ಅರಸು ಜಯಂತಿಯಲ್ಲಿ ಸಾಗುವಳಿ ಚೀಟಿ : ದತ್ತ

ysv-datta

ಕಡೂರು, ಆ.17- ಕಡೂರು ವಿಧಾನ ಸಭಾ ಕ್ಷೇತ್ರದಲ್ಲಿ ಕಳೆದ 25 ವರ್ಷಗಳಿಂದ ಯಾರೊಬ್ಬರಿಗೂ ಒಂದು ಸಾಗುವಳಿ ಚೀಟಿ ನೀಡಿಲ್ಲ, ನಾನು ಶಾಸಕನಾಗಿ ಕೇವಲ ಮೂರು ವರ್ಷದಲ್ಲಿ ಅನೇಕ ಭಾರಿ ಹೋರಾಟ ಮಾಡಿ ಇದೇ 20 ರಂದು ನಡೆಯಲಿರುವ ದೇವರಾಜು ಆರಸು ಜಯಂತಿಯಲ್ಲಿ ಸಾಗುವಳಿ ಚೀಟಿ ವಿತರಣೆ ಮಾಡಲಾಗುವುದು ಎಂದು ಶಾಸಕ ವೈ.ಎಸ್.ವಿ ದತ್ತ ತಿಳಿಸಿದರು. ಸ್ವಾತಂತ್ರ್ಯದ ನಡಿಗೆ ರೈತರ ನೀರಿನ ಹಕ್ಕಿನ ಕಡೆಗೆ ಎಂಬ ಸಂದೇಶದೊಂದಿಗೆ ತಾಲೂಕಿನ 9 ನೇ ಮೈಲಿಕಲ್ಲಿನಿಂದ ಪಾದಯಾತ್ರೆ ಆರಂಭಿಸಿ 14 ಕಿ.ಮೀ. ಪಾದಯಾತ್ರೆಯನ್ನು ಕೆ.ಬಿದರೆ ಗ್ರಾಮದಲ್ಲಿ ಅಂತ್ಯಗೊಳಿಸಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು.
ಭದ್ರಾ ಮೇಲ್ದಂಡೆ ಯೋಜನೆಯಿಂದ ಕಡೂರು ತಾಲೂಕಿನ 32 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಯಶಸ್ಸಿನಿಂದ ಈ ಸಮಾವೇಶ ಹಮ್ಮಿಕೊಳ್ಳಲಾಗಿದ್ದು ಈ ಯೋಜನೆಯ ರೂವಾರಿ ದತ್ತ ಎಂಬ ಸತ್ಯ ಅರಿತಿರುವವರಿಗೆ ಮಾತ್ರ ಗೊತ್ತು ಎಂದರು.ಯೋಜನೆ ತರಲು ಅಕ್ಕ ಪಕ್ಕದ ತಾಲೂಕಿನ ಶಾಸಕರ ಶ್ರಮ ಇದೆ ಎಂಬ ಸುಳ್ಳು ಸುದ್ದಿ ಹಬ್ಬಿಸಿ ಪುಕ್ಕಟೆ ಪ್ರಚಾರ ಪಡೆಯುವವರು ಇಂದು ನಾವು ಇಲ್ಲಿ ಹಾಕಿರುವ ದಾಖಲೆಗಳನ್ನು ನೋಡಿ ದತ್ತನೋ ಅಥವಾ ಬೇರೆಯವರೊ ಎಂದು ಹೇಳಲಿ ಎಂದು ಸವಾಲು ಹಾಕಿದರು.
ನಾನು ತಂದಿರುವ ಯೋಜನೆಗಳ ಬಗ್ಗೆ ಸಮಗ್ರ ದಾಖಲೆಗಳನ್ನು ಪತ್ರಕರ್ತರಿಗೆ ನೀಡಿದ್ದೇನೆ. ಇಲ್ಲಿ ಯಾರೇ ತಂದರು ಪುರಾವೆಗಳು ಮುಖ್ಯ, ಅದರಂತೆ ಬೇರೆಯವರು ಪುರಾವೆಗಳ ಸಮೇತ ತಾಕತ್ತು ಇದ್ದರೆ ಬರಲಿ ಎಂದು ಗುಡುಗಿದರು.
ಹೆಬ್ಬೆ ನೀರು ತರುವುದಾಗಿ 1994 ರಿಂದ ಸುಳ್ಳು ಹೇಳಿಕೊಂಡು ಜನರನ್ನು ನಂಬಿಸಿ ರಾಜಕಾರಣ ಮಾಡಿಕೊಂಡು ಬಂದವನು ನಾನಲ್ಲ,ಹೆಬ್ಬೆ ಬಂತು ಬಂತು ಎಂದು ಚುನಾವಣೆಗಳನ್ನು ಗೆದ್ದವರು ಇದ್ದಾರೆ. ಆದರೆ ನಾನು ಹೆಬ್ಬೆ ವಿಷಯದಲ್ಲಿ ಸ್ಪಷ್ಟವಾಗಿ ಹೇಳಿದ್ದೇನೆ ತಾಂತ್ರಿಕಕಾರಣಗಳಿಂದ ಹೆಬ್ಬೆ ಅಸಾಧ್ಯ ಎಂದು.
ಆದರೂ ಹೆಬ್ಬೆ ಯೋಜನೆಯ 1,538 ಟಿಎಂಸಿ ನೀರಿನ ಹಕ್ಕನ್ನು ತಂದವನು ಈ ದತ್ತ ಬೇಕಾದರೆ ದಾಖಲೆ ತರಲಿ. ಈ ವಿಷಯದಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಸದಾನಂದಗೌಡ ಹಾಗೂ ಮಾಜಿ ಸಚಿವ ಬಸವರಾಜ ಬೊಮ್ಮಾಯಿಯನ್ನು ಅಭಿನಂದಿಸುತ್ತೇನೆ ಎಂದರು. ಯೋಜನೆಯ ಬಗ್ಗೆ ಯರದಕೆರೆ ರಾಜಪ್ಪ, ಬಿಸಲೆರೆ ದೇವರಾಜು, ಪತ್ರಕರ್ತ ಪರಮೇಶ್, ರವಿಪ್ರಕಾಶ್, ಕೋಡಿಹಳ್ಳಿ ಮಹೇಶ್ವರಪ್ಪ, ಶಿಕ್ಷಕ ಲಕ್ಕಪ್ಪ ಮತ್ತಿತರರು ಮಾತನಾಡಿದರು. ಕೆ.ಬಿದರೆ ದೊಡ್ಡ ಮಠದ ಶ್ರೀಗಳು ಸಾನಿಧ್ಯ ವಹಿಸಿದ್ದರು. ಕಾರ್ಯಕ್ರಮದಲ್ಲಿ ತರೀಕೆರೆ ನೀರಾವರಿ ಹೋರಾಟಗಾರ ರಾಜಕುಮಾರ್ ಅವರನ್ನು ಸನ್ಮಾನಿಸಲಾಯಿತು. ಜಿ.ಪಂ.ಸದಸ್ಯೆ ಕಾವೇರಿ ಲಕ್ಕಪ್ಪ, ಪಂಚನಹಳ್ಳಿ ಪಾಪಣ್ಣ, ಬಿದರೆ ಜಗದೀಶ್ ಸಮಾರಂಭದಲ್ಲಿ ಇದ್ದರು. 32 ಗ್ರಾಮಗಳಿಂದ ಬಂದಿದ್ದ ರೈತ ಮುಖಂಡರು ಬಕೇಟ್‍ಗಳಿಗೆ ನೀರು ಹಾಕುವ ಮೂಲಕ ಸಮಾರಂಭಕ್ಕೆ ಚಾಲನೆ ನೀಡಿದರು.

 

► Follow us on –  Facebook / Twitter  / Google+

Sri Raghav

Admin