ಅಮೆರಿಕ ಬೆದರಿಕೆಗೆ ಡೋಂಟ್ ಕೇರ್ : ಮತ್ತೊಂದು ಕ್ಷಿಪಣಿ ಉಡಾಯಿಸಿದ ಉತ್ತರ ಕೊರಿಯಾ
ಸಿಯೋಲ್/ವಾಷಿಂಗ್ಟನ್, ಏ.20-ಅಣ್ವಸ್ತ್ರ ಆತಂಕವೊಡ್ಡಿರುವ ಉತ್ತರ ಕೊರಿಯಾ ಮೇಲೆ ಪ್ರಬಲ ಅಂತಾರಾಷ್ಟ್ರೀಯ ದಿಗ್ಬಂಧನಗಳನ್ನು ವಿಧಿಸುವ ಅಮೆರಿಕದ ಯತ್ನಗಳಿಗೆ ಜಗ್ಗದ ಹಠಮಾರಿ ರಾಷ್ಟ್ರವು ಇಂದು ಮತ್ತೆ ಇನ್ನೊಂದು ಖಡಾಂತರ ಕ್ಷಿಪಣಿಯನ್ನು ಉಡಾಯಿಸಿದೆ. ಆದರೆ ಪಯೊಂಗ್ಯಾಂಗ್ ಕ್ಷಿಪಣಿ ಪ್ರಯೋಗ ವಿಫಲವಾಗಿದೆ ಎಂದು ಅಮೆರಿಕ ಖಚಿತಪಡಿಸಿದೆ. ಈ ಕುರಿತು ಖಂಡನಾ ಹೇಳಿಕೆ ನೀಡಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಉತ್ತರ ಕೊರಿಯಾ ಮತ್ತೊಂದು ಕ್ಷಿಪಣಿ ಪರೀಕ್ಷೆ ನಡೆಸಿ ಚೀನಾ ಜನರ ಆಶೋತ್ತರಗಳಿಗೆ ಅಗೌರವ ಉಂಟು ಮಾಡಿದೆ ಎಂದು ಟೀಕಿಸಿದ್ದಾರೆ.
ದಕ್ಷಿಣ ಪಯೊಂಗ್ಯಾಂಗ್ ಪ್ರಾಂತ್ಯದ ಬುಕ್ಚಾಂಗ್ನಲ್ಲಿ ಇಂದು ಮುಂಜಾನೆ ಉತ್ತರ ಕೊರಿಯಾ ಅಪರಿಚಿತ ಕ್ಷಿಪಣಿಯನ್ನು ಉಡಾಯಿಸಿದೆ ಎಂದು ದಕ್ಷಿಣ ಕೊರಿಯಾದ ವಾರ್ತಾ ಸಂಸ್ಥೆ ಯೋನ್ಹ್ಯಾಪ್ ವರದಿ ಮಾಡಿದೆ. ಈ ಕ್ಷಿಪಣಿ ಪ್ರಯೋಗ ವಿಫಲವಾಗಿದೆ ಎಂದು ಅದು ತಿಳಿಸಿದೆ. ಖಂಡಾಂತರ ಕ್ಷಿಪಣಿಯು ಉತ್ತರ ಕೊರಿಯಾ ಗಡಿಯನ್ನು ದಾಟಿಲ್ಲ. ಈ ಪ್ರಯೋಗ ವಿಫಲವಾಗಿದೆ ಎಂದು ಅಮೆರಿಕದ ರಕ್ಷಣಾ ಇಲಾಖೆ ಪೆಂಟಗನ್ ಸಹ ದೃಢಪಡಿಸಿದೆ. ಅಲ್ಲದೇ ಪಯೊಂಗ್ಯಾಂಗ್ನ ಪ್ರಚೋದರಕಾರಿ ಪರೀಕ್ಷಾರ್ಥ ಪ್ರಯೋಗವನ್ನು ಖಂಡಿಸಿದೆ.
ಉತ್ತರ ಕೊರಿಯಾ ಅಗಿಂದಾಗ್ಗೆ ಕ್ಷಿಪಣಿ ಪರೀಕ್ಷೆಗಳನ್ನು ನಡೆಸುತ್ತಿರುವುದರಿಂದ ಪ್ರಮುಖ ಸಂಘರ್ಷಕ್ಕೆ ಕಾರಣವಾಗಲಿದೆ ಎಂದು ಟ್ರಂಪ್ ಎಚ್ಚರಿಕೆ ನೀಡಿ ಕೊರಿಯ ದ್ವೀಪಕಲ್ಪದಲ್ಲಿ ನೌಕಾಪಡೆಗಳನ್ನು ನಿಯೋಜಿಸಿದ್ದರೂ, ಪಯೊಂಗ್ಯಾಂಗ್ನ ನಿರ್ಭೀತ ನಡೆ ಅಂತಾರಾಷ್ಟ್ರೀಯ ಸಮುದಾಯದಲ್ಲಿ ಆತಂಕ ಸೃಷ್ಟಿಸಿದೆ.
< Eesanje News 24/7 ನ್ಯೂಸ್ ಆ್ಯಪ್ >