ಆಟೋ ಲೈಸೆನ್ಸ್ಗೆ ಆಧಾರ್ ಲಿಂಕ್ ಮಾಡುವುದು ಕಡ್ಡಾಯ
ಬೆಂಗಳೂರು, ಡಿ.2-ಆಟೋ ಪರವಾನಗಿಯಲ್ಲಿ ನಡೆಯುತ್ತಿರುವ ಅಕ್ರಮವನ್ನು ತಡೆಹಿಡಿಯಲು ಸಾರಿಗೆ ಇಲಾಖೆ ಆಟೋ ಲೈಸೆನ್ಸ್ ಗೂ ಆಧಾರ್ ಜೋಡಣೆ ಮಾಡಲು ಮುಂದಾಗಿದೆ.ಕೆಲ ಆಟೋ ಚಾಲಕರು ಹಾಗೂ ಮಾಲೀಕರು ಒಂದೇ ಪರವಾನಗಿಯಲ್ಲಿ ನಾಲ್ಕೈದು ಆಟೋಗಳನ್ನು ಓಡಿಸುತ್ತಿದ್ದು, ಇದರಿಂದ ಪ್ರಾಮಾಣಿಕ ಆಟೋ ಚಾಲಕರಿಗೆ ತೊಂದರೆಯಾಗುತ್ತಿದೆ. ಇದರ ಬಗ್ಗೆ ಹಲವು ಬಾರಿ ಆಟೋ ಸಂಘಟನೆಗಳು ದೂರು ನೀಡಿದ್ದು ಇದನ್ನು ಗಂಭೀರವಾಗಿ ಪರಿಗಣಿಸಿ ಪರವಾನಗಿ ನೀಡಿದ 1.25ಲಕ್ಷ ಆಟೋಗಳಿಗಿಂತ 30ಸಾವಿರಕ್ಕೂ ಹೆಚ್ಚು ಆಟೋಗಳು ಸಂಚರಿಸುತ್ತಿರುವುದು ಬೆಳಕಿಗೆ ಬಂದಿದೆ.
ಒಂದೇ ಪರವಾನಗಿಯಲ್ಲಿ ನಾಲ್ಕೈದು ಆಟೋಗಳು ಸಂಚರಿಸುತ್ತಿರುವುದಕ್ಕೆ ಕಡಿವಾಣ ಹಾಕಲು ನೂತನ ಸಾಫ್ಟ್ ವೇರನ್ನು ಸಿದ್ಧಪಡಿಸಲಾಗುತ್ತಿದೆ. ಜನವರಿ ತಿಂಗಳೊಳಗೆ ಎಲ್ಲಾ ಆಟೋ ಚಾಲಕರು ತಮ್ಮ ಪರವಾನಗಿಗೆ ಆಧಾರ್ ಲಿಂಕ್ ಮಾಡಬೇಕೆಂದು ಸಾರಿಗೆ ಆಯುಕ್ತ ದಯಾನಂದ್ ತಿಳಿಸಿದ್ದಾರೆ. ಈಗಾಗಲೇ ಆಟೋ ಲೈಸೆನ್ಸ್ ಗೆ ಆಧಾರ್ ಕಾರ್ಡ್ ನೋಂದಣಿ ಕಾರ್ಯ ಪ್ರಗತಿಯಲ್ಲಿದ್ದು, ಜನವರಿಯೊಳಗೆ ಆಧಾರ್ ನೋಂದಣಿ ಮಾಡದಿದ್ದರೆ ಪರಾವನಗಿಯನ್ನು ರದ್ದುಗೊಳಿಸಲಾಗುವುದು ಎಂದು ಎಚ್ಚರಿಸಿದ್ದಾರೆ.