ಆಟೋ ಚಾಲಕರ ಬೃಹತ್ ಪ್ರತಿಭಟನಾ ಮೆರವಣಿಗೆ

yalahanka

ಯಲಹಂಕ, ಆ.18- ಚಾಲನ ಪರವಾನಗಿ ಪಡೆಯಲು ವಾಣಿಜ್ಯ ವಾಹನ ಹಾಗೂ ಆಟೋ ಚಾಲಕರಿಗೆ ಕಡ್ಡಾಯ 8ನೆ ತರಗತಿ ಉತ್ತೀರ್ಣ ವಿದ್ಯಾರ್ಹತೆ ನಿಗದಿಪಡಿಸಿರುವುದನ್ನು ರದ್ದುಪಡಿಸುವಂತೆ ಆಗ್ರಹಿಸಿ ದಸಂಸ (ಕೆಂಪು ಸೇನೆ) ಕಾರ್ಯಕರ್ತರು ಹಾಗೂ ಆಟೋ ಚಾಲಕರು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು.ಸಮಿತಿಯ ರಾಜ್ಯಾಧ್ಯಕ್ಷ ಡಿ.ರಾಜಣ್ಣ , ವೀರಭದ್ರೇಗೌಡ ನೇತೃತ್ವದಲ್ಲಿ ಕೋಗಿಲು ಕ್ರಾಸ್‍ನಿಂದ ಆರ್‍ಟಿಒ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.ವಾಣಿಜ್ಯ ವಾಹನ ಹಾಗು ಆಟೋ ಚಾಲಕರು ಚಾಲನಾ ಪರವಾನಗಿ ಪಡೆಯಲು ಕನಿಷ್ಠ 8ನೆ ತರಗತಿ ಉತ್ತೀರ್ಣ ಕಡ್ಡಾಯಗೊಳಿಸಿರುವುದರಿಂದ ಚಾಲಕರಿಗೆ ಬದುಕಲು ದಾರಿ ಇಲ್ಲದಂತಾಗಿದೆ. ಮೊದಲಿನಿಂದಲೂ ಆಟೋಗಳನ್ನೇ ನಂಬಿ ಜೀವನ ಸಾಗಿಸಲಾಗುತ್ತಿದೆ.

 

ಈಗ ವಿದ್ಯಾರ್ಹತೆ ಕಡ್ಡಾಯಗೊಳಿಸಿರುವುದರಿಂದ ಬದುಕು ಬೀದಿಗೆ ಬಿದ್ದಂತಾಗಿದೆ ಎಂದು ಆಟೋ ಚಾಲಕರು ಅಳಲು ತೋಡಿಕೊಂಡರು.ವಯೋಮಿತಿಗೆ ತಕ್ಕಂತೆ ಪರವಾನಗಿ ನೀಡಬೇಕು ಚಾಲನಾ ತರಬೇತಿ ಸಂಸ್ಥೆಯಿಂದ ತರಬೇತಿ ಪಡೆದು ದೃಢೀಕರಣ ಹೊಂದಿದ್ದರೆ ಅಂತಹವರಿಗೆ ಚಾಲನಾ ಪರವಾನಗಿ ವಿತರಿಸಬೇಕು, ಎಸ್‍ಸಿ/ಎಸ್‍ಟಿ ಹಾಗೂ ಹಿಂದುಳಿದ ವರ್ಗಕ್ಕೆ ಸೇರಿದ ಚಾಲಕರಿಗೆ ಉಚಿತ ತರಬೇತಿ ನೀಡಿ ಚಾಲನಾ ಪರವಾನಗಿ ನೀಡಲು ಕ್ರಮಕೈಗೊಳ್ಳಬೇಕು. ಯಲಹಂಕದ ಎಲ್ಲಾ ಆಟೋ ನಿಲ್ದಾಣಗಳಿಗೆ ಸೂಕ್ತ ಸ್ಥಳ ನಿಗದಿಪಡಿಸಿ ಆಟೋ ನಿಲ್ಲಿಸಲು ಅವಕಾಶ ನೀಡಬೇಕು, ಪೊ ಲೀಸರು ಹಾಗೂ ಆರ್‍ಟಿಒಗಳ ಕಿರುಕುಳ ನಿಲ್ಲಬೇಕು, ಆರ್‍ಟಿಒ ಕಚೇರಿಯಲ್ಲಿ ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಕ್ರಮಕೈಗೊಳ್ಳಬೇಕೆಂದು ಡಿ.ರಾಜಣ್ಣ , ವೀರಭದ್ರೇಗೌಡ ಈ ವೇಳೆ ಒತ್ತಾಯಿಸಿದರು.

 

► Follow us on –  Facebook / Twitter  / Google+

Sri Raghav

Admin