ಆಂಜನೇಯ ವಿರುದ್ಧ ಪರಮೇಶ್ವರ್‍ಗೆ ದೂರು ನೀಡಿದ ಶಾಸಕರು

parmeshwar--anjanayya

ಬೆಳಗಾವಿ, ನ.25-ಸಾಕಷ್ಟು ಅನುದಾನವಿದ್ದರೂ ಅದರ ಸದ್ಬಳಕೆಗೆ ಸರಿಯಾದ ಯೋಜನೆ ರೂಪಿಸಿಲ್ಲ ಎಂದು ಆರೋಪಿಸಿ ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರಿಗೆ ಪರಿಶಿಷ್ಟ ಜಾತಿ, ಪಂಗಡದ ಶಾಸಕರು ದೂರು ನೀಡಿದ್ದಾರೆ.  ಸಮಾಜ ಕಲ್ಯಾಣ ಇಲಾಖೆಯಲ್ಲಿ ಅನುದಾನ ಸಾಕಷ್ಟು ಲಭ್ಯವಿದ್ದರೂ ಸೂಕ್ತ ಯೋಜನೆ ರೂಪಿಸದೆ ಹಣ ಪೋಲಾಗುತ್ತಿದೆ ಎಂದು ಆರೋಪಿಸಿದ್ದಾರೆ.15ಕ್ಕೂ ಹೆಚ್ಚು ಮಂದಿ ಶಾಸಕರು ಪರಮೇಶ್ವರ್ ಅವರನ್ನು ಭೇಟಿ ಮಾಡಿ ದೂರು ನೀಡಿದ್ದು, ಪರಮೇಶ್ವರ್ ಹಾಗೂ ಲೋಕೋಪಯೋಗಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ನೇತೃತ್ವದಲ್ಲಿ ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜೊತೆ ಮಾತುಕತೆ ನಡೆಸಲು ಶಾಸಕರು ತೀರ್ಮಾನಿಸಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿಯನ್ನು ಜಾರಿ ಮಾಡಲು ಮುಂದಾಗಿರುವುದಕ್ಕೂ ಕೂಡ ಶಾಸಕರು ವಿರೋಧ ವ್ಯಕ್ತಪಡಿಸಿದ್ದಾರೆ. ಡಿಸೆಂಬರ್ 8 ರಂದು ಸದಾಶಿವ ಆಯೋಗ ಜಾರಿಗೆ ಆಗ್ರಹಿಸಿ ಮಾದಿಗ ದಂಡೋರ ಸಮಾವೇಶ ನಡೆಸಲು ಮಾದಿಗ ಸಮಾಜ ಈಗಾಗಲೇ ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಶಾಸಕರು ವಿರೋಧ ವ್ಯಕ್ತಪಡಿಸಿದ್ದಾರೆ. ಶಾಸಕರಾದ ಶಿವರಾಜ್ ತಂಗಡಗಿ, ಪಿ.ಎಂ.ನರೇಂದ್ರಸ್ವಾಮಿ ನೇತೃತ್ವದಲ್ಲಿ ಶಾಸಕರು ಪರಮೇಶ್ವರ್ ಅವರನ್ನು ಭೇಟಿ ಮಾಡಿ ದೂರು ನೀಡಿದ್ದಾರೆ ಎನ್ನಲಾಗಿದೆ.

 

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Sri Raghav

Admin