ಅಸ್ಸಾಂ, ಮಣಿಪುರದಲ್ಲಿ ಸರಣಿ ಬಾಂಬ್ ಸ್ಫೋಟ, ಗಣರಾಜ್ಯೋತ್ಸವ ಸಂಭ್ರಮದಲ್ಲಿದ್ದವರಿಗೆ ಶಾಕ್

Spread the love

Blast-01

ಗುವಾಹತಿ, ಜ.26- ಈಶಾನ್ಯ ಭಾರತದ ಸಪ್ತ ಸಹೋದರಿ ರಾಜ್ಯಗಳಲ್ಲಿ ಭಾರೀ ಬಿಗಿ ಬಂದೋಬಸ್ತ್ ನಡುವೆ 68ನೇ ಗಣರಾಜ್ಯೋತ್ಸವ ದಿನವನ್ನು ಆಚರಿಸುತ್ತಿರುವ ಸಂದರ್ಭದಲ್ಲೇ ಸರಣಿ ಬಾಂಬ್ ಸ್ಪೋಟಗಳಿಂದ ಅಸ್ಸಾಂ ಮತ್ತು ಮಣಿಪುರ ಬೆಚ್ಚಿದೆ. ಅದೃಷ್ಟವಶಾತ್ 10ಕ್ಕೂ ಹೆಚ್ಚು ಸ್ಪೋಟಗಳಲ್ಲಿ ಯಾವುದೇ ಸಾವು ನೋವು ಅಥವಾ ಆಸ್ತಿ-ಪಾಸ್ತಿಗೆ ನಷ್ಟ ಸಂಭವಿಸಿಲ್ಲ.
ಅಪ್ಪರ್ ಅಸ್ಸಾಂನ ಚಾರೈಡೋವ್, ಸಿಬ್‍ಸಾಗರ್, ದಿಬ್ರುಗಢ ಮತ್ತು ತೀನ್‍ಸುಕಿಯಾ ಜಿಲ್ಲೆಗಳಲ್ಲಿ ಉಲ್ಫಾ ಉಗ್ರರು ಐದಕ್ಕೂ ಹೆಚ್ಚು ಬಾಂಬ್‍ಗಳನ್ನು ಆಸ್ಫೋಟಿಸಿ ಜನರನ್ನು ಭಯಭೀತಗೊಳಿಸಿದ್ದಾರೆ.

ಉಗ್ರರು ಸ್ಪೋಟಿಸಿದ ಸುಧಾರಿತ ಸ್ಫೋಟಕ ಸಾಧನಗಳು (ಐಇಡಿ) ಕಡಿಮೆ ತೀವ್ರತೆಯದ್ದಾಗಿದ್ದು, ಸಾವು-ನೋವು ಸಂಭವಿಸಿಲ್ಲ ಅಥವಾ ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿಯಾಗಿಲ್ಲ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.  ದಿಬ್ರು ಪಟ್ಟಣದ ಚೌಕಿಡಿಂಗಿ ಪರೇಡ್ ಮೈದಾನದಲ್ಲಿ ರಾಷ್ಟ್ರಧ್ವಜ ಅನಾವರಣಗೊಂಡ 500 ಮೀಟರ್‍ಗಳ ದೂರದಲ್ಲಿ ಬಾಂಬ್ ಸ್ಫೋಟ ಸಂಭವಿಸಿದೆ. ಈ ಸ್ಥಳದಲ್ಲಿ ಭಾರೀ ಬಂದೋಬಸ್ತ್ ಇದ್ದ ಕಾರಣ ಉಗ್ರರು ಚಹಾ ತೋಟದ ಚರಂಡಿ ಬಳಿ ಬಾಂಬ್ ಸ್ಪೋಟಿಸಿ ಪರಾರಿಯಾಗಿದ್ದಾರೆ.

ಚಾರೈಡೋವ್ ಜಿಲ್ಲೆ ಧೋಲ್‍ಬಗಾನ್ ಮತ್ತು ಬಿಹು ಬೊರ್‍ನಲ್ಲಿ ಪೆಟ್ರೋಲ್ ಬಂಕ್ ಬಳಿ ಬಾಂಬ್ ಸ್ಪೋಟಗೊಂಡಿದೆ. ಪಕ್ಕದ ಸಿಬ್‍ಸಾಗರ್ ಜಿಲ್ಲೆಯ ಲೆಂಗಿಬೊರ್ ಮತ್ತು ಮಜ್‍ಪಾನಿಯಲ್ಲಿ ಎರಡು ಐಇಡಿಗಳನ್ನು ಉಗ್ರರು ಸ್ಫೋಟಿಸಿದ್ದಾರೆ.  ತಿನ್‍ಸುಕಿಯಾ ಜಿಲ್ಲೆಯ ಸಿಸಿಮಿ ಗ್ರಾಮದ ಖಾಲಿ ವಾಟರ್ ಟ್ಯಾಂಕ್ ಒಳಗೆ ಬಾಂಬೊಂದು ಆಸ್ಫೋಟಗೊಂಡಿದೆ. ಸುಕನ್ ಫುಖುರಿ ಪ್ರದೇಶದ ಧೋಲಾ ಸೇತುವೆ ಸಮೀಪ ಇನ್ನೊಂದು ಬಾಂಬ್‍ನನ್ನು ಬಂಡುಕೋರರು ಆಸ್ಫೋಟಿಸಿದ್ದಾರೆ.  ಗಣ ರಾಜ್ಯೋತ್ಸವ ದಿನದಂದು ಉಗ್ರರಿಂದ ದಾಳಿ ನಡೆಯುವುದನ್ನು ತಪ್ಪಿಸಲು ರಾಜ್ಯದಾದ್ಯಂತ ಭಾರೀ ಬಂದೋಬಸ್ತ್ ಮಾಡಲಾಗಿದೆ.

ಭಯೋತ್ಪಾದಕರು ಮತ್ತು ಬಂಡುಕೋರರ ವಿರುದ್ದ ರಾಜ್ಯ ಸರ್ಕಾರವು ಸಮರ ಮುಂದುವರಿಸಲಿದೆ ಎಂದು ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲ್ ಹೇಳಿದ್ದಾರೆ.

ಮಣಿಪುರ ವರದಿ :
ರಾಜಧಾನಿ ಇಂಫಾಲದ ಪೂರ್ವ ಮತ್ತು ಪಶ್ಚಿಮ ಜಿಲ್ಲೆಗಳಲ್ಲಿ ಉಗ್ರಗಾಮಿಗಳು ಏಕ ಕಾಲದಲ್ಲಿ ಎರಡು ಪ್ರಬಲ ಬಾಂಬ್‍ಗಳನ್ನು ಸ್ಫೋಟಿಸಿದ್ದು, ಸಾವು ನೋವಿನ ವರದಿಗಳಿಲ್ಲ.
ಈ ಘಟನೆಗಳ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin