ಅಮಿತ್ ಷಾ ಅಹಂ ಪ್ರದರ್ಶಿಸಿಲ್ಲ, ಶ್ರೀಮಠದಿಂದ ಸ್ಪಷ್ಟನೆ

Amit-Shah--01

ಮಂಡ್ಯ. ಆ.14 : ಆದಿಚುಂಚನಗಿರಿ ನಿರ್ಮಲಾನಂದ ಸ್ವಾಮೀಜಿ ಮುಂದೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಕಾಲು ಮೇಲೆ ಹಾಕಿ ಕುಳಿತು ಅಶಿಸ್ತಿನ ವರ್ತನೆ ತೋರಿದ್ದಾರೆ ಎಂಬ ಸುದ್ದಿ ಫೋಟೋ ಸಮೇತ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.  ಭಾನುವಾರ ಶ್ರೀ ಮಠಕ್ಕೆ ಭೇಟಿ ನೀಡಿದ ವೇಳೆ ಅಮಿತ್ ಷಾ ಸ್ವಾಮೀಜಿಯ ಮುಂದೆ ಕಾಲು ಮೇಲೆ ಕಾಲು ಹಾಕಿ ಕುಳಿತಿದ್ದರು. ಅಮಿತ್ ಷಾ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಒಕ್ಕಲಿಗ ಜನರಲ್ಲಿ ಆಕ್ರೋಶ ವ್ಯಕ್ತವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಅಮಿತ್ ವರ್ತನೆ ಖಂಡಿಸಿ ಪೋಸ್ಟರ್ ಗಳು ಪ್ರಕಟವಾಗುತ್ತಿವೆ.

ಈಗ ಈ ಘಟನೆ ಕುರಿತಂತೆ ಸ್ಪಷ್ಟನೆ ನೀಡಿರುವ ಆದಿಚುಂಚನಗಿರಿ ಮಠ ಸ್ಪಷ್ಟನೆ ನೀಡಿದ, ಘಟನೆ ಕುರಿತು ಹೊರಡಿಸಿದ ಪತ್ರಿಕಾ ಪ್ರಕಟಣೆ ಹೀಗಿದೆ ನೋಡಿ.

ನಿನ್ನೆ ಶ್ರೀ ಆದಿಚುಂಚನಗಿರಿ ಕ್ಷೇತ್ರದಲ್ಲಿ ಏರ್ಪಡಿಸಿದ್ದ  The story of a Guru ಕೃತಿಯ ಬಿಡುಗಡೆ ಸಮಾರಂಭದಲ್ಲಿ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ಅಮಿತ್ ಶಾರವರು ಪರಮಪೂಜ್ಯ ಶ್ರೀ ಶ್ರೀ ಪರಮಾತ್ಮಾನಂದ ಸರಸ್ವತಿ ಸ್ವಾಮಿಗಳವರು ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಬಿ ಎಸ್ ಯಡಿಯೂರಪ್ಪರವರು ಶ್ರೀ ಡಿ ವಿ ಸದಾನಂದಗೌಡರು ಕೇಂದ್ರ ಸಚಿವರಾದ ಶ್ರೀ ಅನಂತಕುಮಾರ್ ಮುಂತಾದ ಗಣ್ಯರು ಪಾಲ್ಗೊಂಡು ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನೆರವೇರಿದ್ದು ಸರಿಯಷ್ಟೆ.

ಈ ಸಂದರ್ಭದಲ್ಲಿ ಶ್ರೀ ಮಠದ ಗುರುಗಳಿಗೆ ಶ್ರೀ ಅಮಿತ್ ಶಾರವರಿಂದ ಅಗೌರವ ಎಂಬ ವಿಷಯ ಸಾರ್ವಜನಿಕವಾಗಿ ಚರ್ಚೆ ನಡೆಯುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಆ ಬಗ್ಗೆ ಈ ಸೃಷ್ಟೀಕರಣ ನೀಡಬಯಸುತ್ತೇವೆ.

ನಾವು ಭಕ್ತರೊಡನೆ ಇದ್ದ ಸಂದರ್ಭದಲ್ಲಿ ನಮ್ಮ ಕಛೇರಿಯಲ್ಲಿ ಶ್ರೀ ಅಮಿತ್ ಶಾರವರು ಪೂಜ್ಯ ಶ್ರೀ ಪರಮಾತ್ಮಾನಂದ ಸರಸ್ವತಿ ಸ್ವಾಮಿಗಳವರೊಡನೆ ವಿಚಾರ ವಿನಿಮಯದ ಚರ್ಚೆಯಲ್ಲಿದ್ದರು. ತಮ್ಮ ಅಭ್ಯಾಸದಂತೆ ಕಾಲಿನ ಮೇಲೆ ಕಾಲು ಹಾಕಿ ಕುಳಿತು ಪೂಜ್ಯರೊಂದಿಗೆ ಚರ್ಚೆಯಲ್ಲಿದ್ದ ಶ್ರೀ ಅಮಿತ್ ಶಾರವರು ನಾವು ಕಛೇರಿಯ ಒಳಗಡೆ ಪ್ರವೇಶಿಸಿದ್ದನ್ನು ಗಮನಿಸಿರಲಿಲ್ಲ. ಗಮನಿಸಿದ ಮೇಲೆ ತಮ್ಮ ಕಾಲನ್ನು ಕೆಳಗಿಳಿಸಿ ಎದ್ದು ನಮ್ಮನ್ನು ಗೌರವಿಸಿ ಮತ್ತೆ ಕುಳಿತರು. ಇದರಿಂದ ಅಮಿತ್ ಶಾರವರು ನಮಗೆ ಅಗೌರವವನ್ನು ತೋರಿಸಿದ್ದಾರೆಂದು ಯಾರೂ ಭಾವಿಸಬಾರದು.

ರಾಜಕೀಯದ ಹೊರತಾಗಿಯೂ ಶ್ರೀ ಅಮಿತ್ ಶಾರವರು ನಮ್ಮನ್ನು ಈ ಹಿಂದೆ ಹಲವು ಬಾರಿ ಭೇಟಿಯಾದಾಗಲೆಲ್ಲ ಅತ್ಯಂತ ಗೌರವಪೂರ್ವಕವಾಗಿ ಕಂಡಿದ್ದಾರೆ. ನಮ್ಮ ಆಹ್ವಾನವನ್ನು ಗೌರವಿಸಿ ಶ್ರೀ ಕ್ಷೇತ್ರಕ್ಕೆ ಆಗಮಿಸಿ ಕೃತಿ ಬಿಡುಗಡೆ ಸಮಾರಂಭವನ್ನು ಅತ್ಯಂತ ಯಶಸ್ವಿಯಾಗಿ ನೆರವೇರಿಸಿಕೊಟ್ಟ ಶ್ರೀ ಅಮಿತ್ ಶಾರವರಿಂದ ಪೀಠಕ್ಕೆ ಅಗೌರವವಾಗಿದೆ ಎಂದು ನಾವು ಎಂದಿಗೂ ಭಾವಿಸುವುದಿಲ್ಲ. ಭಕ್ತರೂ ಆ ರೀತಿ ಭಾವಿಸಬಾರದೆಂದು ಈ ಮೂಲಕ ಆಶಿಸುತ್ತೇವೆ.

– ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ

Sri Raghav

Admin