ಅವ್ಯವಹಾರ ಆರೋಪದ ಹಿನ್ನೆಲೆಯಲ್ಲಿ 11 ಅಧಿಕಾರಿಗಳ ಅಮಾನತು
ಬೆಂಗಳೂರು, ಡಿ.21- ರಾಯಚೂರು ಜಿಲ್ಲೆಯಲ್ಲಿ 2012-13 ರಿಂದ 2015-16ನೇ ಸಾಲಿನವರೆಗೆ ಕರ್ನಾಟಕ ರಾಜ್ಯ ಮೂಲ ಸೌಕರ್ಯ ಅಭಿವೃದ್ಧಿ ಸಂಸ್ಥೆ ವತಿಯಿಂದ ಕೈಗೆತ್ತಿಕೊಳ್ಳಲಾಗಿದ್ದ ಕಾಮಗಾರಿಗಳಲ್ಲಿ ಅವ್ಯವಹಾರ ನಡೆಸಿದ ಆರೋಪದ ಹಿನ್ನೆಲೆಯಲ್ಲಿ 11 ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಕೆಆರ್ಐಡಿಎಲ್ ಸಂಸ್ಥೆಯ ನಾಲ್ಕು ಜನ ಕಾರ್ಯಪಾಲಕ ಅಭಿಯಂತರರು, 3 ಜನ ಸಹಾಯಕ ಕಾರ್ಯಪಾಲಕ ಅಭಿಯಂತರರು, ಇಬ್ಬರು ಸಹಾಯಕ ಅಭಿಯಂತರರು, ಇಬ್ಬರು ಕಿರಿಯ ಅಭಿಯಂತರರು ಸೇರಿದಂತೆ ಒಟ್ಟು 11 ಜನರನ್ನು ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ.ಪಾಟೀಲ್ ಅವರ ಶಿಫಾರಸಿನಂತೆ ಅಮಾನತು ಮಾಡಲಾಗಿದೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆ ಸಚಿವರಿಗೆ ಸಲ್ಲಿಸಲಾದ ದೂರಿನ ಆಧಾರದ ಮೇಲೆ ತನಿಖೆಗೆ ಆದೇಶಿಸಲಾಗಿತ್ತು. ಈ ವಿಚಾರಣೆ ವರದಿಯ ಆಧಾರದ ಮೇಲೆ 2012-13ನೇ ಸಾಲಿನಿಂದ 2015-16ನೇ ಸಾಲಿನವರೆಗೆ ನಿರ್ವಹಿಸಿರುವ ಕೆಲಸಗಳಲ್ಲಿ ಇವರುಗಳು ನಡೆದಿರುವ ಈ ಅಕ್ರಮಗಳಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ 24 ವಿವಿಧ ಹಂತದ ಅಧಿಕಾರಿಗಳನ್ನು ಗುರುತಿಸಲಾಗಿತ್ತು. ಒಟ್ಟು 4881 ಕೋಟಿ ರೂಪಾಯಿಗಳ ಹಣ ದುರ್ಬಳಕೆ ಮತ್ತು ಅವ್ಯವಹಾರ ಮೇಲು ನೋಟಕ್ಕೆ ಸಾಬೀತಾಗಿರುವುದರಿಂದ ಈ ಅಧಿಕಾರಿಗಳನ್ನು ಅಮಾನತ್ತುಗೊಳಿಸಿ ಕ್ರಮ ಕೈಗೊಳ್ಳಲಾಗಿದೆ.
ಕೇಂದ್ರ ಕಚೇರಿಯ ಲೆಕ್ಕಪತ್ರ ಶಾಖೆಯ ಖಾತ್ರಿ ಮಾಡಿದ 48.81 ಕೋಟಿಗಳ ಅವ್ಯವಹಾರಗಳ ಸಂಬಂಧ ಒಟ್ಟಾರೆಯಾಗಿ ರಾಯಚೂರು ಜಿಲ್ಲೆಯಲ್ಲಿ 2012-13ನೇ ಸಾಲಿನಿಂದ 2015-16ನೇ ಸಾಲಿನವರೆಗೆ ಕೆಲಸ ನಿರ್ವಹಿಸಿ, ಈ ಅಕ್ರಮಗಳಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ 24 ವಿವಿಧ ಹಂತದ ಅಧಿಕಾರಿಗಳನ್ನು ಗುರುತಿಸಲಾಗಿರುವ ಹಿನ್ನೆಲೆಯಲ್ಲಿ ಈ ಕೆಳಕಂಡ ಕ್ರಮಗಳನ್ನು ಕೈಗೊಳ್ಳಲಾಗುವುದು. ನಿಗಮಕ್ಕೆ ಬರಬೇಕಾಗಿರುವ ರೂ.48.81 ಕೋಟಿ ರೂಪಾಯಿಗಳನ್ನು ಈ ಪ್ರಕರಣದಲ್ಲಿ ಆಪಾದಿತರೆನ್ನಲಾದ 24 ಅಧಿಕಾರಿಗಳಿಂದಲೂ ಅವರುಗಳ ಸಂಬಳ ಮತ್ತು ನಿವೃತ್ತಿ ಸೌಲಭ್ಯಗಳಿಂದ ವಸೂಲಿ ಮಾಡು ಕ್ರಮವನ್ನು ಕೈಗೊಳ್ಳಲಾಗುವುದು.
ಈ ಪ್ರಕರಣದಲ್ಲಿ ರೂ. 48.81 ಕೋಟಿ ಹಣ ದುರ್ಬಳಕೆಯಾಗಿದ್ದು ನಿಯಮಾವಳಿಗಳನ್ನು ಗಾಳಿಗೆ ತೂರಿ, ಇಲಾಖಾ ಕೆಲಸಗಳನ್ನು ನಿರ್ವಹಿಸದೇ ಅಪೂರ್ಣಗೊಳಿಸಿ ಅವ್ಯವಹಾರ, ಅಕ್ರಮ ನಡೆಸಿರುವ ಹಿನ್ನೆಲೆಯಲ್ಲಿ ಒಟ್ಟು 17 ಅಧಿಕಾರಿಗಳ ವಿರುದ್ದ ಜಂಟಿ ವಿಚಾರಣೆ ನಡೆಸಲು ನಿವೃತ್ತ ಜಿಲ್ಲಾ ನ್ಯಾಯಾಧೀಶರಿಂದ ತನಿಖೆ ಕೈಗೊಳ್ಳಲಾಗುವುದು.