ಅಹೋರಾತ್ರಿ ‘ಕಪ್ಪತ್ತಗುಡ್ಡ’ಹೋರಾಟಕ್ಕೆ ಒಂದು ಹಂತದ ಜಯ

Spread the love

 

11

ಗದಗ,ಫೆ.16- ಅಂತೂ ಇಂತು ಉತ್ತರ ಕರ್ನಾಟಕ ಭಾಗದ ಸಸ್ಯಕಾಶಿಗೆ ಬಂದಿದ್ದ ಕುತ್ತು ಒಂದು ಹಂತದಲ್ಲಿ ನಿವಾರಣೆಯಾಗಿದೆ. ಮಠಾಧೀಶರ, ಪರಿಸರವಾದಿಗಳ, ಪ್ರಗತಿಪರ ಚಿಂತಕರು ಸೇರಿದಂತೆ ಸಂಘ, ಸಂಸ್ಥೆಗಳು ನಡೆಸಿದ್ದ ಹೋರಾಟಕ್ಕೆ ಮೊದಲ ಹಂತದ ಜಯ ಸಿಕ್ಕಿದೆ. ಉತ್ತರ ಕರ್ನಾಟಕದ ಪಶ್ಚಿಮ ಘಟ್ಟವೆಂದೇ ಖ್ಯಾತಿಯಾದ ಕಪ್ಪತ್ತಗುಡ್ಡಕ್ಕೆ ಬಂದಿದ್ದ ಸಂಕಟ ದೂರವಾಗುವ ಕಾಲ ಸನ್ನಿಹಿತವಾಗಿದೆ. ಜಿಲ್ಲೆಯ ಜನತೆ ಮೂರು ದಿನಗಳ ಕಾಲ ಹಮ್ಮಿಕೊಂಡಿದ್ದ ಅಹೋರಾತ್ರಿ ಹೋರಾಟಕ್ಕೆ ರಾಜ್ಯ ವನ್ಯಜೀವಿ ಮಂಡಳಿ ಹಸಿರು ನಿಶಾನೆ ತೋರಿದೆ. ಹೌದು, ಕಳೆದ ಮೂವತ್ತು ವರ್ಷಗಳಿಂದ ಅನೇಕ ಪರಿಸರ ಪ್ರೇಮಿಗಳು, ಹೋರಾಟಗಾರರು ಹಾಗೂ ಸ್ವಾಮೀಜಿಗಳು ಹೋರಾಟ ನಡೆಸಿದ್ದರ ಫಲವಾಗಿ ಸರಕಾರ ಕಳೆದ ಡಿಸೆಂಬರ್‍ನಲ್ಲಿ ಕಪ್ಪತ್ತಗುಡ್ಡ ಮೀಸಲು ಸಂರಕ್ಷಿತ ಅರಣ್ಯ ಪ್ರದೇಶ ಎಂದು ಘೋಷಿಸಿತ್ತು. ಆಗ ಇಡೀ ಉತ್ತರ ಕರ್ನಾಟಕ ನಮ್ಮ ಹಸಿರಿನ ನಾಡು ನಮ್ಮಲ್ಲೇ ಉಳಿಯಿತೆಂದು ನಿಟ್ಟುಸಿರು ಬಿಡುವ ಮೂಲಕ ಹಸಿರಿನ ನಾಡಿನಿಂದ ಸಮಾಜ ಕಲ್ಯಾಣವಾಯಿತೆಂಬ ಕನಸು ನನಸಾಯಿತು.

ಆದರೆ, ಆ ಕನಸನ್ನು ಸರಕಾರ ಒಂದೇ ವರ್ಷದಲ್ಲಿ ಭಗ್ನಗೊಳಿಸಿತ್ತು. ತಮ್ಮ ಉಸಿರನ್ನೇ ಸರಕಾರ ಕಸಿದುಕೊಂಡಿತಲ್ಲ ಎಂದು ಆ ಭಾಗದ ಜನತೆ ಸೋತುಹೋಗಿದ್ದರು. ಆದರೂ ಅವರ ದಿಟ್ಟ ಹೋರಾಟತನಕ್ಕೆ ಯಾವುದೇ ಅಡ್ಡಿಯಿರಲಿಲ್ಲ. ಕಪ್ಪತ್ತಗುಡ್ಡವನ್ನು ಉಳಿಸಿಕೊಳ್ಳಲೇಬೇಕೆಂಬ ಹಂಬಲ ಬಿಡದೇ ಕಾಡಿತು. ಪರಿಣಾಮ ಆದೇಶ ಹಿಂಪಡೆದ ದಿನದಿಂದ ಶುರುವಾದ ಹೋರಾಟ ಮೂರು ದಿನಗಳ ಅಹೋರಾತ್ರಿ ಹೋರಾಟಕ್ಕೆ ತಂದು ನಿಲ್ಲಿಸಿತು. ನಗರದ ಗಾಂಧೀ ವೃತ್ತದಲ್ಲಿ ಸಾಮಾಜಿಕ ಹೋರಾಟಗಾರ ಎಸ್.ಆರ್. ಹಿರೇಮಠ, ಇನ್ನೋರ್ವ ಹೋರಾಟಗಾರ ರವಿಕೃಷ್ಣಾರೆಡ್ಡಿ ನೇತೃತ್ವದ ಈ ಹೋರಾಟಕ್ಕೆ ಕೇಂದ್ರಬಿಂದುವಾಗಿದ್ದು ತೋಂಟದ ಸಿದ್ಧಲಿಂಗ ಸ್ವಾಮೀಜಿ.

ಈ ಮೂರು ದಿನಗಳ ಕಾಲ ಉಪವಾಸವಿದ್ದ ಪ್ರತಿಭಟನಾನಿರತರಿಗೆ ಇದೀಗ ಅಮೃತ ಸಿಕ್ಕಷ್ಟೇ ಭಾಸವಾಗಿದೆ. ಕೊನೆಗೂ ಜಿಲ್ಲೆ ಮಾತ್ರವಲ್ಲದೇ ರಾಜ್ಯಮಟ್ಟದ ಎಲ್ಲಾ ಹೋರಾಟಗಾರರಿಗೆ ಕಪ್ಪತ್ತಗುಡ್ಡದ ಹೋರಾಟಕ್ಕೆ ಒಂದು ಹಂತದಲ್ಲಿ ಜಯ ದೊರೆತಂತಾಗಿದೆ. ಆದರೆ ಏನೇ ಇರಲಿ, ಗಣಿ ಕಂಪನಿಗಳ ಆಸೆಗೆ ಕಿಮ್ಮತ್ತು ನೀಡದೇ ಸರಕಾರ ಒಂದು ಹಂತದಲ್ಲಿ ತನ್ನ ನಿಲುವನ್ನು ಬದಲಿಸಿದ್ದು ಉತ್ತರ ಕರ್ನಾಟಕದ ಜನತೆಯ ಹಾಗೂ ಪರಿಸರವಾದಿಗಳ ತಕ್ಕಮಟ್ಟಿನ ತೃಪ್ತಿಯನ್ನು ತಂದಿದೆ. ಮೊದಲ ಹಂತದಲ್ಲಿ ವನ್ಯಜೀವಿ ಮಂಡಳಿ ತೋರಿರುವ ಹಸಿರು ನಿಶಾನೆಯಂತೆ ಈ ಹೋರಾಟಕ್ಕೆ ಜಯ ದೊರೆತು ಕಪ್ಪತ್ತಗುಡ್ಡ ಸಂರಕ್ಷಿತ ಪ್ರದೇಶವಾಗಲಿ ಎಂಬುದೇ ಎಲ್ಲರ ಆಶಯ.

                                                                                                                                                                     -ದಾನೇಶ ಗುಜಮಾಗಡಿ

ಶ್ರೀಗಳು ಕಪ್ಪತ್ತಗುಡ್ಡ ಕುರಿತು ಸಕಾರಾತ್ಮಕ ಭವಿಷ್ಯ ನುಡಿದಂತೆ ಸರಕಾರ ನಡೆದುಕೊಂಡಿದೆ. ಶ್ರೀಗಳು ಮಂಗಳವಾರ ಪತ್ರಿಕೆಗೆ ನೀಡಿದ ಹೇಳಿಕೆಯಲ್ಲಿ ಕಪ್ಪತ್ತಗುಡ್ಡ ಕುರಿತು ಸಕಾರಾತ್ಮಕ ಭವಿಷ್ಯ ನುಡಿದಿದ್ದರು. ನಿನ್ನೆ ಸರ್ಕಾರದ ಪ್ರತಿನಿಧಿಗಳೇ ದೂರವಾಣಿ ಮೂಲಕ ಸಂಪರ್ಕ ಮಾಡಿ, ಕಪ್ಪತ್ತಗುಡ್ಡ ಸಂರಕ್ಷಿತ ಅರಣ್ಯಪ್ರದೇಶವಾಗಲಿರುವ ಕುರಿತು ಭರವಸೆ ನೀಡಿದ್ದಾರೆ.

ಭರವಸೆಯ ಪ್ರಮುಖ ಅಂಶಗಳು :

ಹಸಿರು ನಿಶಾನೆ ತೋರಿದ ವನ್ಯಜೀವಿ ಮಂಡಳಿಯಿಂದ ಸರ್ಕಾರಕ್ಕೆ ಶಿಫಾರಸ್ಸು. ತೋಂಟದಾರ್ಯ ಶ್ರೀಗಳ ಜೊತೆ ದೂರವಾಣಿ ಸಂಭಾಷಣೆ ಮಾಡಿದ ಹೆಚ್ಕೆ. ಇದೇ 20ರಂದು ವನ್ಯಜೀವಿ ಮಂಡಳಿಯ ವಿಶೇಷ ಸಭೈ. ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ್ ದೂರವಾಣಿ ಮೂಲಕ ಶ್ರೀಗಳಗೆ ಭರವಸೆ. ಭರವಸೆ ಹಿನ್ನಲೆಯಲ್ಲಿ ಹೋರಾಟ ಅಂತ್ಯ. ಉಪವಾಸನಿರತ 20 ಹೋರಾಟಗಾರರಿಗೆ ತೋಂಟದಾರ್ಯ ಮಠದ ಸಿದ್ಧಲಿಂಗ ಶ್ರೀಗಳು ಎಳೆ ನೀರು ಕುಡಿಸುವ ಮೂಲಕ ಉಪವಾಸ ಅಂತ್ಯ. ಸಂಭಾಷಣೆಯ ಆಡಿಯೋವನ್ನು ಧ್ವನಿವರ್ಧಕದ ಮೂಲಕ ಆಲಿಸಿದ ಸಾರ್ವಜನಿಕರು
ಸರಕಾರ ಕಪ್ಪತ್ತಗುಡ್ಡದ ಆದೇಶ ಹಿಂಪಡೆದು ಹಸಿರು ಸಸ್ಯಕಾಶಿಯನ್ನು ಬಗೆಯಲು ಸಿದ್ಧವಾಗಿತ್ತು. ಆದರೆ ಜಿಲ್ಲೆಯ ಹಠ ಬಿಡದ ಜನತೆಯ ನಿರ್ಧಾರ ಕಪ್ಪತ್ತಗುಡ್ಡದ ಸಿರಿಮುಡಿಗೆ ಕಳಶ ಇಟ್ಟಿದೆ. ಮೊದಲೇ ಬರಗಾಲದಿಂದ ತತ್ತರಿಸಿ ಹೋಗಿರುವ ಉತ್ತರ ಕರ್ನಾಟಕದ ಜಿಲ್ಲೆಗಳು ಮಳೆರಾಯನನ್ನು ಕಾಣದೇ ಬರಗುಟ್ಟುತ್ತಿವೆ. ಅಂತಹದರಲ್ಲಿ ಇದ್ದ ಅರಣ್ಯವನ್ನು ಉಳಿಸಿಕೊಳ್ಳದೇ ಹಾಳು ಮಾಡುತ್ತಾ ಹೊರಟರೆ ಮುಂದಿನ ಜನಾಂಗದ ಭವಿಷ್ಯವೇನು ಎನ್ನುವ ಚಿಂತೆಯಲ್ಲಿ ಜಿಲ್ಲೆಯ ಜನ ಕುಳಿತಿದ್ದರು. ಆದರೆ, ಆ ಚಿಂತೆಗೆ ಈ ಕಪ್ಪತ್ತಗುಡ್ಡದ ರಕ್ಷಣೆಗೆ ವನ್ಯಜೀವಿ ಮಂಡಳಿ ತೋರಿದ ಹಸಿರು ನಿಶಾನೆ ತುಸು ಆಶಾಭಾವನೆ ಮೂಡಿಸಿದೆ. ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಕೆ. ಪಾಟೀಲ್ ತೋಂಟದಾರ್ಯ ಶ್ರೀಗಳೊಂದಿಗೆ ದೂರವಾಣಿಯೊಂದಿಗೆ ಮಾತನಾಡಿ ಇದೇ 20ರಂದು ವನ್ಯಜೀವಿ ಮಂಡಳಿ ಸಭೈ ಕರೆಯುವ ಬಗ್ಗೆಯೂ ಭರವಸೆ ನೀಡಿದ್ದೂ ನಾವು ಕಪ್ಪತ್ತಗುಡ್ಡದ ಪರವಾಗಿದ್ದೇವೆ ಎಂದರು.
-ತೋಂಟದ ಸಿದ್ಧಲಿಂಗ ಶ್ರೀಗಳು.

 

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin