‘ಅಮ್ಮ’ನ ನಿಧನದ ಆಘಾತದಿಂದ ತಮಿಳುನಾಡಿನಲ್ಲಿ 68 ಮಂದಿ ಸಾವು..!

Jayalalithaa-011

ಚೆನ್ನೈ, ಡಿ.7-ತಮಿಳುನಾಡಿನ ಆರಾಧ್ಯದೈವ ಜಯಲಲಿತಾ ನಿಧನದ ಸುದ್ದಿ ತಿಳಿದು ಆಘಾತಕ್ಕೆ ಒಳಗಾಗಿ ಈವರೆಗೆ ರಾಜ್ಯದಾದ್ಯಂತ 68ಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದಾರೆ. ಅಲ್ಲದೇ ಅಧಿನಾಯಕಿ ಸಾವಿನ ನಂತರ ನೂರಾರು ಜನ ಅಸ್ವಸ್ಥರಾಗಿದ್ದಾರೆ. ಜಯಾ ನಿಧನದ ಸುದ್ದಿ ಟಿವಿಯಲ್ಲಿ ಪ್ರಸಾರವಾಗುತ್ತಿದ್ದಂತೆ ತಮಿಳುನಾಡಿನ ವಿವಿಧೆಡೆ ಹೃದಯಾಘಾತದಿಂದ ಕೆಲವರು ಮತ್ತು ಆಘಾತಕ್ಕೆ ಒಳಗಾಗಿ ಇನ್ನು ಹಲವರು ಮೃತಪಟ್ಟಿದ್ದಾರೆ ಎಂದು ಅಂಕಿಅಂಶಗಳು ಹೇಳಿವೆ. ಕೆಲವು ಮಹಿಳೆಯರೂ ಆಘಾತದಿಂದ ಸಾವಿಗೀಡಾಗಿದ್ದಾರೆ.

ಜಯಲಲಿತಾ ನಿಧನರಾದ ಸುದ್ಧಿ ಟಿವಿಯಲ್ಲಿ ಪ್ರಸಾರವಾಗುತ್ತಿದ್ದಂತೆ ಎಐಎಡಿಎಂಕೆ ಕಾರ್ಯಕರ್ತ ನೀಲಕಂಠನ್ ಹೃದಯಾಘಾತದಿಂದ ಮೃತಪಟ್ಟಿದ್ದರು. ಅದಾದ ನಂತರ ರಾಜ್ಯದ ವಿವಿಧ ಜಿಲ್ಲೆಗಳಲ್ಲೂ ಇದೇ ರೀತಿಯ ದುರ್ಘಟನೆಗಳು ವರದಿಯಾಗುತ್ತಿವೆ. ಟಿವಿ ವೀಕ್ಷಿಸುವಾಗ ಕೆಲವರು ಹೃದಯಸ್ತಂಭನದಿಂದ ಮೃತರಾದರು. ತಮ್ಮ ನೆಚ್ಚಿನ ಆರಾಧ್ಯದೈವ ಜಯಾ ಅಗಲಿಕೆಯಿಂದ ಪರಿತಪಿಸುತ್ತಿದ್ದ ಇನ್ನು ಕೆಲವು ಅಭಿಮಾನಿಗಳು ಮತ್ತು ಪಕ್ಷದ ಕಾರ್ಯಕರ್ತರು ಆಘಾತದಿಂದ ಅಥವಾ ಪಾರ್ಥಿವ ಶರೀರ ನೋಡಿ ದು:ಖಿತರಾಗಿ ಸಾವಿಗೀಡಾದರು.

ಜಯಲಲಿತಾ ಅನಾರೋಗ್ಯಕ್ಕೆ ಒಳಗಾಗಿ ಸೆಪ್ಟೆಂಬರ್ 22ರಂದು ಆಪೋಲೊ ಆಸ್ಪತ್ರೆಗೆ ಸೇರಿದ ದಿನದಿಂದಲೂ ಅನೇಕರು ಆಕೆಯ ಆರೋಗ್ಯದ ಬಗ್ಗೆ ಚಿಂತಿತರಾಗಿದ್ದರು. ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದ ಡಾ. ಎಂ.ಜಿ.ರಾಮಚಂದ್ರನ್ ನಿಧನರಾದಾಗಲೂ ಅನೇಕ ಅಭಿಮಾನಿಗಳು ಆಘಾತಕ್ಕೆ ಒಳಗಾಗಿ ಮೃತಪಟ್ಟಿದ್ದರು.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Sri Raghav

Admin