ಅಮೆರಿಕದ 16ನೇ ಅಧ್ಯಕ್ಷ ಅಬ್ರಹಾಮ್ ಲಿಂಕನ್‍ಗೂ ಕಾಡಿತ್ತು ಖಿನ್ನತೆ ..!

abraham-lincoln

ಖಿನ್ನತೆ ಎಂಬ ಈ ಪಿಡುಗು ಒಂದಲ್ಲ ಒಂದು ಸಂದರ್ಭ ಬಹುತೇಕ ಎಲ್ಲರನ್ನೂ ಕಾಡಿರುವ ಸಾಧ್ಯತೆ ಇದೆ. ತೀರಾ ದುರ್ಬಲ ಮನಸ್ಸಿನವರಾದರೆ ಅದಕ್ಕೆ ಶರಣಾಗಿಬಿಡುತ್ತಾರೆ. ಆದರೆ ಮನೋ ದಾಢ್ರ್ಯತೆ, ಛಲ ಮತ್ತು ಹೊಣೆಗಾರಿಕೆಗಳಿಂದ ಬದ್ಧರಾದ ವ್ಯಕ್ತಿಗಳು ಅದರಿಂದ ಹೊರಬಂದು ಜಗತ್ತನ್ನೇ ಬೆರಗುಗೊಳಿಸುವಂತಹ ಸಾಧನೆ ಮಾಡಿ ಮಹಾಪುರಷರು ಎನಿಸುತ್ತಾರೆ.  ಇಂತಹವರ ಸಾಲಿನಲ್ಲಿ ಅಚ್ಚರಿಪಡುವಂತಹ ವ್ಯಕ್ತಿ ಎಂದರೆ ಅಮೆರಿಕದ 16ನೇ ಅಧ್ಯಕ್ಷ ಅಬ್ರಹಾಮ್ ಲಿಂಕನ್.! ಆಧುನಿಕ ಪ್ರಜಾಪ್ರಭುತ್ವಕ್ಕೆ ಭಾಷ್ಯ ಬರೆದದ್ದು ಮತ್ತು ಗುಲಾಮಗಿರಿಯನ್ನು ಮೂಲೋತ್ಪಾಟನೆ ಮಾಡಿದ್ದು ಇದೇ ಲಿಂಕನ್. ಅಮೆರಿಕದ ಅಧ್ಯಕ್ಷರಾಗಿ ಆ ದೇಶದ ಆರ್ಥಿಕ ಪರಿಸ್ಥಿತಿ ಉನ್ನತ ಶೃಂಗಕ್ಕೇರಲು ಭದ್ರ ಬುನಾದಿ ಹಾಕಿದವರು ಅಬ್ರಹಾಂ ಲಿಂಕನ್.1809ರ ಫೆಬ್ರವರಿ 12ರಂದು ಕೆಂಟುಕಿಯ ಹಾಡ್ಜನ್‍ವಿಲ್ಲೆ ಎಂಬ ಗ್ರಾಮದಲ್ಲಿ ಜನಿಸಿದರೂ ಬೆಳೆದದ್ದು ಇಂಡಿಯಾನದಲ್ಲಿ ಅಬ್ರಹಾಂ ಲಿಂಕನ್ ಅವರು ಅಧ್ಯಯನ ನಡೆಸಿ ವಿದ್ಯಾ ವಂತರಾದವರು. ಕೆಲ ವರ್ಷಗಳ ಕಾಲ ವಕೀಲರಾಗಿಯೂ ಸೇವೆ ಸಲ್ಲಿಸಿದರು.  ಇಲಿನಾಯ್ಸ್‍ನ ಹೌಸ್ ಆಫ್ ರೆಪ್ರೆಸೆಂಟಿಟಿವ್ ಆಗಿದ್ದು , ನಂತರ 1846ರಲ್ಲಿ ಅಮೆರಿಕದ ಹೌಸ್ ಆಫ್ ರೆಪ್ರೆಸೆಂಟಿಟಿವ್ ಆದರು. ಇವರ ಆಡಳಿತ ಅವಧಿಯಲ್ಲಿ ದೇಶಕ್ಕೆ ಒಂದು ಘನತೆಯನ್ನು ತಂದುಕೊಟ್ಟಿದ್ದಲ್ಲದೆ ಅಮೆರಿಕ ಆರ್ಥಿಕವಾಗಿ ಬಲಿಷ್ಠವಾಗಲು ಕಾರಣರಾದರು.

6 ಅಡಿ 4 ಇಂಚು (6.4 ಅಡಿ) ಎತ್ತರದ ಅಜಾನುಬಾಹುವಾಗಿದ್ದ ಲಿಂಕನ್ ದೈಹಿಕವಾಗಿ ಎಷ್ಟು ಸದೃಢರಾಗಿದ್ದರೆಂದರೆ ಒಮ್ಮೆ ಇವರು ಭಾಷಣ ಮಾಡುವ ಸಂದರ್ಭ ಇವರ ಬೆಂಬಲಿಗನ ಮೇಲೆ ದುಷ್ಕರ್ಮಿಯೊಬ್ಬ ಹಲ್ಲೆ ನಡೆಸಿದ. ಇದನ್ನು ಕಂಡ ಲಿಂಕನ್ ಚಿರತೆಯಂತೆ ಆ ವ್ಯಕ್ತಿಯ ಮೇಲೆ ಹಾರಿ ಅವನ ಕೊರಳು ಪಟ್ಟಿ ಮತ್ತು ಸೊಂಟ ಪಟ್ಟಿ ಹಿಡಿದು ಮೇಲಕೆತ್ತಿ ಒಗೆದುಬಿಟ್ಟಿದ್ದರು! ಇಂತಹ ಅಬ್ರಹಾಂ ಲಿಂಕನ್ ಅವರಿಗೂ ಕೂಡ ಖಿನ್ನತೆ ಎಂಬುದು ಬಿಡಲಿಲ್ಲ. ಲಿಂಕನ್ ಕೇವಲ 9 ವರ್ಷ ಇದ್ದಾಗ ಅವರ ತಾಯಿ ನಾನ್ಸಿ ಲಿಂಕನ್ ಕಾಯಿಲೆಯಿಂದ ಮೃತರಾದರು. 11 ವರ್ಷದ ಅಕ್ಕನ ಜವಾಬ್ದಾರಿಯೂ ಇವರ ಹೆಗಲ ಮೇಲೆ ಬಿತ್ತು. ಆದರೆ ಲಿಂಕನ್ ಅದನ್ನೆಲ್ಲ ಧಯರ್ಯದಿಂದ ಎದುರಿಸಿದರು. ಕೆಲವು ವರ್ಷಗಳ ನಂತರ ತನ್ನ ಅಕ್ಕನನ್ನೂ ಕಳೆದುಕೊಂಡರು.

ಲಿಂಕನ್ ಅವರು 23ನೇ ವಯಸ್ಸಿಗೆ ಬರುವಷ್ಟರಲ್ಲಿ ಇಂತಹ ಹಲವಾರು ಕಡತಗಳು ಬಿದ್ದವು. ಆ ಸಂದರ್ಭ ಅವರು ಅಧೀರರಾಗಿಬಿಟ್ಟರು. ಆಗಲೇ ಅವರು ಖಿನ್ನತೆಗೊಳಗಾದರು. ಅವರ ಮನಸ್ಸನ್ನು ಚಿಂತೆ ಆವರಿಸಿತ್ತು. ಆಗ ಅವರ ಸಂಗಾತಿಗಳಾಗಿದ್ದು ಪುಸ್ತಕಗಳು.  ಕಿಂಗ್ ಜೇಮ್ಸ್ ಬೈಬಲ್, ಈಸೋಪನ ಕಥೆಗಳು, ಬುನ್ಯನ್ ಅವರ ದಿ ಫಿಲಿಗ್ರಿಮ್ಸ್ ಪ್ರೊಗ್ರೆಸ್, ಡಿಪೋ ಅವರ ರಾಬಿನ್‍ಸನ್ ಕ್ರೂಸೊ ವೀಮ್ಸ್ ಅವರ ದಿ ಲೈಫ್ ಆಫ್ ವಾಷಿಂಗ್ಟನ್, ಫ್ರಾಂಕ್ಲಿನ್ ಅವರ ಜೀವನ ಚರಿತ್ರೆ ಮುಂತಾದ ಪುಸ್ತಕಗಳನ್ನು ಓದಿ ಅದರಿಂದ ಸ್ಪೂರ್ತಿ ಪಡೆದು ಮತ್ತೆ ಎದ್ದು ನಿಂತರು.

ಅಮೆರಿಕ ಉಪಾಧ್ಯಕ್ಷರಾಗಿ ಹೆಸರು ಮಾಡಿದರು. ನಂತರ 1861ರ ಮಾರ್ಚ್‍ನಿಂದ 1865ರ ಏಪ್ರಿಲ್‍ನಲ್ಲಿ ಅವರ ಹತ್ಯೆಯಾಗುವವರೆಗೂ ಅಮೆರಿಕದ ಅತ್ಯಂತ ಜನಪ್ರಿಯ ಅಧ್ಯಕ್ಷರಾಗಿ ಚರಿತ್ರೆಯಲ್ಲಿ ಉಳಿದುಹೋದರು. ಇಂತಹ ವ್ಯಕ್ತಿಗಳನ್ನು ಮಾದರಿಯಾಗಿಟ್ಟುಕೊಂಡು ನಾವು ಮುನ್ನಡೆಯಬೇಕಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin