ಆಮ್ನೆಸ್ಟಿ ಘೋಷಣೆ, ಸೈನಿಕರಿಗೆ ಅವಮಾನ ಖಂಡಿಸಿ ಎಬಿವಿಪಿ ರಾಜಭವನ ಚಲೋ

ABVP-001 ಬೆಂಗಳೂರು,ಆ.22- ವಿವಾದಿತ ಆಮ್ನೆಸ್ಟಿ ಸಂಸ್ಥೆಯನ್ನು ನಿಷೇಧಿಸಬೇಕು. ದೇಶವಿರೋಧಿ ಘೋಷಣೆ, ಭಾಷಣ, ಸೈನಿಕರ ವಿರುದ್ಧ ಅವಮಾನಕರ ಹೇಳಿಕೆ ನೀಡಿದವರನ್ನು ಬಂಧಿಸಿ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಇಂದು ಎಬಿವಿಪಿ ಕಾರ್ಯ ಕರ್ತರು ರಾಜಭವನ ಚಲೋ ನಡೆಸಿದರು.ನಗರದ ಆನಂದ್ರಾವ್ ವೃತ್ತದಿಂದ ಸಾವಿರಾರು ಎಬಿವಿಪಿ ಕಾರ್ಯಕರ್ತರು ರಾಜಭವನ ಚಲೋ ನಡೆಸಲು ಮುಂದಾದಾಗ ಅಪಾರಸಂಖ್ಯೆಯಲಿದ್ದ ಪೊಲೀಸರು ಫ್ರೀಡಂಪಾರ್ಕ್ ಬಳಿ ಅವರನ್ನು ತಡೆದರು. ನಂತರ ಕಾರ್ಯಕರ್ತರು ಮೌರ್ಯ ವೃತ್ತಕ್ಕೆ ಹಿಂದಿರುಗಿ ಪ್ರತಿಭಟನೆ ಮುಂದುರೆಸಿದರು. ಪ್ರತಿಭಟನೆ ನೇತೃತ್ವ ವಹಿಸಿದ್ದ ಕೆಲ ಮುಖಂಡರು ರಾಜಭವನಕ್ಕೆ ತೆರಳಿ ಮನವಿ ಸಲ್ಲಿಸಿದರು.

ಕಳೆದ 48 ಗಂಟೆಗಳಿಂದ ಗಾಂಧಿ ಪ್ರತಿಮೆ ಬಳಿ ಅಹೋರಾತ್ರಿ ಧರಣಿ ನಡೆಸುತ್ತಿದ್ದ ಎಬಿವಿಪಿ ಕಾರ್ಯಕರ್ತರು ಇಂದು ರಾಜಭವನ ಚಲೋ ನಡೆಸಲು ಮುಂದಾದಾಗ ಮೈಸೂರ್ಬ್ಯಾಂಕ್ ವೃತ್ತ, ಚಾಲುಕ್ಯ ಸರ್ಕಲ್, ರೇಸ್ಕೋರ್ಸ್ ರಸ್ತೆ ಸೇರಿದಂತೆ ಹಲವೆಡೆ ಟ್ರಾಫಿಕ್ ಜಾಮ್ ಉಂಟಾಗಿ ಸಾರ್ವಜನಿಕರ ಸಂಚಾರಕ್ಕೆ ಅಡಚಣೆಯಾಯಿತು. ದೇಶ ವಿರೋಧಿ ಘೋಷಣೆ ಕೂಗಿ ಸೈನಿಕರಿಗೆ ಅವಮಾನ ಮಾಡಿರುವವರನ್ನು ಬಂಧಿಸದೆ ಆಮ್ನೆಸ್ಟಿ ಸಂಸ್ಥೆಯನ್ನು ಸರ್ಕಾರ ಬೆಂಬಲಿಸುತ್ತಿದೆ ಎಂದು ಆರೋಪಿಸಿದ ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದರು.

ABVP-002

ಇಂದಿನ ಎಬಿವಿಪಿ ಪ್ರತಿಭಟನೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ವಿಧಾನಸಭೆ ಪ್ರತಿಪಕ್ಷದ ನಾಯಕ ಜಗದೀಶ್ ಶೆಟ್ಟರ್, ಉಪ ನಾಯಕ ಆರ್.ಅಶೋಕ್, ಸೋಮಣ್ಣ, ಎಬಿವಿಪಿ ಮುಖಂಡರಾದ ವಿನಯ್ಬಿದರೆ, ಎ.ಎಚ್.ಆನಂದ್, ನಿವೃತ್ತ ಸೈನಿಕರು ಸೇರಿದಂತೆ ಹಲವು ಮುಖಂಡರು ಭಾಗವಹಿಸಿ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡರು.  ಜಗದೀಶ್ ಶೆಟ್ಟರ್ ಮಾತನಾಡಿ, ಆಮ್ನೆಸ್ಟಿ ಸಂಸ್ಥೆಯನ್ನು ನಿಷೇಧಿಸಬೇಕು, ತಪ್ಪಿತಸ್ಥರನ್ನು ಕೂಡಲೇ ಬಂಧಿಸಬೇಕೆಂದು ಆಗ್ರಹಿಸಿದರು.  ಈ ಪ್ರಕರಣದಲ್ಲಿ ಗೃಹ ಸಚಿವರು ಉಡಾಫೆಯ ಉತ್ತರ ನೀಡಿದ್ದಾರೆ. ತನಿಖೆಗೂ ಮುನ್ನವೇ ಕ್ಲೀನ್ಚಿಟ್ ಕೊಟ್ಟಿದ್ದಾರೆ. ಈ ಹಿಂದೆ ಗೃಹ ಸಚಿವರಾಗಿದ್ದ ಜಾರ್ಜ್ ಕೂಡ ಇದೇ ರೀತಿ ಉಡಾಫೆಯಾಗಿ ವರ್ತಿಸಿದ್ದರಿಂದ ಅವರು ರಾಜೀನಾಮೆ ನೀಡುವಂತಹ ಪರಿಸ್ಥಿತಿ ನಿರ್ಮಾಣವಾಯಿತು. ಪರಮೇಶ್ವರ್ ಅವರು ಇದೇ ರೀತಿ ವರ್ತಿಸಿದರೆ ಅವರೂ ಕೂಡ ರಾಜೀನಾಮೆ ನೀಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಜೆ.ಸಿ.ನಗರ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣದ ಬಗ್ಗೆ ಎಫ್ಐಆರ್ ದಾಖಲಾಗಿದೆ. ಆದರೆ, ಈ ಸಂಬಂಧ ಯಾವುದೇ ಸಾಕ್ಷ್ಯಾಧಾರಗಳಿಲ್ಲ. ಆಮ್ನೆಸ್ಟಿ ಸಂಸ್ಥೆ ದೇಶ ದ್ರೋಹ ಮಾಡಿಲ್ಲ ಎಂದು ಗೃಹ ಸಚಿವರು ಹೇಳುತ್ತಾರೆ. ಇದು ಅವರ ದ್ವಂದ್ವ ನಿಲುವು ಎಂದು ತಿಳಿಸಿದರು.  ಘಟನೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಎಬಿವಿಪಿಯವರು ದೂರು ಕೊಟ್ಟಿದ್ದರು. ಘಟನೆಯ ಬಗ್ಗೆ ಸಾಕ್ಷ್ಯಾಧಾರಗಳನ್ನು ಒದಗಿಸಿದ್ದರು. ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನ ಮಾಡುತ್ತಿದೆ ಎಂದು ಹೇಳಿದರು. ಎಬಿವಿಪಿ ಮುಖಂಡ ವಿನಯ್ಬಿದರೆ ಮಾತನಾಡಿ, ಲಾಠಿಗೆ ಮಣಿಯುವುದಿಲ್ಲ. ಹೋರಾಟವನ್ನು ಬಿಡುವುದಿಲ್ಲ. ಸಂಘಟನೆಯನ್ನು ನಿಷೇಧಿಸಿ ದೇಶದ್ರೋಹಿಗಳನ್ನು ಬಂಧಿಸುವವರೆಗೂ ನಾವು ಹೋರಾಟ ನಡೆಸುತ್ತೇವೆ. ರಾಜ್ಯಾದ್ಯಂತ ನಮ್ಮ ಹೋರಾಟವನ್ನು ತೀವ್ರಗೊಳಿಸುತ್ತೇವೆ ಎಂದು ತಿಳಿಸಿದರು. ಆರ್.ಅಶೋಕ್, ವಿ.ಸೋಮಣ್ಣ ಅವರು ಸರ್ಕಾರದ ಕ್ರಮವನ್ನು ತೀವ್ರವಾಗಿ ಖಂಡಿಸಿದರು.

ಕಳೆದ ನಾಲ್ಕೈದು ದಿನಗಳಿಂದ ಎಬಿವಿಪಿ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ರಾಜಭವನ, ಮೌರ್ಯ ವೃತ್ತ ಜಂಕ್ಷನ್, ಫ್ರೀಡಂಪಾರ್ಕ್, ಚಾಲುಕ್ಯ ವೃತ್ತ ಬಳಿ 10 ಕೆಎಸ್ಆರ್ಪಿ ತುಕಡಿ ಹಾಗೂ ವಾಟರ್ಜೆಟ್ಗಳನ್ನು ನಿಯೋಜಿಸಲಾಗಿತ್ತು. ಇಬ್ಬರು ಡಿಸಿಪಿ, ಐವರು ಎಸಿಪಿ, 15 ಇನ್ಸ್ಪೆಕ್ಟರ್, ಮಹಿಳಾ ಕಾನ್ಸ್ಟೆಬಲ್ಗಳೂ ಸೇರಿದಂತೆ 300ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.

► Follow us on –  Facebook / Twitter  / Google+

Sri Raghav

Admin