ಅರವಿಂದ್ ಜಾದವ್ ಪ್ರಕರಣ ಮುಚ್ಚಿ ಹಾಕಲು ದಕ್ಷ ಅಧಿಕಾರಿಯ ಹುನ್ನಾರ..?

s -Aravind-Jadav-001

ಬೆಂಗಳೂರು, ಆ.28– ಭೂ ಕಬಳಿಕೆ ಆರೋಪಕ್ಕೆ ಸಿಲುಕಿರುವ ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ಅರವಿಂದ್ ಜಾದವ್  ಅವರ ಪ್ರಕರಣವನ್ನು ಉದ್ದೇಶಪೂರ್ವಕವಾಗಿಯೇ ಮುಚ್ಚಿಹಾಕಲು ಪ್ರಭಾವಿ ಅಧಿಕಾರಿಯೊಬ್ಬರು ವಿಫಲ ಯತ್ನ ನಡೆಸಿರುವುದು ಬೆಳಕಿಗೆ ಬಂದಿದೆ.  ಈ ಹಿಂದೆ ಬೆಂಗಳೂರು ನಗರದಲ್ಲಿ  ಭೂ ಒತ್ತುವರಿ ಹಾಗೂ ಅಕ್ರಮ ಕಟ್ಟಡಗಳನ್ನು ನೆಲಸಮಗೊಳಿಸಿ ಬುಲ್ಡೋಜರ್ ಐಎಎಸ್ ಅಧಿಕಾರಿಯೆಂದೇ ಗುರುತಿಸಿಕೊಂಡಿದ್ದ ಇವರು ಇದೀಗ ಅರವಿಂದ್ಜಾದವ್ ಅವರ ಹಿತ ಕಾಪಾಡಲು ಮುಂದಾಗಿರುವುದು ನಾನಾ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
ಕಳೆದ ಹಲವು ತಿಂಗಳುಗಳಿಂದ ಒಂದೇ ಜಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಈ ಅಧಿಕಾರಿ ತೀರ ವಿವಾದವನ್ನು ಸೃಷ್ಟಿಸಿಕೊಂಡಿದ್ದಾಗಲಿ ಇಲ್ಲವೇ ಮೇಲೆ ಎಳೆದುಕೊಂಡಿರುವ ನಿದರ್ಶನಗಳಿಲ್ಲ.
ಆದರೆ, ಅರವಿಂದ್ಜಾದವ್ ತಮ್ಮ ತಾಯಿ ಹೆಸರಿನಲ್ಲಿ ಕಾನೂನು ಉಲ್ಲಂಘಿಸಿ ಜಮೀನು ಖರೀದಿ ಮಾಡಿರುವುದು ಮೇಲ್ನೋಟಕ್ಕೆ ಸಾಭೀತಾಗಿದ್ದರೂ ಅವರನ್ನು ರಕ್ಷಣೆ ಮಾಡಲು ಮುಂದಾಗಿರುವುದು ಯಾವ ಕಾರಣಕ್ಕಾಗಿ ಎಂಬುದು ಮಾತ್ರ ಯಕ್ಷ ಪ್ರಶ್ನೆಯಾಗಿದೆ.

ಎಸಿ ಮೇಲೆ ಒತ್ತಡ:
ಅರವಿಂದ್ ಜಾದವ್ ಆನೇಕಲ್ ಸಮೀಪದ ರಾಮನಾಯಕನಹಳ್ಳಿ ಬಳಿ 8 ಎಕರೆ 14ಗುಂಟೆ ಜಮೀನನ್ನು ಕಾನೂನು ಬಾಹೀರವಾಗಿ ಖರೀದಿ ಮಾಡಿರುವುದು ಬೆಳಕಿಗೆ ಬರುತ್ತಿದ್ದಂತೆ ಸರ್ಕಾರ ತನಿಖೆಗೆ ಆದೇಶಿಸಿತ್ತು.  ಬೆಂಗಳೂರು ದಕ್ಷಿಣ ತಾಲ್ಲೂಕು ಸಹಯಾಕ ಉಪವಿಭಾಗಾಧಿಕಾರಿ (ಎಸಿ) ಡಿ.ಬಿ.ನಟೇಶ್ ಈ ಪ್ರಕರಣದ ತನಿಖೆ ನಡೆಸಿ ವರದಿ ನೀಡುವಂತೆ ಕಂದಾಯ ಇಲಾಖೆ ಪ್ರಧಾನಕಾರ್ಯದರ್ಶಿ ಇ.ವಿ.ರಮಣರೆಡ್ಡಿ ಸೂಚನೆ ಕೊಟ್ಟಿದ್ದರು. ಸರ್ಕಾರದ ನಿರ್ದೇಶನದಂತೆ ತನಿಖೆ ನಡೆಸಲು ಮುಂದಾಗಿದ್ದ ಎಸಿಗೆ ಈ ಐಎಎಸ್ ಅಧಿಕಾರಿ ಒತ್ತಡ ಹಾಕಿ ಅರವಿಂದ್ಜಾದವ್ ಪರ ವರದಿ ನೀಡಬೇಕೆಂದು ಮೌಖಿಕ ಸೂಚನೆ ಕೊಟ್ಟಿದ್ದರು ಎಂದು ತಿಳಿದು ಬಂದಿದೆ.

ಇಲ್ಲದ ಉಸಾಬರಿ ನನಗೇಕೆ ಎಂದು ಬೆದರಿದ ಎಸಿ ನಟೇಶ್ ಜಾದವ್ ಹಾಗೂ ಅವರ ತಾಯಿ ತಾರಾಬಾಯಿ ಮಾರುತಿಯಾದವ್ ಜಾದವ್ ಜಮೀನನ್ನು ಕಾನೂನು ಪ್ರಕಾರವೇ ಖರೀದಿ ಮಾಡಿದ್ದಾರೆ ಎಂದು ಇಡೀ ಪ್ರಕರಣವನ್ನೇ ತಿಪ್ಪೇಸಾರುವ ಪ್ರಯತ್ನ ಮಾಡಿದ್ದಾರೆ.  ಇದೀಗ ಎಸಿ ನೀಡಿರುವ ವರದಿ ಈ ಐಎಎಸ್ ಅಧಿಕಾರಿಯಿಂದ ರಮಣರೆಡ್ಡಿ ಕೈಗೆ ಸೇರಿದ್ದು, ನಿನ್ನೆ ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ತಲುಪಿದೆ ಎಂದು ತಿಳಿದು ಬಂದಿದೆ.

ಎಜಿ ಕೈಯಲ್ಲಿ ಜಾದವ್ ಭವಿಷ್ಯ:
ಇಡೀ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಕಂದಾಯ ಇಲಾಖೆಯ ಪ್ರಧಾನಕಾರ್ಯದರ್ಶಿ ಇ.ವಿ.ರಮಣರೆಡ್ಡಿ ನೀಡಿರುವ ವರದಿಯನ್ನು ಕೂಲಕಂಷವಾಗಿ ಪರಿಶೀಲಿಸಬೇಕೆಂದು ಅಡ್ವೋಕೇಟ್ ಜನರಲ್ ಮಧುನಾಯಕ್ಗೆ ಸೂಚನೆ ಕೊಟ್ಟಿದ್ದಾರೆ.  ವರದಿಯನ್ನು ಪರಿಶೀಲಿಸಿದ ಬಳಿಕ ಎಜಿ ನೀಡುವ ಅಭಿಪ್ರಾಯದ ಮೇಲೆ ಅರವಿಂದ್ಜಾದವ್ ಭವಿಷ್ಯ ನಿಂತಿದೆ. ಒಂದು ವೇಳೆ ಕಾನೂನು ಉಲ್ಲಂಘನೆ ಮಾಡಿ ಜಮೀನು ಖರೀದಿಸಿರುವುದು ಸ್ಪಷ್ಟವಾಗಿದೆ ಎಂದು ಎಜಿ ಸಲಹೆ ನೀಡಿದರೆ ಜಾದವ್ ಭವಿಷ್ಯಕ್ಕೆ ಕೊಕ್ಕೆ ಬೀಳುವುದರಲ್ಲಿ ಸಂದೇಹವಿಲ್ಲ.

ಕಡ್ಡಾಯ ರಜೆ:
ಮೂಲಗಳ ಪ್ರಕಾರ ಮುಜುಗರದಿಂದ ತಪ್ಪಿಸಿಕೊಳ್ಳಲು ಮುಂದಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಕಡ್ಡಾಯ ರಜೆ ತೆಗೆದುಕೊಳ್ಳುವಂತೆ ಮುಖ್ಯಕಾರ್ಯದರ್ಶಿಗೆ ಸೂಚಿಸಲಿದ್ದಾರೆ ಎಂದು ತಿಳಿದು ಬಂದಿದೆ. ತಮ್ಮ ಸೇವಾವಧಿಯನ್ನು ಇನ್ನು ಮೂರು ತಿಂಗಳ ಕಾಲ ಮುಂದುವರೆಸುವಂತೆ ಜಾದವ್ ದೆಹಲಿ ಮಟ್ಟದಲ್ಲಿ ತಮ್ಮ ಪರಮಾಪ್ತರ ಬಳಿ ಲಾಬಿ ನಡೆಸಿದ್ದರು. ಆದರೆ, ಭೂ ವಿವಾದ ಮೈ ಮೇಲೆ ಬಂದಿರುವುದರಿಂದ ಸರ್ಕಾರ ಮುಂದುವರೆಸುವ ಇಚ್ಛೆ ಹೊಂದಿಲ್ಲ ಎನ್ನಲಾಗಿದೆ. ಅರವಿಂದ್ ಜಾದವ್ ತಾಯಿ ದೇವನಹಳ್ಳಿ ಸಮೀಪ ಖರೀದಿ ಮಾಡಿದ್ದ ಕೃಷಿ ಜಮೀನನ್ನು ಸೂಪರ್ ಸ್ಟಾರ್ ರಜನಿಕಾಂತ್, ಮೆಗಾಸ್ಟಾರ್ ಚಿರಂಜೀವಿ ಸೇರಿದಂತೆ ಕೆಲ ಪ್ರಭಾವಿ ವ್ಯಕ್ತಿಗಳಿಗೆ ಒಟ್ಟು 14 ಎಕರೆ ಕೃಷಿ ಜಮೀನನ್ನು ಮಾರಾಟ ಮಾಡಿದ್ದಾರೆ. ಕಂದಾಯ ಇಲಾಖೆ ನಿಯಮಗಳ ಪ್ರಕಾರ ಕೃಷಿ ಜಮೀನನ್ನು ಪರಿವರ್ತನೆ ಮಾಡದೆ ಮಾರಾಟ ಮಾಡುವುದು ಕಾನೂನಿನ ಮೂಲಕ ಶಿಕ್ಷರ್ಹಾ ಅಪರಾದ. ಈ ವಿವಾದವೇ ಜಾದವ್ ಕುರ್ಚಿಗೆ ಕಂಠಕ ತಂದಿದೆ.

► Follow us on –  Facebook / Twitter  / Google+

Sri Raghav

Admin