ಅರುಣಾಚಲ ಪ್ರದೇಶದಲ್ಲಿ ಭಾರೀ ಭೂಕಂಪ
ಇಟಾನಗರ, ಜ.4-ಈಶಾನ್ಯ ಭಾರತದ ಸಪ್ತ ಸಹೋದರಿ ರಾಜ್ಯಗಳಲ್ಲಿ ಒಂದಾದ ಅರುಣಾಚಲ ಪ್ರದೇಶದಲ್ಲಿ ಇಂದು ಬೆಳಗಿನ ಜಾವ 1.20ರಲ್ಲಿ ಸಾಧಾರಣ ತೀವ್ರತೆಯ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 4.3ರಷ್ಟು ಲಘು ತೀವ್ರತೆ ಇದ್ದ ಭೂಕಂಪದ ಕೇಂದ್ರ ಬಿಂದು ಅರುಣಾಚಲ ಪ್ರದೇಶದ ಕುರುಂಗ್ ಕುಮೈ ಜಿಲ್ಲೆಯಲ್ಲಿತ್ತು ಎಂದು ರಾಷ್ಟ್ರೀಯ ಭೂಕಂಪ ಅಧ್ಯಯನ ಕೇಂದ್ರ ತಿಳಿಸಿದೆ. ಭೂಕಂಪದಿಂದ ಸಾವು-ನೋವು ಅಥವಾ ಆಸ್ತಿ-ಪಾಸ್ತಿ ನಷ್ಟದ ಬಗ್ಗೆ ವರದಿಗಳಿಲ್ಲ. ಭಾರತ-ಮ್ಯಾನ್ಮರ್ ಮತ್ತು ಭಾರತ-ಬಾಂಗ್ಲಾದೇಶದ ಗಡಿ ಪ್ರದೇಶಗಳಲ್ಲೂ ಇಂದು ಮುಂಜಾನೆ 12.20ರಲ್ಲಿ ಇನ್ನೊಂದು ಭೂಕಂಪದ ವರದಿಯಾಗಿದೆ. ಅಸ್ಸಾಂ, ತ್ರಿಪುರ ಮತ್ತು ಈಶಾನ್ಯ ಪ್ರಾಂತ್ಯದ ಕೆಲವೆಡೆ ಭೂಮಿ ಕಂಪಿಸಿದ ವರದಿಗಳಿವೆ. ನಿನ್ನೆ ಮಣಿಪುರದಲ್ಲಿ ಸಂಭವಿಸಿದ್ದ ಭುಕಂಪದಲ್ಲಿ ಒಬ್ಬರು ಸಾವನ್ನಪ್ಪಿದ್ದರು.