ಆದಾಯ ತೆರಿಗೆ ಮಿತಿ ಬದಲಾಗುತ್ತಾ..? ಇಲ್ಲದೆ ನೋಡಿ ಹೊಸ ತೆರಿಗೆ ಮಿತಿ ವಿವರಗಳು
ಬೆಂಗಳೂರು. ಡಿ.19 : ನೋಟು ನಿಷೇಧ ಜಾರಿ ಬಳಿಕ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಆದಾಯ ತೆರಿಗೆ ಮಿತಿಯಲ್ಲಿ ಬದಲಾವಣೆ ಮಾಡುವ ಸಾಧ್ಯತೆ ಇದೆ. ಈ ಮೂಲಕ ಐನೂರು ಮತ್ತು ಸಾವಿರ ರೂಪಾಯಿ ನೋಟು ನಿಷೇಧದಿಂದ ಟೀಕೆಗೆ ಒಳಗಾಗಿರುವ ಕೇಂದ್ರ ಸರ್ಕಾರ ತೆರಿಗೆ ಖುಷಿ ನೀಡಲು ಚಿಂತಿಸುತ್ತಿದೆ ಎನ್ನಲಾಗಿದೆ. ಈ ವರದಿಯ ಪ್ರಕಾರ ಈಗಿರುವ ಆದಾಯ ತೆರಿಗೆ ವಿನಾಯಿತಿ ಮಿತಿ ವಾರ್ಷಿಕ ಎರಡೂವರೆ ಲಕ್ಷ ರೂಪಾಯಿಯಿಂದ ನಾಲ್ಕು ರೂಪಾಯಿಗೆ ಏರಿಕೆಯಾಗಲಿದೆ. ವಿಶೇಷ ಎಂದರೆ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಘೋಷಣೆಯಾಗುವುದಕ್ಕೂ ಮೊದಲೇ ಆದಾಯ ತೆರಿಗೆ ಮಿತಿ ಹೆಚ್ಚಳದ ಬಗ್ಗೆ ನಿರ್ಧಾರ ಪ್ರಕಟವಾಗಲಿದೆ ಎನ್ನಲಾಗಿದೆ.
ಮೂಲಗಳ ಪ್ರಕಾರ ನಾಲ್ಕು ಲಕ್ಷ ರೂಪಾಯಿವರೆಗೆ ಯಾವುದೇ ಆದಾಯ ತೆರಿಗೆ ಇರಲ್ಲ. ನಾಲ್ಕು ಲಕ್ಷ ರೂಪಾಯಿಯಿಂದ 10 ಲಕ್ಷ ರೂಪಾಯಿವರೆಗೆ ವಾರ್ಷಿಕ ಆದಾಯ ಹೊಂದಿರುವವರಿಗೆ ಶೇಕಡಾ 10ರಷ್ಟು ತೆರಿಗೆ ವಿಧಿಸಲಾಗುತ್ತದೆ. 10 ಲಕ್ಷ ರೂಪಾಯಿಯಿಂದ 15 ಲಕ್ಷ ರೂಪಾಯಿವರೆಗಿನ ಆದಾಯಕ್ಕೆ ಶೇಕಡಾ 15ರಷ್ಟು ಕರ ವಿಧಿಸಲಾಗುತ್ತದೆ. 15 ಲಕ್ಷ ರೂಪಾಯಿಯಿಂದ 20 ಲಕ್ಷ ರೂಪಾಯಿವರೆಗೆ ಶೇಕಡಾ 20ರಷ್ಟು, 20 ಲಕ್ಷ ರೂಪಾಯಿಯಿಂದ ಮೇಲ್ಪಟ್ಟ ಆದಾಯಕ್ಕೆ ಶೇಕಡಾ 30ರಷ್ಟು ತೆರಿಗೆ ವಿಧಿಸುವ ಸಾಧ್ಯತೆ ಇದೆ ಸುದ್ದಿವಾಹಿನಿ ವರದಿ ಮಾಡಿದೆ.
ಪ್ರಸ್ತುತ ತೆರಿಗೆ ಮಿತಿ ಏನಿದೆ..?
ಸದ್ಯ ಎರಡೂವರೆ ಲಕ್ಷ ರೂಪಾಯಿವರೆಗಿನ ವಾರ್ಷಿಕ ಆದಾಯಕ್ಕೆ ತೆರಿಗೆ ವಿನಾಯಿತಿ ನೀಡಲಾಗಿದೆ. ಎರಡೂವರೆ ಲಕ್ಷ ರೂಪಾಯಿಯಿಂದ ಐದು ಲಕ್ಷ ರೂಪಾಯಿವರೆಗಿನ ಆದಾಯಕ್ಕೆ ಶೇಕಡಾ 10ರಷ್ಟು, ಐದು ಲಕ್ಷದಿಂದ 10 ಲಕ್ಷ ರೂಪಾಯಿವರೆಗಿನ ಆದಾಯಕ್ಕೆ ಶೇಕಡಾ 20ರಷ್ಟು ಮತ್ತು 10 ಲಕ್ಷ ರೂಪಾಯಿಗಿಂತ ಮೇಲ್ಪಟ್ಟ ಆದಾಯಕ್ಕೆ ಶೇಕಡಾ 30ರಷ್ಟು ತೆರಿಗೆ ವಿಧಿಸಲಾಗಿದೆ.
ಜೇಟ್ಲಿ ಸುಳಿವು :
ಡಿಸೆಂಬರ್ 14ರಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿಯವರು ಮುಂಬರುವ ಬಜೆಟ್ನಲ್ಲಿ ಆದಾಯ ತೆರಿಗೆ ಮತ್ತು ಪರೋಕ್ಷ ತೆರಿಗೆಯನ್ನು ಇಳಿಸುವ ಬಗ್ಗೆ ಮುನ್ಸೂಚನೆ ನೀಡಿದ್ದಾರೆ. ನೋಟು ನಿಷೇಧ ಮತ್ತು ಡಿಜಿಟಲ್ ಪಾವತಿಯ ಹಿನ್ನೆಲೆಯಲ್ಲಿ ತೆರಿಗೆ ಪಾವತಿದಾರರ ಪ್ರಮಾಣ ಹೆಚ್ಚಳವಾಗಬಹುದಾದ ಹಿನ್ನೆಲೆಯಲ್ಲಿ ತೆರಿಗೆ ಇಳಿಸುವ ಮೂಲಕ ಜನಸಾಮಾನ್ಯರಿಗೆ ಲಾಭ ಮಾಡಿಕೊಡುವ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದರು.
Eesanje News 24/7 ನ್ಯೂಸ್ ಆ್ಯಪ್ – Click Here to Download