ಅಭಿವೃದ್ಧಿ, ಶಾಂತಿ-ಸ್ಥಿರತೆಗೆ ಬ್ರಿಕ್ಸ್ ಕಾರ್ಯಸೂಚಿಯಾಗಲಿದೆ : ಪ್ರಧಾನಿ ವಿಶ್ವಾಸ

Spread the love

Brics

ನವದೆಹಲಿ, ಅ.14-ವಿಶ್ವವನ್ನು ಕಾಡುತ್ತಿರುವ ಸಮಸ್ಯೆಗಳಿಗೆ ಪರಿಹಾರೋಪಾಯ ಹಾಗೂ ಹೊಸ ಸಹಭಾಗಿತ್ವ ಸಂಪರ್ಕ ಸೇತುವೆ ನಿರ್ಮಾಣಕ್ಕೆ ಬ್ರಿಕ್ಸ್ ಮತ್ತು ಬಿಮ್‍ಸ್ಟೆಕ್ ಶೃಂಗಸಭೆಗಳು ಸಹಕಾರಿಯಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಬ್ರಿಕ್ಸ್ ಸಮಾವೇಶವು ಅಭಿವೃದ್ದಿ, ಶಾಂತಿ, ಸ್ಥಿರತೆ ಮತ್ತು ಸುಧಾರಣೆಗಾಗಿ ಮುಂದುವರಿದ ಕಾರ್ಯಸೂಚಿಯಾಗಲಿದೆ ಎಂದು ಪ್ರಧಾನಿ ಬಣ್ಣಿಸಿದ್ದಾರೆ.  ಗೋವಾ ರಾಜಧಾನಿ ಪಣಜಿಯಲ್ಲಿ ನಾಳೆಯಿಂದ ಆರಂಭವಾಗಲಿರುವ ಎರಡು ದಿನಗಳ ಬ್ರಿಕ್ಸ್ (ಬ್ರೆಜಿಲ್, ರಷ್ಯಾ, ಇಂಡಿಯಾ, ಚೀನಾ ಮತ್ತು ಸೌತ್ ಆಫ್ರಿಕಾ) ದೇಶಗಳ ಸಮಾವೇಶಕ್ಕೆ ಮುನ್ನ ಫೇಸ್‍ಬುಕ್ ಪೋಸ್ಟ್ ನಲ್ಲಿ ಹೇಳಿಕೆ ನೀಡಿರುವ ಪ್ರಧಾನಿ, ನಮ್ಮ ಗುರಿಗಳ ಮಾರ್ಗಕ್ಕೆ ಅಡ್ಡ ನಿಂತಿರುವ ಅಂತಾರಾಷ್ಟ್ರೀಯ ಮತ್ತು ಪ್ರಾದೇಶಿಕ ಸವಾಲುಗಳನ್ನು ಎದುರಿಸಲು ಈ ಸಮಾವೇಶದಲ್ಲಿ ನಾವು ಮಹತ್ವದ ಚರ್ಚೆ ನಡೆಸಲಿದ್ದೇವೆ ಎಂದು ಹೇಳಿದ್ದಾರೆ.

ಬ್ರಿಕ್ಸ್ ಶೃಂಗಸಭೆ ಅಂತರ-ಬ್ರಿಕ್ಸ್ ಸಹಕಾರವನ್ನು ಹೆಚ್ಚಿಸಲಿದೆ ಎಂಬ ಬಗ್ಗೆ ನಾನು ಆಶಾಭಾವನೆ ಹೊಂದಿದ್ದೇನೆ ಎಂದು ಪ್ರಧಾನಿ ಹೇಳಿದ್ದಾರೆ.  ಶೃಂಗಸಭೆಯ ಸಂದರ್ಭದಲ್ಲಿ ಮೋದಿ ಅವರು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಮತ್ತು ಇತರ ನಾಯಕರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.  ಇದೇ ಸಂದರ್ಭದಲ್ಲಿ ಅವರು ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿರುವ ಪಾಕಿಸ್ತಾನದ ವಿರುದ್ಧ ರಾಜತಾಂತ್ರಿಕ ದಾಳಿಗಳನ್ನು ಮುಂದುವರಿಸಲಿದ್ದು, ಈ ದೇಶಗಳ ನಾಯಕರೊಂದಿಗೆ ಇದನ್ನು ಪ್ರಮುಖವಾಗಿ ಪ್ರಸ್ತಾಪಿಸುವ ನಿರೀಕ್ಷೆ ಇದೆ.

► Follow us on –  Facebook / Twitter  / Google+

Facebook Comments

Sri Raghav

Admin