ಆಂಧ್ರ-ಓಡಿಶಾ ಗಡಿ ಭಾಗದಲ್ಲಿ ಮುಂದುವರಿದ ಎನ್ಕೌಂಟರ್ : 3 ಮಾವೋ ಉಗ್ರರು ಬಲಿ
ವಿಶಾಖಪಟ್ಟಣಂ, ಅ.24-ಮಾವೋವಾದಿಗಳ ವಿರುದ್ಧ ಕಾರ್ಯಾಚರಣೆ ಮುಂದುವರಿಸಿರುವ ಆಂಧ್ರಪ್ರದೇಶ ಮತ್ತು ಓಡಿಶಾ ಗ್ರೆಹೌಂಡ್ ಪಡೆಗಳು ಈ ರಾಜ್ಯಗಳ ಗಡಿ ಭಾಗದಲ್ಲಿ ಇಂದು ಮುಂಜಾನೆ ಮತ್ತೆ ಮೂವರು ನಕ್ಸಲರನ್ನು ಗುಂಡಿಟ್ಟು ಕೊಂದಿದ್ದಾರೆ. 24 ಮಾವೋವಾದಿಗಳನ್ನು ಗುಂಡಿನ ಚಕಮಕಿಯಲ್ಲಿ ನಿನ್ನೆ ಮುಂಜಾನೆ ಹತ್ಯೆ ಮಾಡಲಾಗಿತ್ತು. ಆಂಧ್ರಪ್ರದೇಶ ಮತ್ತು ಓಡಿಶಾ ಗಡಿಯ ಮಲ್ಕನ್ಗಿರಿಯ ದಟ್ಟ ಅರಣ್ಯ ಪ್ರದೇಶದಲ್ಲಿ ಇಂದು ಮುಂಜಾನೆ ಕೂಡ ನಡೆದ ಗ್ರೆಹೌಂಡ್ ಜಂಟಿ ಕಾರ್ಯಾಚರಣೆಯಲ್ಲಿ ಇನ್ನೂ ಮೂವರು ಮಾವೋವಾದಿಗಳು ಹತರಾಗಿದ್ದು, ಎಕೆ-45 ರೈಫಲ್ಗಳು, ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದರೊಂದಿಗೆ ನಕ್ಸರ ಸಾವಿನ ಸಂಖ್ಯೆ 27ಕ್ಕೇರಿದೆ.
ಆಂಧ್ರಪ್ರದೇಶ ಮತ್ತು ಓಡಿಶಾ ಗಡಿಯ ಮಲ್ಕನ್ಗಿರಿಯ ಗಾಮಗುರ್ಹಾದಿಂದ 10 ಕಿ.ಮೀ.ದೂರದ ಐಬೋವೊ ದಟ್ಟ ಅರಣ್ಯ ಪ್ರದೇಶದಲ್ಲಿ ಕನಿಷ್ಠ 50-60 ಮಾವೋ ಉಗ್ರರು ಜಮಾವಣೆಗೊಂಡಿದ್ದಾರೆ ಎಂಬ ಬಗ್ಗೆ ಗ್ರೇಹೌಂಡ್ ಫೋರ್ಸ್ ದಾಳಿ ನಡೆಸಿ ಪ್ರಮುಖ ಮುಖಂಡರೂ ಸೇರಿದಂತೆ 18 ಬಂಡುಕೋರನನ್ನು ಕೊಂದಿತ್ತು. ಈ ಅರಣ್ಯ ಪ್ರದೇಶದಲ್ಲಿ ಮತ್ತಷ್ಟು ಮಾವೋವಾದಿ ಉಗ್ರರು ಅಡಗಿರುವ ಶಂಕೆ ಇದ್ದು, ಶೋಧ ಕಾರ್ಯಾಚರಣೆ ತೀವ್ರಗೊಂಡಿದೆ.