು, ದುಷ್ಚಟದಿಂದ ದೂರವಿರಬೇಕು, ವಿದ್ಯಾಭ್ಯಾಸದಲ್ಲಿ ಮುಂದಡೆ ಸಾಧಿಸಿ ಸಮಾಜದ ಕೀರ್ತಿಗೆ ಪಾತ್ರರಾಗಬೇಕು ಎಂದರು. ವಿಜಯ ಮಹಾಂತೇಶ ಶಾಖಾಮಠಸದ ಲಿಂಗಸುಗೂರಿನ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿ, ಇತ್ತೀಚಿಗೆ ರಾಜ್ಯದ ಎಲ್ಲ ಲಂಬಾಣಿಗರು ಸೇರಿ ಸೇವಾಲಾಲ ಜಯಂತಿ ಆಚರಣೆ ಮಾಡುತ್ತಿದ್ದಾರೆ ವಿಶೇಷವಾಗಿ ಸೇವಾಲಾಲ ಜನ್ಮಸ್ಥಳವಾದ ದಾವಣಗೆರೆ ಜಿಲ್ಲೆ ಹೊನ್ನಳ್ಳಿ ತಾಲೂಕಿನ ಸೂರೆಗೊಂಡನ ಕೊಪ್ಪದಲ್ಲಿ ವಿಶೇಷ ಕಾರ್ಯಕ್ರಮದೊಂದಿಗೆ ಸೇವಾಲಾಲ ಜನ್ಮೋತ್ಸವನ್ನು ಆಚರಣೆ ಮಾಡುತ್ತಾರೆ. ಈಗ ಸಮಾಜದಲ್ಲಿ ಪ್ರತಿ ತಾಂಡಾದಲ್ಲಿ ಸೇವಾಲಾಲ ಜಯಂತಿ ಆಚರಣೆ ಮಾಡಬೇಕು.

ಮುಂದಿನ ವರ್ಷದಲ್ಲಿ ರಜೆ ರಹಿತವಾಗಿ ಸರ್ಕಾರ ಮಟ್ಟದಲ್ಲಿ ಸೇವಾಲಾಲ ಆಚರಣೆ ಮಾಡಬೇಕೆಂದು ಸಮಾಜದಿಂದ ಒತ್ತಾಯಿಸಬೇಕಾದ ಕರ್ತವ್ಯ ನಮ್ಮದಾಗಿದೆ. ಸಮಾಜವನ್ನು ನಾನಾ ರಂಗಗಳಲ್ಲಿ ತುಳಿತಕ್ಕೊಳಗಾಗಿರುವ ಲಂಬಾಣಿ ಸಮುದಾಯದ ಅಭಿವೃದ್ಧಿಗೆ ಒಗ್ಗಟ್ಟು ಅವಶ್ಯವಾಗಿದೆ ಎಂದರು.ಬಂಜಾರರು ಸಂಘಟಿತರಾಗಿ ಕಲೆ, ಸಂಸ್ಕೃತಿ, ಸಂಪ್ರದಾಯ, ಉಡುಗೆ, ತೊಡುಗೆ ಮರೆಯಕೂಡದು, ಧಾರ್ಮಿಕ ಪರಂಪರೆಯನ್ನು ತನ್ನದೇ ರೀತಿಯಲ್ಲಿ ಗಟ್ಟಿಗೊಳಿಸಿದ ಹೆಗ್ಗಳಿಕೆ ಸಮಾಜಕ್ಕಿದೆ. ಶ್ರವಜೀವಿಗಳಾಗಿರುವ ಲಂಬಾಣಿ ಸಮುದಾಯ ಏಳ್ಗೆಗೆ ಅಕ್ಷರ ಜ್ಞಾನ ಎಲ್ಲರಿಗೂ ಬೇಕಾಗಿದೆ. ಆನಿಟ್ಟಿನಲ್ಲಿ ಎಲ್ಲ ತಂದೆ-ತಾಯಂದಿರು ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸುವುದು ಅವಶ್ಯ ಎಂದು ಅವರು ತಿಳಿಸಿದರು.  ಈ ವೇಳೆ ಜಿಪಂ ಸದಸ್ಯ ಪ್ರೇಮಾಬಾಯಿ ಚವ್ಹಾಣ, ತಾಪಂ ಸದಸ್ಯ ಲಕ್ಷ್ಮೀಬಾಯಿ ರಾಠೋಡ, ಗ್ರಾಪಂ ಸದಸ್ಯೆ ಸಾವಿತ್ರಿ ರಾಠೋಡ, ಗ್ರಾಪಂ ಸದಸ್ಯ ಅರವಿಂದ ಚವ್ಹಾಣ, ಥಾವರಪ್ಪ ಜಾಧವ, ಸೋಮಪ್ಪ ಚವ್ಹಾಣ, ಖುಬಪ್ಪ ಚವ್ಹಾಣ, ಯುವ ಧುರಿಣ ಮೋತಿಲಾಲ ಚವ್ಹಾಣ, ಸಂತೋಷ ತೋಟದ, ಯುವ ಮುಖಂಡ ಸಂತೋಷ ಚವ್ಹಾಣ, ಮಾನಸಿಂಗ ಚವ್ಹಾಣ ಮತ್ತಿತರರು ಇದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin