‘ಆಪರೇಷನ್ ಕಮಲ’ ವಿರೋಧಿಸಿದ್ದ ಕಾಂಗ್ರೆಸ್’ನಿಂದ ಈಗ ‘ಆಪರೇಷನ್ ಕಾಂಗ್ರೆಸ್‍’

Spread the love

Operation-congress

ಬೆಂಗಳೂರು, ಅ.30– ಕಳೆದ 2008ರ ವಿಧಾನಸಭೆ ಚುನಾವಣೆ ನಂತರ ಸರ್ಕಾರ ಉಳಿಸಿಕೊಳ್ಳಲು ಬಿಜೆಪಿ ನಡೆಸಿದ್ದ ಆಪರೇಷನ್ ಕಮಲಕ್ಕೆ ಎಲ್ಲೆಡೆ ವ್ಯಾಪಕ ಟೀಕೆ ಕೇಳಿಬಂದಿತ್ತು. ಅಂದು ಆಪರೇಷನ್ ಕಮಲ ಪ್ರಜಾತಂತ್ರ ವ್ಯವಸ್ಥೆಗೆ ಮಾರಕ ಎಂದು ಅಬ್ಬರಿಸಿದ್ದ ಕಾಂಗ್ರೆಸ್ ಇದೀಗ ಮೈಸೂರು ಜಿಲ್ಲೆಯಲ್ಲಿ ಆಪರೇಷನ್ ಕಾಂಗ್ರೆಸ್‍ಗೆ ಮುಂದಾಗಿದೆ. ರಾಷ್ಟ್ರದ ಗಮನ ಸೆಳೆಯಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ತವರು ಜಿಲ್ಲೆ ಮೈಸೂರಿನ ನಂಜನಗೂಡು ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಆಡಳಿತಾರೂಢ ಕಾಂಗ್ರೆಸ್‍ಗೆ ಅಗ್ನಿಪರೀಕ್ಷೆಯಾಗಲಿದೆ. ಇನ್ನು ಕಾಂಗ್ರೆಸ್‍ನಿಂದ ಸಿಡಿದೆದ್ದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಶ್ರೀನಿವಾಸ ಪ್ರಸಾದ್‍ಗೆ ಇದು ಅಳಿವು ಉಳಿವಿನ ಪ್ರಶ್ನೆ. ಶತಾಯ-ಗತಾಯ ಕ್ಷೇತ್ರ ಉಳಿಸಿಕೊಳ್ಳಲು ಉಭಯ ನಾಯಕರು ಈಗಾಗಲೇ ಎಲ್ಲ ರೀತಿಯ ಸಿದ್ಧತೆ ನಡೆಸಿದ್ದಾರೆ.

ಈ ಉಪಚುನಾವಣೆಯಲ್ಲಿ ಶತಾಯ-ಗತಾಯ ಶ್ರೀನಿವಾಸ ಪ್ರಸಾದ್ ಸೋಲಿಸಲೇಬೇಕೆಂದು ಪಣ ತೊಟ್ಟಿರುವ ಸಿದ್ದರಾಮಯ್ಯ ಇದಕ್ಕಾಗಿ ಮೈಸೂರು ಜಿಲ್ಲೆಯಲ್ಲಿರುವ ಕೆಲವು ಪ್ರಭಾವಿ ಬಿಜೆಪಿ ನಾಯಕರನ್ನು ಸೆಳೆಯಲು ತೆರೆಮರೆಯಲ್ಲಿ ಕಸರತ್ತು ನಡೆಸಿದ್ದಾರೆ. ಈ ಹಿಂದೆ ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರದಿಂದ ಎರಡು ಬಾರಿ ಸ್ಪರ್ಧಿಸಿ ಪರಾಭವಗೊಂಡಿದ್ದ ಈ ಭಾಗದ ಪ್ರಭಾವಿ ದಲಿತ ಮುಖಂಡ ಎ.ಆರ್.ಕೃಷ್ಣಮೂರ್ತಿ, ಮಾಜಿ ಶಾಸಕ ನಂಜುಂಡಸ್ವಾಮಿ ಸೇರಿದಂತೆ ಮತ್ತಿತರರನ್ನು ಪಕ್ಷಕ್ಕೆ ಸೇರ್ಪಡೆಯಾಗಲು ಖುದ್ದು ಮುಖ್ಯಮಂತ್ರಿಯವರೇ ಆಹ್ವಾನ ಕೊಟ್ಟಿದ್ದಾರೆ.

ಒಂದು ವೇಳೆ ಎ.ಆರ್.ಕೃಷ್ಣಮೂರ್ತಿ ಪಕ್ಷಕ್ಕೆ ಸೇರ್ಪಡೆಯಾಗುವುದಾದರೆ ಸ್ವತಃ ಅವರನ್ನೇ ನಂಜನಗೂಡು ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಕಾಂಗ್ರೆಸ್‍ನ ಅಭ್ಯರ್ಥಿಯನ್ನಾಗಿ ಮಾಡುವ ಆಶ್ವಾಸನೆ ಕೊಡಲಾಗಿದೆ. ಇದರ ಸುಳಿವು ಅರಿತಿರುವ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಈಗಾಗಲೇ ಎ.ಆರ್.ಕೃಷ್ಣಮುರ್ತಿ ಜತೆ ಮಾತುಕತೆ ನಡೆಸಿ ಯಾವುದೇ ಕಾರಣಕ್ಕೂ ಪಕ್ಷ ಬಿಟ್ಟು ಹೋಗಬಾರದೆಂದು ಮನವಿ ಮಾಡಿದ್ದಾರೆ. 2018ರ ವಿಧಾನಸಭೆ ಚುನಾವಣೆಯಲ್ಲಿ ನಿಮ್ಮನ್ನು ಕೊಳ್ಳೇಗಾಲ ಮೀಸಲು ವಿಧಾನಸಭಾ ಕ್ಷೇತ್ರದಿಂದ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲಾಗುವುದು. ಪಕ್ಷ ಬಿಡುವ ತೀರ್ಮಾನ ಕೈಗೊಳ್ಳಬಾರದೆಂದು ಕಿವಿಮಾತು ಹೇಳಿದ್ದಾರೆ.

ಎ.ಆರ್.ಕೃಷ್ಣಮೂರ್ತಿ ಜತೆ ಸಿದ್ದರಾಮಯ್ಯ ಈಗಲೂ ಉತ್ತಮ ಒಡನಾಟ ಹೊಂದಿದ್ದಾರೆ. ಚಾಮರಾಜನಗರ ಲೋಕಸಭಾ ಕ್ಷೇತ್ರದ ಸಂಸದ ಆರ್.ಕೆ.ಧೃವನಾರಾಯಣ್ ಕೂಡ ಎಆರ್‍ಕೆ ಅವರನ್ನು ಪಕ್ಷಕ್ಕೆ ಸೆಳೆಯಲು ಮುಂದಾಗಿದ್ದಾರೆ. ಇನ್ನು ನಂಜನಗೂಡಿನಲ್ಲಿರುವ ಮಾಜಿ ಸಚಿವರಾದ ಬೆಂಕಿ ಮಹದೇವು, ಡಿ.ಟಿ.ಜಯಕುಮಾರ್ ಸಂಬಂಧಿಕರನ್ನು ಸೆಳೆಯಲು ಸ್ಥಳೀಯ ಕಾಂಗ್ರೆಸ್ ನಾಯಕರು ಗಾಳ ಹಾಕಿದ್ದಾರೆ. ಈಗಾಗಲೇ ನಂಜನಗೂಡಿನಲ್ಲಿ ಬೀಡು ಬಿಟ್ಟಿರುವ ಪ್ರಭಾವಿ ಸಚಿವರೊಬ್ಬರು ಬಿಜೆಪಿ ಮತ್ತು ಜೆಡಿಎಸ್ ನಾಯಕರ ಆಪರೇಷನ್‍ಗೆ ವೇದಿಕೆ ಸಿದ್ಧಪಡಿಸಿದ್ದಾರೆ. ಕಾಂಗ್ರೆಸ್‍ನ ಪ್ರತಿಯೊಂದು ಚಲನ-ವಲನಗಳನ್ನೂ ಸೂಕ್ಷ್ಮವಾಗಿ ಗಮನಿಸುತ್ತಿರುವ ಬಿಜೆಪಿ ತನ್ನ ಪಕ್ಷದ ಯಾವುದೇ ನಾಯಕರು ಕಾಂಗ್ರೆಸ್ ತೆಕ್ಕೆಗೆ ಹೋಗದಂತೆ ಎಚ್ಚರಿಕೆ ವಹಿಸಬೇಕೆಂದು ಸಂಸದ ಪ್ರತಾಪ್ ಸಿಂಹ, ಮಾಜಿ ಸಚಿವರಾದ ಎ.ರಾಮದಾಸ್ ಮತ್ತಿತರರಿಗೆ ಸೂಚನೆ ಕೊಡಲಾಗಿದೆ.

► Follow us on –  Facebook / Twitter  / Google+

Facebook Comments

Sri Raghav

Admin